ಬೆಂಗಳೂರು: ಪೀಣ್ಯ ಫ್ಲೈಓವರ್ ಜನವರಿ 16ರಿಂದ ವಾಹನ ಸಂಚಾರವು ಬಂದ್ ಆಗಲಿದೆ.
ರಾಷ್ಟ್ರೀಯ ಹೆದ್ದಾರಿ 4ರ ಪೀಣ್ಯ ಎಲಿವೇಟೆಡ್ ಹೈವೇಯ ಡಾ.ಶಿವಕುಮಾರ ಸ್ವಾಮೀಜಿ ಮೇಲ್ಲೇತುವೆಗೆ ಅಳವಡಿಸಿದ್ದ ವಯಾಡಕ್ಟ್ ದುರಸ್ಥಿ ಮಾಡುವ ಅವಶ್ಯಕತೆ ಇದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ದುರಸ್ಥಿ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿದೆ.
ವಯಾಡಕ್ಟ್ ಸಮಗ್ರತೆಯ ಪರಿಶೀಲನೆಯನ್ನು ನಡೆಸಲು ಲೋಡ್ ಟೆಸ್ಟಿಂಗ್ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪೀಣ್ಯ ಎಲಿವೇಟೆಡ್ ಫ್ಲೈಓವರ್ ರಸ್ತೆಯಲ್ಲಿ ಜನವರಿ 16ರ ರಾತ್ರಿ 11 ಗಂಟೆಯಿಂದ 19ರ ಬೆಳಗ್ಗೆ 11 ಗಂಟೆವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ ಹೀಗಿದೆ
1.ನೆಲಮಂಗಲ ಕಡೆಯಿಂದ ಬೆಂಗಳೂರು ನಗರಕ್ಕೆ ಫ್ಲೈ ಓವರ್ ರಸ್ತೆಯ ಮೂಲಕ ಸಾಗುವ ವಾಹನಗಳು ಕೆನ್ನಮೆಟಲ್ ವಿಡಿಯಾ ಹತ್ತಿರ ಫ್ಲೈಓವರ್ ಪಕ್ಕದ ಎನ್‌ಹೆಚ್-4 ಮತ್ತು ಸರ್ವಿಸ್ ರಸ್ತೆಯ ಮೂಲಕ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ ಮೂಲಕ ಎಸ್‌ಆರ್‌ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪಬಹುದು.
2.ಸಿಎಂಟಿಐ ಜಂಕ್ಷನ್‌ನಿಂದ ನೆಲಮಂಗಲ ಕಡೆಗೆ ಫ್ಲೈಓವರ್ ರಸ್ತೆಯಲ್ಲಿ ಸಾಗುವ ವಾಹನಗಳು ಪಾರ್ಲೆ-ಜಿ ಟೋಲ್ ತಲುಪಲು ಫ್ಲೈ ಓವರ್ ಪಕ್ಕದ ಎನ್ ಹೆಚ್-4& ಸರ್ವಿಸ್ ರಸ್ತೆಯಲ್ಲಿ ಎಸ್‌ಆರ್‌ಎಸ್ ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ ಹಾಗೂ ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ- 8ನೇ ಮೈಲಿ ಮುಖಾಂತರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.


