Tuesday, August 26, 2025
Google search engine
HomeUncategorizedಅಮೆರಿಕ ಅಧ್ಯಕ್ಷ ಜೊ ಬಿಡೆನ್​​​ ಹಾಗು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ನಡುವೆ ಭಿನ್ನಮತ

ಅಮೆರಿಕ ಅಧ್ಯಕ್ಷ ಜೊ ಬಿಡೆನ್​​​ ಹಾಗು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ನಡುವೆ ಭಿನ್ನಮತ

ಅಮೆರಿಕ ಅಧ್ಯಕ್ಷ ಜೊ ಬಿಡೆನ್​​​ ಹಾಗು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ನಡುವೆ ಭಿನ್ನಮತ ಏರ್ಪಟ್ಟಿದೆ ಅಂತ ಅಮೆರಿಕದಾದ್ಯಂತ ಬಹಳ ದೊಡ್ಡಮಟ್ಟದ ಗಾಳಿ ಸುದ್ಧಿ ಹರಡುತ್ತಿದೆ. ಈ ಬಗ್ಗೆ ಅಮೆರಿಕಾ ಅಧ್ಯಕ್ಷರು ಯಾವುದೇ ಹೇಳಿಕೆ ನೀಡದೆ ಇರೋದು ಈಗ ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ರಾಜಕೀಯದ ಅಸ್ಥಿರತೆ ಕಾಡೋದಕ್ಕೆ ಶುರುವಾಗಿದ್ಯಾ ಅನ್ನೋ ಅನುಮಾನ ಶುರುವಾಗಿದೆ.

ಒಂದು ಕಾಲದಲ್ಲಿ ವಿಶ್ವದ ದೊಡ್ಡಣ್ಣನಾಗಿ ಗುರುತಿಸಿಕೊಂಡಿದ್ದ ಮಾತ್ರಕ್ಕೆ ಈಗಲೂ ತಾನು ವಿಶ್ವದ ದೊಡ್ಡಣ್ಣನಂತೆ ವರ್ತಿಸುತ್ತಿರೋ ರಾಷ್ಟ್ವವೇ ಅಮೆರಿಕಾ. ತಾನು ಎಲ್ಲದರಲ್ಲೂ ಮುಂದಿರಬೇಕು, ಬೇರೆ ರಾಷ್ಟ್ರಗಳು ತನ್ನ ಹಿಂದೆ ಇರಬೇಕು ಅಂತ ಸದಾ ಅಂದುಕೊಳ್ಳುತ್ತೆ. ಹಾಗಾಗಿ ಜಗತ್ತಿಗೆ ತಾನೊಬ್ಬನೇ ಸರ್ವಾಧಿಕಾರಿಯಾಗಿ ಮೆರೆಯೋದಕ್ಕೆ ಅಮೆರಿಕ ಇಷ್ಟ ಪಡುತ್ತೆ. ಒಂದು ವೇಳೆ ಯಾರಾದ್ರೂ ಅಮೆರಿಕವನ್ನ ಎದುರು ಹಾಕಿಕೊಂಡ್ರೆ ಆ ದೇಶದ ವಿರುದ್ಧ ರಾಜತಾಂತ್ರಿಕವಾಗಿ ಯುದ್ಧ ಸಾರಿ ಬಿಡುತ್ತೆ. ಆ ಮೂಲಕ ಆ ರಾಷ್ಟ್ರ ಅಮೆರಿಕದ ವಿರುದ್ಧ ಧ್ವನಿ ಎತ್ತದಂತೆ ಮಾಡಿ ಬಿಡುತ್ತೆ. ಆದ್ರೆ ಇತ್ತೀಚೆಗೆ ಅಮೆರಿಕದ ಈ ಕುತಂತ್ರಿ ಆಟ ನಡೀತಾ ಇಲ್ಲ. ವಿಶ್ವದ ಬಹುತೇಕ ರಾಷ್ಟ್ರಗಳು ಅಮೆರಿಕದ ಅವಲಂಬನೆಯನ್ನ ಬಿಟ್ಟಿವೆ. ಹಾಗಾಗಿ ಇತ್ತೀಚಿನ ವರ್ಷಗಳಲ್ಲಿ ಅಮೆರಿಕಾ ಎಲ್ಲಾ ದೇಶಗಳೊಂದಿಗೆ ಸ್ನೇಹದ ಹಸ್ತವನ್ನ ಚಾಚೋದಕ್ಕೆ ಮುಂದಾಗಿದೆ.

ಇದೀಗ ಇದೇ ಹಾದಿಯಲ್ಲಿ ಮುಂದುವರೆದಿರುವ ಅಮೆರಿಕಾದ ನಡೆ ಆಕ್ರೋಶಕ್ಕೆ ಕಾರಣವಾಗ್ತಿದೆ. ಆಡಳಿತಾತ್ಮಕವಾಗಿ ಕೆಲವೊಂದು ನಿರ್ಧಾರವನ್ನ ಅಲ್ಲಿನ ಅಧ್ಯಕ್ಷರೇ ಸಂಪೂರ್ಣವಾಗಿ ತೆಗೆದುಕೊಳ್ಳೋದ್ರಿಂದ ಅಲ್ಲಿ ರಾಜಕೀಯವಾದ ತಿಕ್ಕಾಟಗಳು ಶುರುವಾಗಿದೆ. ಇದಕ್ಕೊಂದು ತಾಜಾ ಉದಾಹರಣೆ ಅಂದ್ರೆ, ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಉಪಾಧ್ಯಕ್ಷೆ, ಭಾರತ ಮೂಲದ ಕಮಲಾ ಹ್ಯಾರಿಸ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಅನ್ನೋ ರಿಪೋರ್ಟ್ ಅಮೆರಿಕ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದೆ. ಈ ವರದಿ ಡೆಮಾಕ್ರಟಿಕ್ ಪಕ್ಷ ಸಹಿತ ದೇಶದ ರಾಜಕೀಯ ವಲಯದಲ್ಲಿ ಬಹಳ ದೊಡ್ಡ ಮಟ್ಟಿಗಿನ ಸಂಚಲನವನ್ನು ಸೃಷ್ಟಿಸಿದೆ. ಈ ಬಗ್ಗೆ ಸ್ಪಷ್ಟಪಡಿಸಿರುವ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಇದರಲ್ಲಿ ಯಾವುದೇ ಹುರುಳಿಲ್ಲ ಅಂತ ಸ್ಪಷ್ಟನೆಯನ್ನೂ ನೀಡಿದ್ದಾರೆ. ಈ ಬಗ್ಗೆ ಶ್ವೇತಭವನದ ಹಿರಿಯ ಅಧಿಕಾರಿಗಳು ಕೂಡ ಮಾಹಿತಿಯನ್ನ ನೀಡಿದ್ದಾರೆ. ಹೀಗಾಗಿ ಇಷ್ಟು ದಿನಗಳ ಕಾಲ ಹಬ್ಬಿದ್ದ ಈ ವದಂತಿಗಳಿಗೆ ತೆರೆ ಬಿದ್ದಿದೆ ಅಂತ ಹೇಳಲಾಗ್ತಿದೆ.

ಆದ್ರೆ ಅಮೆರಿಕದ ರಾಜಕೀಯ ತಜ್ಞರು ಹಾಗು ತನಿಖಾ ವರದಿಗಾರರು ಈ ಹೇಳಿಕೆಯನ್ನ ಅಲ್ಲಗಳೆದಿದ್ದು, ಟ್ರಿಲಿಯನ್ ಡಾಲರ್ ಮೂಲಸೌಕರ್ಯ ಮಸೂದೆಗೆ ಸಂಬಂಧಿಸಿದಂತೆ ಉಭಯ ನಾಯಕರ ನಡುವೆ ಭಿನ್ನಮತ ಉಂಟಾಗಿದೆ ಅಂತ ಹೇಳಿದ್ದಾರೆ. ಈ ಬಗ್ಗೆ ಅಮೆರಿಕದ ಖಾಸಗಿ ಸುದ್ಧಿ ವಾಹಿನಿಯೊಂದು ಸುದೀರ್ಘ ವರದಿಯನ್ನ ಕೂಡ ಪ್ರಸಾರ ಮಾಡಿತ್ತು. ಇದರಿಂದ ಜಗತ್ತಿನ ವಿಶ್ವದ ದೊಡ್ಡಣ ಅಂತ ಹೇಳಿ ಬೀಗುವ ಅಮೆರಿಕದಲ್ಲಿ ನಾಯಕತ್ವ ಬಿಕ್ಕಟ್ಟು ಉಂಟಾಗಿದೆ ಅನ್ನೋ ಕಳವಳ ಸೃಷ್ಟಿಯಾಗಿದೆ. ಆದರೆ, ಬಿಡೆನ್ ಮಹತ್ವದ ಮಸೂದೆಗೆ ಸಹಿ ಹಾಕುವುದಕ್ಕೆ ಮುಂಚೆ, ಆ ಕಾರ್ಯಭಾರ ವಹಿಸಿದ್ದಕ್ಕಾಗಿ ಬಿಡೆನ್​ಗೆ ಹ್ಯಾರಿಸ್ ಧನ್ಯವಾದ ಹೇಳಿದ್ದು, ಯಾವುದೇ ಸಮಸ್ಯೆಯಿಲ್ಲ ಎನ್ನುವುದರ ಸೂಚನೆಯಾಗಿದೆ. ಅಷ್ಟು ಮಾತ್ರವಲ್ಲದೆ, ಉಭಯ ನಾಯಕರು ಸುಮಾರು 800 ಅತಿಥಿಗಳ ಮುಂದೆ ಪರಸ್ಪರ ಆಲಿಂಗನ ಮಾಡಿದ್ದು ಕೂಡ ಅವರ ಒಗ್ಗಟ್ಟಿನ ಪ್ರದರ್ಶನದ ಸಂಕೇತ ಅಂತ ಹೇಳಲಾಗ್ತಿದೆ. ಹ್ಯಾರಿಸ್ರನ್ನು ಮೂಲೆಗುಂಪು ಮಾಡುವ ಪ್ರಶ್ನೆಯೇ ಇಲ್ಲ ಎಂದು ಡೆಮಾಕ್ರಟಿಕ್ ಪಕ್ಷ ಹೇಳಿದ್ದು, ಉಪಾಧ್ಯಕ್ಷೆಗೆ ಸಂಪೂರ್ಣ ಬೆಂಬಲ ಘೋಷಿಸಿದೆ.

ಇನ್ನು ಕಮಲಾ ಹ್ಯಾರಿಸ್​ ಹಾಗು ಜೊ ಬಿಡೆನ್​ ನಡುವಿನ ಬಿರುಕಿನ ಸುದ್ದಿಯಿಂದ ರಿಪಬ್ಲಿಕನ್ ಪಕ್ಷದ ನಾಯಕರ ಮೊಗದಲ್ಲಿ ಮಂದಹಾಸ ಮೂಡಿತ್ತು. ಯಾಕಂದ್ರೆ ಡೆಮಾಕ್ರಟಿಕ್ ಪಕ್ಷದಲ್ಲಿ ನಾಯಕತ್ವದ ಉತ್ತರಾಧಿಕಾರಿಯ ಕಲಹ ಈಗಾಗ್ಲೇ ಶುರುವಾಗಿದೆ ಅಂತ ರಿಪಬ್ಲಿಕನ್ನರು ನಂಬಿದ್ರು. ಆದ್ರೆ ಕಮಲಾ ಹ್ಯಾರಿಸ್ ಪ್ರಸ್ತುತ ಆಡಳಿತದ ಪ್ರಮುಖ ಭಾಗವಾಗಿದ್ದಾರೆ ಅಂತ ಹೇಳಿ ಶ್ವೇತಭವನ ವಿವಾದಕ್ಕೆ ಕೊನೆ ಹಾಡಿದ್ದು, ವಿರೋಧ ಪಕ್ಷದಲ್ಲಿ ಮೂಡಿದ್ದ ಸಂತಸಕ್ಕೆ ಎಳ್ಳು ನೀರು ಬಿಟ್ಟಂತಾಗಿದೆ.

ಒಟ್ಟಾರೆಯಾಗಿ ವಿಶ್ವದ ದೊಡ್ಡಣ್ಣ ಅಂತ ಮೆರೆತಿದ್ದ ಅಮೆರಿಕಾಗೆ ಈಗ ನಾಯಕತ್ವದ ಬಿಕ್ಕಟ್ಟು ಶುರುವಾಗೋ ಕಾಲ ಹತ್ತಿರ ಬಂದಿದ್ದು, ಅಮೆರಿಕದ ರಾಜಕೀಯದಲ್ಲಿ ಯಾವ ರೀತಿಯಾದ ಬದಲಾವಣೆ ಬೇಕಾದ್ರೂ ನಡೆಯಬಹುದು ಅನ್ನೋ ಮಾತುಗಳು ಕೇಳಿ ಬರ್ತಾ ಇದೆ. ಹೀಗಾಗಿಯೇ ಈಗ ಅಮೆರಿಕದ ರಾಜಕೀಯ ವಿಶ್ವ ಮಟ್ಟದಲ್ಲಿ ಸಂಚಲನ ಮೂಡಿಸ್ತಾ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments