ಶಿವಮೊಗ್ಗ: ದಿ. ಶಂಕರ್ನಾಗ್ ಅವರ ಕಾಲ್ಪನಿಕ ಲೋಕದ ಕನಸು ಈಡೇರಿದೆ. ಹೊಲ-ಗದ್ದೆ, ಶಾಲೆ, ಹಳ್ಳಿ ಸೊಗಡಿನ ಮುಗ್ಧ ಜನರು ಹಳ್ಳಿಯಲ್ಲಿ ಹರಿಯುವ ಹೊಳೆ, ತೊರೆ ಇವೆಲ್ಲವೂ ಶಂಕರ್ ನಾಗ್ ಕಲ್ಪನೆ. ಈ ಕಲ್ಪನೆಯನ್ನಿಟ್ಟುಕೊಂಡು, ಮಾಲ್ಗುಡಿ ಡೇಸ್ ಎಂಬ ಧಾರವಾಹಿ ನಿರ್ಮಿಸಿದ್ದರು. ಈ ಕಲ್ಪನೆ ಇದೀಗ ನನಸಾಗಿದ್ದು, ಪ್ರತಿಯೊಬ್ಬ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿ ಶಂಕರ್ ನಾಗ್ ಉಳಿದುಕೊಂಡಿದ್ದಾರೆ. ಮಾಲ್ಗುಡಿ ಡೇಸ್ ಧಾರವಾಹಿಯ ಶೇ. 30 ರಷ್ಟು ಚಿತ್ರಿಕರಣವಾಗಿದ್ದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಅರಸಾಳು ಗ್ರಾಮ ಇದೀಗ ಮತ್ತೊಮ್ಮೆ ಮಾಲ್ಗುಡಿಯಾಗಿದ್ದು, ಶಂಕರ್ನಾಗ್ ಇಲ್ಲದೆಯೂ, ಮಾಲ್ಗುಡಿ ನನಸಾಗಿದೆ. ಹೌದು, ಶಿವಮೊಗ್ಗದಿಂದ ಕೇವಲ 30-35 ಕಿ.ಮೀ. ದೂರದಲ್ಲಿರುವ ಅರಸಾಳು ರೈಲು ನಿಲ್ದಾಣದಲ್ಲೀಗ ರಾಷ್ಟ್ರೀಯ ಮ್ಯೂಸಿಯಂ ಸ್ಥಾಪನೆಗೊಂಡಿದೆ.
ಶಿವಮೊಗ್ಗದ ಪೆಸಿಟ್ ಕಾಲೇಜು ಸಭಾಂಗಣದಲ್ಲಿ ಸಜ್ಜುಗೊಳಿಸಲಾಗಿದ್ದ ವರ್ಚುಯಲ್ ವಿಡಿಯೋ ಮೂಲಕ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ, ಅರಸಾಳು ರೈಲು ನಿಲ್ದಾಣದ ಆವರಣದಲ್ಲಿ ಮಾಲ್ಗುಡಿ ಮ್ಯೂಸಿಯಂ ಆನ್ ಲೈನ್ ನಲ್ಲೇ ಉದ್ಘಾಟನೆಗೊಳಿಸಿದ್ರು. ಸಂಸದ ಬಿ.ವೈ. ರಾಘವೇಂದ್ರ ಈ ಬಗ್ಗೆ ಅಪಾರ ಆಸಕ್ತಿ ತೋರಿ, ಕೇಂದ್ರ ರೈಲ್ವೆ ಸಚಿವರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವೊಲಿಸಿ, ಈ ರಾಷ್ಟ್ರೀಯ ಮ್ಯೂಸಿಯಂ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಆರ್.ಕೆ. ನಾರಾಯಣ್ ಅವರ ಖ್ಯಾತ ಮಾಲ್ಗುಡಿ ಡೇಸ್ ಕೃತಿಯನ್ನು ಟೆಲಿವಿಷನ್ ಸೀರಿಯಲ್ ಆಗಿ ನಿರ್ಮಿಸಿದ ದಿವಂಗತ ಶಂಕರನಾಗ್ ಅವರು ಇದೇ ರೈಲ್ವೇ ನಿಲ್ದಾಣವನ್ನು ಪ್ರಮುಖವಾಗಿ ಬಳಸಿಕೊಂಡಿದ್ದರು. ಇದರ ನೆನಪಿಗಾಗಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಹಳೆಯ ಸ್ಟೇಷನನ್ನು ಮಾಲ್ಗುಡಿ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ಇಲ್ಲಿನ ಫ್ಲಾಟ್‍ಫಾರ್ಮ್ ವಿಸ್ತರಿಸಲಾಗಿದ್ದು, ಪ್ರಸ್ತುತ 12 ಕೋಚ್ ರೈಲುಗಳಿಗೆ ನಿಲುಗಡೆಗೆ ಅವಕಾಶವಿತ್ತು. ಇದೀಗ 28 ಕೋಚ್ ರೈಲುಗಳು ನಿಲ್ಲುವ ಸೌಲಭ್ಯ ಕಲ್ಪಿಸಲಾಗಿದೆ. ಇದೊಂದು ಪ್ರವಾಸಿ ತಾಣವಾಗಿ ಮುಂದಿನ ದಿನಗಳಲ್ಲಿ ಅಭಿವೃದ್ಧಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
ಒಂದು ಕಾಲದಲ್ಲಿ ಈ ಕಟ್ಟಡದಲ್ಲಿಯೇ, ರೈಲು ಪ್ರಯಾಣಿಕರಿಗೆ, ರೈಲು ಟಿಕೆಟ್ ನೀಡಲಾಗುತ್ತಿತ್ತು. ರೈಲು ನಿಲ್ದಾಣದ ಮುಖ್ಯ ಕಟ್ಟಡವೂ ಇದೇ ಆಗಿತ್ತು. ಬ್ರಿಟೀಷರ ಕಾಲದ ಕಟ್ಟಡವಾಗಿರುವ ಇದು, ಇಂದಿಗೂ ಗಟ್ಟಿಮುಟ್ಟಾಗಿದೆ. ಈ ಪುಟ್ಟ ರೈಲು ನಿಲ್ದಾಣ ಇದೀಗ, ಮಾಲ್ಗುಡಿ ಮ್ಯೂಸಿಯಂ ಆಗಿ ಪರಿವರ್ತನೆಯಾಗಿರುವುದು ಮಲೆನಾಡಿಗರಲ್ಲಿ ಸಂತಸ ಮನೆ ಮಾಡಿದೆ.