Thursday, September 18, 2025
HomeUncategorizedಮಳೆ ಕಮ್ಮಿಯಾದ್ರೂ ಅಪಾಯದ ಮಟ್ಟದಲ್ಲೇ ಹರಿಯುತ್ತಿವೆ ನದಿಗಳು

ಮಳೆ ಕಮ್ಮಿಯಾದ್ರೂ ಅಪಾಯದ ಮಟ್ಟದಲ್ಲೇ ಹರಿಯುತ್ತಿವೆ ನದಿಗಳು

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿದ್ದ ಆಶ್ಲೇಷ ಮಳೆ ನಿನ್ನೆ ಮಧ್ಯಾಹ್ನದಿಂದ ಕೊಂಚ ಬಿಡುವು ನೀಡಿದೆಯಾದರೂ ಪ್ರಮುಖ ನದಿಗಳು ಅಪಾಯ ಮಟ್ಟದಲ್ಲೇ ಹರಿಯುತ್ತಿವೆ. ತುಂಗಾ, ಭದ್ರಾ, ಶರಾವತಿ ಸೇರಿದಂತೆ ಪ್ರಮುಖ ನದಿಗಳು ಹಾಗೂ ಹಳ್ಳಕೊಳ್ಳ ತುಂಬಿ ಹರಿಯುತ್ತಿವೆ. ಕೆಲವೆಡೆ ಭೂ ಕುಸಿತ, ಕೆರೆ ಕೋಡಿ ಒಡೆದಿರುವುದು, ಮನೆ ಕುಸಿದು ಬಿದ್ದಿರುವ ಘಟನೆಗಳು ಕೂಡ ನಡೆದಿದೆ. ಅನೇಕ ಕಡೆಗಳಲ್ಲಿ ಕೆರೆ ಕೋಡಿ ಒಡೆದ ಪರಿಣಾಮ, ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ಅಡಿಕೆ ತೋಟ, ಭತ್ತದ ಗದ್ದೆಗೆ ನೀರು ನುಗ್ಗಿ ಅಡಿಕೆ, ಬಾಳೆ, ಭತ್ತ, ಮೆಣಸು ಮುಂತಾದ ಬೆಳೆಗಳಿಗೆ ಹಾನಿಯಾಗಿದೆ. ಅನೇಕ ಕಡೆಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ.

ತುಂಗಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿದ್ದು, ಗಾಜನೂರು ಅಣೆಕಟ್ಟೆಯಿಂದ ಸುಮಾರು 71 ಸಾವಿರ ಕ್ಯುಸೆಕ್‍ನಷ್ಟು ನೀರನ್ನು ನದಿಗೆ ಹರಿಸಲಾಗಿದೆ. ಅಪಾಯ ಮಟ್ಟದಲ್ಲೇ ತುಂಗೆ ಹರಿಯುತ್ತಿರುವುದರಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದು, ನಗರದ ಟಿಪ್ಪು ನಗರ, ಜೆಇ ಬಡಾವಣೆ ಸೇರಿದಂತೆ ವಿವಿಧೆಡೆ ಮನೆ ಕುಸಿತವಾಗಿದೆ. ಕಂದಾಯ ಅಧಿಕಾರಿಗಳು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯ ಪ್ರಮಾಣವನ್ನು ಅಂದಾಜಿಸುತ್ತಿದ್ದಾರೆ.

ನಾಡಿಗೆ ಬೆಳಕು ನೀಡುವ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲೂ ಉತ್ತಮ ಮಳೆಯಾಗಿದೆ. ಪರಿಣಾಮ ಶರಾವತಿ ನದಿ ಒಳಹರಿವಿನ ಪ್ರಮಾಣದಲ್ಲೂ ಹೆಚ್ಚಳವಾಗಿದೆ. ಸುಮಾರು 72920 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಜಲಾಶಯದ ನೀರಿನ ಮಟ್ಟ 1785.50 ಅಡಿಗೆ ತಲುಪಿದೆ. 24 ಗಂಟೆ ಅವಧಿಯಲ್ಲಿ ಜಲಾಶಯ 4 ಅಡಿ ಭರ್ತಿಯಾಗಿದೆ. ಲಿಂಗನಮಕ್ಕಿ ಭರ್ತಿಗೆ 34 ಅಡಿ ನೀರು ಹರಿದು ಬರಬೇಕಿದೆ.

ಇನ್ನು ರೈತರ ಜೀವನಾಡಿ ಭದ್ರಾ ಜಲಾಶಯದ ನೀರಿನ ಮಟ್ಟ 164.50 ಅಡಿಗೆ ಹೆಚ್ಚಳವಾಗಿದೆ. 57477 ಕ್ಯುಸೆಕ್ ಒಳಹರಿವು ಇದ್ದು, ಒಂದೇ ದಿನದಲ್ಲಿ ಅಣೆಕಟ್ಟೆ 5 ಅಡಿ ಭರ್ತಿಯಾಗಿದೆ. ಭದ್ರಾ ಜಲಾಶಯ ಭರ್ತಿಯಾಗಲು 22 ಅಡಿ ನೀರು ಬೇಕಿದೆ.

ಶಿಕಾರಿಪುರದ ಅಂಜನಾಪುರ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಯಥೇಚ್ಛ ನೀರನ್ನು ಹೊರ ಹರಿಸಲಾಗಿದೆ. ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಹಾಗೂ ತಾಲ್ಲೂಕಿನ ರೈತರಿಗೆ ಬೇಸಿಗೆ ಬೆಳೆಗೆ ನೀರೊದಗಿಸುವ ಡ್ಯಾಂ ಭರ್ತಿಯಾಗಿರುವುದು ಸುತ್ತಲಿನ ಜನತೆಗೆ ಸಂತಸ ತಂದಿದೆ.

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 77.53 ಮಿಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 417.87 ಮಿಮೀ ಆಗಿದ್ದು, ಇದುವರೆಗೆ ಸರಾಸರಿ 364.07 ಮಿಮೀ ಮಳೆ ದಾಖಲಾಗಿದೆ.

ಶಿವಮೊಗ್ಗ – 46.60 ಮಿಮೀ.
ಭದ್ರಾವತಿ – 22.60 ಮಿಮೀ.
ತೀರ್ಥಹಳ್ಳಿ- 115.80 ಮಿಮೀ.
ಸಾಗರ-103.08 ಮಿಮೀ.
ಶಿಕಾರಿಪುರ 14.40 ಮಿಮೀ.
ಸೊರಬ 42.20 ಮಿಮೀ.
ಹೊಸನಗರ ತಾಲ್ಲೂಕಿನಲ್ಲಿ 198 ಮಿಮೀ ಮಳೆ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments