ಶಿವಮೊಗ್ಗ : ಪೊಲೀಸ್ ಠಾಣೆಯಲ್ಲಿಯೇ ಮಹಿಳಾ ಪೇದೆಗೆ ಸೀಮಂತ ಶಾಸ್ತ್ರ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕವಿತಾ ಅವರು ಗರ್ಭಿಣಿಯಾಗಿದ್ದು, ಈ ಹಿನ್ನೆಲೆಯಲ್ಲಿ ಠಾಣಾ ಸಿಬ್ಬಂದಿ ಬಹಳ ಪ್ರೀತಿಯಿಂದ ಸೀಮಂತ ಶಾಸ್ತ್ರ ಮಾಡಿದ್ದಾರೆ. ಒಂಬತ್ತು ತಿಂಗಳ ಗರ್ಭಿಣಿಯಾಗಿರುವ ಕವಿತಾ ಎರಡನೇ ಮಗುವಿಗೆ ಜನ್ಮನೀಡಲಿದ್ದಾರೆ.
ಪೊಲೀಸರು ಸಹೋದ್ಯೋಗಿಯ ಸೀಮಂತ ಕಾರ್ಯಕ್ಕೆ ಗ್ರಾಮದ ಮುತ್ತೈದೆಯರನ್ನು ಕರೆಸಿದ್ದರು. ಮುಡಿ ತುಂಬಿಸಿ, ಬಳೆ, ಸೀರೆ, ಅರಿಶಿನ-ಕುಂಕುಮ ನೀಡಿ ಮುತ್ತೈದೆಯರು ಆಶೀರ್ವದಿಸಿದ್ದಾರೆ.
ಠಾಣೆಯ ಪಿಎಸ್ಐ ಜಗದೀಶ್ ಸಿಬ್ಬಂದಿ ಜೊತೆ ಸೇರಿ ಕವಿತಾ ಅವರ ಸೀಮಂತ ನಡೆಸಿರುವುದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಕವಿತಾ ಅವರ ಪತಿ ಶಿವಕುಮಾರ್, ಹೊನ್ನಾಳಿ ತಾಲೂಕಿನ ಬೆಳಗುತ್ತಿಯಲ್ಲಿ ಶಿಕ್ಷಕರಾಗಿದ್ದು, ಪತ್ನಿಗೆ ಠಾಣೆಯಲ್ಲಿ ಸೀಮಂತ ಕಾರ್ಯ ನಡೆಸಿದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಕವಿತಾ ನಿನ್ನೆಯವರೆಗೆ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸದ್ಯ ಹೆರಿಗೆ ರಜೆಯಲ್ಲಿದ್ದಾರೆ.