Tuesday, August 26, 2025
Google search engine
HomeUncategorizedಕಾಶ್ಮೀರ ಕಣಿವೆಯಲ್ಲಿ ಪಂಡಿತರಿಗೆ ಭದ್ರತೆ ಇಲ್ಲ: ಹೈಕೋರ್ಟ್‌ಗೆ ಮನವಿ

ಕಾಶ್ಮೀರ ಕಣಿವೆಯಲ್ಲಿ ಪಂಡಿತರಿಗೆ ಭದ್ರತೆ ಇಲ್ಲ: ಹೈಕೋರ್ಟ್‌ಗೆ ಮನವಿ

ಶ್ರೀನಗರ: ‘ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರಿಗೆ ಭದ್ರತೆ ಒದಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕಾಶ್ಮೀರಿ ಪಂಡಿತರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲು ಸರ್ಕಾರಕ್ಕೆ ನಿರ್ದೇಶನ ನೀಡಿ’ ಎಂದು ಕಾಶ್ಮೀರಿ ಪಂಡಿತ ಸಂಘರ್ಷ ಸಮಿತಿಯು ಜಮ್ಮು–ಕಾಶ್ಮೀರ–ಲಡಾಖ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಸರ್ಕಾರವು ನಮ್ಮನ್ನು ಕೂಡಿ ಹಾಕಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಸಮಿತಿಯ ಅಧ್ಯಕ್ಷ ಸಂಜಯ್ ಕೆ. ಟಿಕ್ಕೋ ಅವರು, ಹೈಕೋರ್ಟ್‌ಗೆ ಇ–ಮೇಲ್‌ ಮೂಲಕ ಶುಕ್ರವಾರ ಅರ್ಜಿ ಸಲ್ಲಿಸಿದ್ದಾರೆ. ‘ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಮಾಡಿಕೊಂಡು ಉಗ್ರರು ಹತ್ಯೆ ನಡೆಸುತ್ತಿದ್ದಾರೆ. 2020ರ ಜೂನ್‌ 8ರಿಂದ ಆರಂಭವಾಗಿ ಇದೇ ಮೇ 31ರವರೆಗೆ ಸ್ಥಳೀಯ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ 12 ಜನರ ಮೇಲೆ ಇಂತಹ ದಾಳಿ ನಡೆದಿದೆ. ಇದರಲ್ಲಿ 11 ಜನರು ಮೃತಪಟ್ಟಿದ್ದಾರೆ. ಈ ವಾರದಲ್ಲಿ ಮೂವರು ಮುಸ್ಲಿಮೇತರರನ್ನು ಉಗ್ರರು ಕೊಂದಿದ್ದಾರೆ. ನಮ್ಮನ್ನು ರಕ್ಷಿಸಿ’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

‘ಕಾಶ್ಮೀರ ಕಣಿವೆಯಲ್ಲಿ ಪಂಡಿತರಿಗೆ ಭದ್ರತೆ ಇಲ್ಲ. ಇಲ್ಲಿ ಸುರಕ್ಷಿತವಾಗಿ ಬದುಕುತ್ತೇವೆ ಎಂಬ ನಂಬಿಕೆಯೇ ಇಲ್ಲ. ಸುರಕ್ಷಿತ ಪ್ರದೇಶಗಳಿಗೆ ಹೋಗಲು ನಾವು ಸಿದ್ಧರಿದ್ದೇವೆ. ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಕಾಶ್ಮೀರಿ ಪಂಡಿತರು ಇರುವ ಶಿಬಿರಗಳ ದ್ವಾರಗಳನ್ನು ಸರ್ಕಾರವು ಮುಚ್ಚಿದೆ. ನಾವು ಹೊರಹೋಗುವುದನ್ನು ತಡೆದಿದೆ. ಸರ್ಕಾರ ನಮ್ಮನ್ನು ಕೂಡಿಹಾಕಿದೆ’ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

‘ಶಿಬಿರಗಳಿಂದ ಹೊರಗೆ ನೆಲೆ ಕಂಡುಕೊಂಡಿದ್ದವರು, ಈಗಾಗಲೇ ಕಾಶ್ಮೀರ ಕಣಿವೆ ತೊರೆದಿದ್ದಾರೆ. ಸುರಕ್ಷಿತ ಪ್ರದೇಶಗಳಿಗೆ ಹೋಗಿದ್ದಾರೆ. ಆದರೆ ಶಿಬಿರಗಳಲ್ಲಿ ಇದ್ದವರು ಇಲ್ಲೇ ಉಳಿಯುವಂತಾಗಿದೆ. ಶಿಬಿರದಲ್ಲಿ ಇದ್ದವರು ಹೊರಗೆ ಹೋಗುವುದನ್ನು ತಡೆಯುವ ಸಲುವಾಗಿ ಕೇಂದ್ರೀಯ ಮೀಸಲು ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿದೆ. ಶಿಬಿರದ ಬೇಲಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

‘ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಹಕ್ಕನ್ನು ನೀಡಲಾಗಿದೆ. ಆದರೆ, ನಾವು ಸುರಕ್ಷಿತ ಪ್ರದೇಶಕ್ಕೆ ಹೋಗುವುದನ್ನು ತಡೆಯುವ ಮೂಲಕ ಜೀವಿಸುವ ಹಕ್ಕನ್ನು ನಿರಾಕರಿಸಲಾಗಿದೆ. ಈ ವಿಧಿಯ ಅಡಿ ನೀಡಲಾದ ಜೀವಿಸುವ ಹಕ್ಕು ನಮಗೆ ಲಭ್ಯವಾಗುವಂತೆ ಮಾಡಿ. ಕಾಶ್ಮೀರ ಕಣಿವೆ ಹೊರತುಪಡಿಸಿ, ದೇಶದಯಾವ ಮೂಲೆಯಲ್ಲಾದರೂ ಆಶ್ರಯ ಕಲ್ಪಿಸಲಿ. ಅಲ್ಲಿಗೆ ನಾವು ಹೋಗುತ್ತೇವೆ’ ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

RELATED ARTICLES
- Advertisment -
Google search engine

Most Popular

Recent Comments