Sunday, September 14, 2025
HomeUncategorizedಅರಣ್ಯಾಧಿಕಾರಿಗಳಿಂದ ಕಾಫಿ ತೋಟ ತೆರವು-ಬೀದಿಗೆ ಬಿದ್ದ ನೂರಾರು ಕುಟುಂಬಗಳು

ಅರಣ್ಯಾಧಿಕಾರಿಗಳಿಂದ ಕಾಫಿ ತೋಟ ತೆರವು-ಬೀದಿಗೆ ಬಿದ್ದ ನೂರಾರು ಕುಟುಂಬಗಳು

ಚಿಕ್ಕಮಗಳೂರು :  ತಾಲೂಕಿನ ಮಸಗಲಿ ಮೀಸಲು ಅರಣ್ಯದಲ್ಲಿ ಒತ್ತುವರಿ ಮಾಡಿ ಬೆಳೆದಿದ್ದ ಕಾಫಿ ತೋಟಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶುಕ್ರವಾರ ನೆಲಸಮ ಮಾಡಿದರು.

ಮಸಗಲಿ, ಹೇಮರಳ್ಳಿ, ಹಡಗಲುಗದ್ದೆ, ಹೊಸ್ಕೆರಿ ಕಾಲೊನಿಯ 13 ರೈತರಿಗೆ ಸೇರಿದ 24 ಎಕರೆಯಷ್ಟು ಕಾಫಿ ತೋಟದಲ್ಲಿದ್ದ ಕಾಫಿ, ಕಾಳುಮೆಣಸು, ಹಾಲುವಾಣ, ಬಾಳೆ ಮತ್ತಿತರ ಗಿಡಗಳನ್ನು ಮರ ಕತ್ತರಿಸುವ ಯಂತ್ರ, ಮಚ್ಚುಗಳಿಂದ ಕೊಚ್ಚಿ ಕೆಡವಿದರು. ಫಸಲುಬಿಟ್ಟು ಹಸಿರಿನಿಂದ ಕಂಗೊಳಿಸುತ್ತಿದ್ದ ಕಾಫಿ ಗಿಡಗಳನ್ನು ಕತ್ತರಿಸಿ ಹಾಕುತ್ತಿದ್ದ ದೃಶ್ಯ ನೋಡಲಾಗದೆ ಕುಟುಂಬಗಳು ಕಣ್ಣೀರಿಡುತ್ತಿದ್ದವು. ಪೊಲೀಸ್ ರಕ್ಷಣೆಯೊಂದಿಗೆ ಬೆಳಗ್ಗೆಯೇ ತೆರವು ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ಅಕಾರಿಗಳೊಂದಿಗೆ ಸಂತ್ರಸ್ಥ ಕುಟುಂಬದವರು ವಾಗ್ವಾದಕ್ಕಿಳಿದರು. ಶ್ರೀಮಂತರ ಒತ್ತುವರಿ ತೆರವು ಮಾಡದೆ ಬಡವರು ಹೊಟ್ಟೆಪಾಡಿಗೆ ಮಾಡಿಕೊಂಡಿರುವ ಸಣ್ಣಪುಟ್ಟ ಒತ್ತುವರಿ ತೆರವು ಮಾಡಲು ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

ಸುಪ್ರೀಂ ಕೋರ್ಟ್ ಆದೇಶದಂತೆ ತೆರವು ಮಾಡಿ ವರದಿ ಸಲ್ಲಿಸುವುದು ಅನಿವಾರ್ಯವಾಗಿದೆ. ಪರಿಸ್ಥಿತಿ ಅರ್ಥ ಮಾಡಿಕೊಂಡು ತೆರವು ಮಾಡಲು ಸಹಕಾರ ನೀಡಿ ಎಂದು ಅರಣ್ಯ ಇಲಾಖೆ ಅಕಾರಿಗಳು ಜನರ ಮನವೊಲಿಸುವ ಪ್ರಯತ್ನ ಮಾಡಿದರು.

ಮರ ಕಡಿದಿದ್ದು ಸರಿಯೇ?

ಮಸಗಲಿ ಮೀಸಲು ಅರಣ್ಯದಲ್ಲಿ 1300 ಎಕರೆಯಷ್ಟು ಒತ್ತುವರಿಯಾಗಿದ್ದು, 1002 ಎಕರೆಯಷ್ಟು ಒತ್ತುವರಿ ಜಮೀನನ್ನು ಶ್ರೀಮಂತರಿಗೆ ಬಿಟ್ಟುಕೊಡಲಾಗಿದೆ. ಆದರೆ, ದಾಖಲೆಗಳು ಇಲ್ಲ ಎಂಬ ಕಾರಣಕ್ಕೆ 211 ಬಡ ಕುಟುಂಬಗಳು ಮಾಡಿರುವ 376 ಎಕರೆಯನ್ನು ತೆರವು ಮಾಡಲಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಒತ್ತುವರಿ ತೆರವು ಮಾಡುವುದಾದರೆ ಅರಣ್ಯ ಇಲಾಖೆ ಬೇಲಿ ನಿರ್ಮಿಸಿ ತನ್ನ ಗಡಿ ಗುರುತಿಸಿಕೊಳ್ಳಲಿ. ಇದನ್ನು ಬಿಟ್ಟು ಬೆಳೆದುನಿಂತ ಗಿಡಮರಗಳನ್ನು ಕಡಿದು ಹಾಕುವುದು ಸರಿಯೇ? ಸುಪ್ರೀಂ ಕೋರ್ಟ್ ಮರಗಳನ್ನು ಕಡಿದುಹಾಕಲು ಹೇಳಿದೆಯೇ ಎಂದು ಸ್ಥಳೀಯರು ಪ್ರಶ್ನಿಸಿದರು.

ಈ ಬಗ್ಗೆ ಮಾತಾನಾಡಿದ ಜಮೀನು ಕಳೆದುಕೊಂಡ ಎಂ.ಎಲ್.ಬಸವರಾಜ್ ಬಡವರು ಹೊಟ್ಟೆಪಾಡಿಗೆ ಮಾಡಿಕೊಂಡಿರುವ ಜಮೀನು ಉಳಿಸಿಕೊಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದೆವು. ಬದಲಿ ಜಾಗವನ್ನಾದರೂ ಕೊಡಲು ಕೇಳಿದೆವು. ಯಾವುದಕ್ಕೂ ಸ್ಪಂದಿಸಲಿಲ್ಲ. ನಿವೇಶನ, ಮನೆ ಕಟ್ಟಿಕೊಳ್ಳಲು 5 ಲಕ್ಷ ಕೊಡುವುದಾಗಿ ಹೇಳಿದ್ದಾರೆ. ಮಳಲೂರು, ಇಂದಾವರದಲ್ಲಿ ಜಾಗ ಕೊಡಲು ಕೇಳಿದರೂ ಸ್ಪಂದಿಸಲಿಲ್ಲ. ಪರಿಹಾರಕ್ಕೆ 30 ಕೋಟಿ ಹಣವಿದ್ದರೂ ಕೊಟ್ಟಿಲ್ಲ ಎಂದರು.

ಬಡವರು ಬ್ಯಾಂಕ್, ಫೈನಾನ್ಸ್ಗಳಿಂದ ಸಾಲ ಪಡೆದು ಬೆಳೆಸಿದ್ದ ಕಾಫಿ ಗಿಡಗಳನ್ನು ಅರಣ್ಯ ಇಲಾಖೆಯವರು ಮಾನವೀಯತೆ ಇಲ್ಲದೆ ಕಡಿದು ಹಾಕಿದ್ದಾರೆ. ಉಸ್ತುವಾರಿ ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಜೀವನಕ್ಕಾಗಿ ಮಾಡಿಕೊಂಡ ಕಾಫಿ ಗಿಡಗಳನ್ನು ಕಡಿದು ಹಾಕಿದವರಿಗೆ ಇವರ ಶಾಪ ತಟ್ಟದೇ ಇರುವುದಿಲ್ಲ ಎಂದು ಗ್ರಾಮಸ್ಥರು ಹಿಡಿಶಾಪ ಹಾಕಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments