ಬೆಂಗಳೂರು : ನನ್ನ ವಿರುದ್ಧ ನಡೆಯುವ ಷಡ್ಯಂತ್ರ, ಪಿತೂರಿಗಳಿಗೆ ಫಲ ದೊರಕುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆರೋಪಕ್ಕೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಕೃಷಿಯನ್ನೇ ನಂಬಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಶೇ.70 ರಷ್ಟು ಜನರು ಜೀವನ ನಡೆಸುತ್ತಿದ್ದಾರೆ. ಇಂತಹ ಮಹತ್ವದ ಕ್ಷೇತ್ರದಲ್ಲಿ ಒಂದಷ್ಟು ಸೇವೆ ಮಾಡುವ ಅವಕಾಶ ನನಗೆ ರಾಜಕೀಯವಾಗಿ ದೊರೆತಿದೆ. ಆದರೆ, ಹೇಗಾದರೂ ಮಾಡಿ ನನ್ನನ್ನು ರಾಜಕೀಯವಾಗಿ ತುಳಿಯುವ ಉದ್ದೇಶದಿಂದ ಬಹಳ ವ್ಯವಸ್ಥಿತವಾಗಿ ಷಡ್ಯಂತ್ರ ಮತ್ತು ಪಿತೂರಿ ನಡೆಯುತ್ತಿದೆ ಎಂದು ಕುಟುಕಿದ್ದಾರೆ.
ಕುತಂತ್ರಗಳು ಫಲ ನೀಡುವುದಿಲ್ಲ
ನನ್ನ ಬಗ್ಗೆ ಬಹಳ ದ್ವೇಷ ಹೊಂದಿರುವ ಜನ ಹೇಗಾದರೂ ಸರಿ ನನ್ನ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಈ ಭಾಗವಾಗಿ ನಕಲಿ ಪತ್ರಗಳನ್ನು ಸೃಷ್ಟಿಸಿ, ಸದರಿ ನಕಲಿ ಪತ್ರಗಳ ಆಧಾರದ ಮೇಲೆ ನೌಕರರನ್ನು ನೆಪವಾಗಿಸಿ ಷಡ್ಯಂತ್ರ ರೂಪಿಸುತ್ತಿದ್ದಾರೆ. ಈ ಷಡ್ಯಂತ್ರದ ಹಿಂದಿರುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಲಿದೆ. ಸತ್ಯಕ್ಕೆ ದೂರವಾಗಿರುವ ಅವರ ಈ ಯಾವ ಕುತಂತ್ರಗಳು ಫಲ ನೀಡುವುದಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ನನ್ನ ವಿರುದ್ದ ನಡೆಯುವ ಷಡ್ಯಂತ್ರ, ಪಿತೂರಿಗಳಿಗೆ ಫಲದೊರಕುವುದಿಲ್ಲ.
ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಕೃಷಿಯನ್ನೇ ನಂಬಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶೇ.70 ರಷ್ಟು ಜನರು ಜೀವನ ನಡೆಸುತ್ತಿದ್ದಾರೆ. ಇಂತಹ ಮಹತ್ವದ ಕ್ಷೇತ್ರದಲ್ಲಿ ಒಂದಷ್ಟು ಸೇವೆ ಮಾಡುವ ಅವಕಾಶ ನನಗೆ ರಾಜಕೀಯವಾಗಿ ದೊರೆತಿದೆ. ನಾನೂ ಸಹ ಕೃಷಿಕ ಕುಟುಂಬದ ಒಬ್ಬ… pic.twitter.com/AHnHE0dnpI
— N Chaluvarayaswamy (@Chaluvarayaswam) August 8, 2023
ಸರ್ಕಾರಗಳ ಬದಲಾವಣೆ ಆದಾಗ ಸರ್ಕಾರಿ ನೌಕರರ ವರ್ಗಾವಣೆ ಒಂದು ಸಾಮಾನ್ಯ ಪ್ರಕ್ರಿಯೆ. ಇದು ಎಲ್ಲಾ ಹೊಸ ಸರ್ಕಾರಗಳು ಬಂದಾಗಲೂ ಸಹಜವಾಗಿ ನಡೆದಿವೆ. ಆದರೆ ವೈಯಕ್ತಿಕವಾಗಿ ನಾನು ಮೊದಲಿನಿಂದಲೂ ಈ ಪ್ರಕ್ರಿಯೆಯಲ್ಲಿ ಈ ಬಗ್ಗೆ ಹೆಚ್ಚಿನ ಗಮನ ಕೊಟ್ಟಿಲ್ಲ ಎಂದು ಹೇಳಿದ್ದಾರೆ.


