ಶಿವಮೊಗ್ಗ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುಳ್ಳು ಹೇಳುವುದರಲ್ಲಿ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ಪರಿಸ್ಥಿತಿಯಿಂದ ಸಿದ್ದರಾಮಯ್ಯ ಬೆತ್ತಲೆ ಆಗುತ್ತಾರೆ. ಸಿದ್ದರಾಮಯ್ಯ ಶ್ವೇತ ಪತ್ರ ಹೊರಡಿಸಿದ್ದಾರಾ..? ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ಪಕ್ಷ 40 ಪರ್ಸೆಂಟ್ ಅಂತ ಹೇಳಿದ್ದಾರೆ. ಕಣ್ಣುಮುಚ್ಚಿ ಕುಳಿತಿರುವ ಕಾಂಗ್ರೆಸ್ ಏಜೆಂಟ್ ಕೆಂಪಣ್ಣ ಏನು ಮಾಡುತ್ತಿದ್ದಾರೆ..? ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕೆಂಪಯ್ಯನೂ ಕಾರಣ. ಸರ್ಕಾರ ಬಂದು ಏಳು ತಿಂಗಳು ಆಗಿದೆ. ರಸ್ತೆಗಳಿಗೆ ಒಂದು ಬುಟ್ಟಿ ಮಣ್ಣು ಹಾಕಿದ್ದಾರಾ..? ರಾಜ್ಯದಲ್ಲಿ ರಸ್ತೆಗಳು ಹಾಳಾಗಿದೆ ಎಂದು ಕಿಡಿಕಾರಿದ್ದಾರೆ.
ಜಾತಿ ಜಾತಿಗಳನ್ನು ಛಿದ್ರ ಮಾಡಿದ್ದಾರೆ
ನಮ್ಮ ಸರ್ಕಾರದಲ್ಲಿ ಆಗಿರುವ ಕೆಲಸಗಳಿಗೆ ಇನ್ನೂ ಅನುದಾನ ಬಿಡುಗಡೆ ಆಗಿಲ್ಲ. ಒಂಬತ್ತು ವರ್ಷದಿಂದ ಜಾತಿ ಗಣತಿ ಬಿಡುಗಡೆ ಮಾಡುತ್ತೇನೆ ಎನ್ನುತ್ತಿದ್ದಾರೆ. ಲೋಕಸಭಾ ಚುನಾವಣೆ ಆಗುವ ತನಕ ಜಾತಿ ಗಣತಿ ಬಿಡುಗಡೆ ಆಗಲ್ಲ. ದೇಶ ಛಿದ್ರ ಮಾತ್ರ ಮಾಡಿಲ್ಲ ಜಾತಿ ಜಾತಿಗಳನ್ನು ಛಿದ್ರ ಮಾಡಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಬಜೆಟ್ ಸಂತೋಷದಿಂದ ಸ್ವಾಗತಿಸುತ್ತೇನೆ
ಮಧ್ಯಂತರ ಬಜೆಟ್ ಅನ್ನು ಸಂತೋಷದಿಂದ ಸ್ವಾಗತ ಮಾಡುತ್ತೇನೆ. ಜನಸಾಮಾನ್ಯರಿಗೆ ಬೇಕಾದ ಬಜೆಟ್ ಇದಾಗಿದೆ. ಹೆಣ್ಣು ಮಕ್ಕಳಿಗೆ, ಬಡವರಿಗೆ, ರೈತರಿಗೆ, ಯುವಕರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.


