Friday, August 29, 2025
HomeUncategorized'ಕಾವೇರಿ' ಹೋರಾಟದ ಕಿಚ್ಚು: ಪ್ರತಿಭಟನಾಕಾರರ ಬಂಧನಕ್ಕೆ ಮುಖ್ಯಮಂತ್ರಿ ಚಂದ್ರು ಕಿಡಿ!

‘ಕಾವೇರಿ’ ಹೋರಾಟದ ಕಿಚ್ಚು: ಪ್ರತಿಭಟನಾಕಾರರ ಬಂಧನಕ್ಕೆ ಮುಖ್ಯಮಂತ್ರಿ ಚಂದ್ರು ಕಿಡಿ!

ಬೆಂಗಳೂರು: ತಕ್ಷಣವೇ ತಮಿಳುನಾಡಿಗೆ ಬಿಡುತ್ತಿರುವ ಕಾವೇರಿ ನೀರನ್ನು ನಿಲ್ಲಿಸಬೇಕು. ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಹೋರಾಟ ಮಾಡಲಾಗುವುದು. ರಾಜ್ಯದಲ್ಲಿ ನೀರಿನ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನ್ಯಾಯವಾಗುತ್ತಿದೆ. ಹೀಗಾಗಿ, ಜನರು ಸ್ವಯಂ ಪ್ರೇರಿತರಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಒತ್ತಾಯಿಸಿ ಕಾವೇರಿ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಇಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದ್ದು, ಎಎಪಿ, ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ 150ಕ್ಕೂ ಅಧಿಕ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ರೈತರಿಗಾಗಿ ಹೋರಾಟ ನಡೆಸುತ್ತಿದ್ದು, ಅನ್ಯಾಯ ಮಾಡುತ್ತಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಲಾಯಿತು. ತಲೆಯ ಮೇಲೆ ಕಲ್ಲು ಹೊತ್ತ ಎಎಪಿ ಕಾರ್ಯಕರ್ತರು, ಕಾವೇರಿ ನಮ್ಮದು ಎಂದು ಘೋಷಣೆ ಕೂಗಿದರು.

ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಬಿಜೆಪಿ ಜೆಡಿಎಸ್ ರಾಜಕಾರಣ, ಜನರಿಗೋಸ್ಕರ ಅಲ್ಲ: ಸಿಎಂ ಸಿದ್ದರಾಮಯ್ಯ

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಇದು ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದ್ದು, ನ್ಯಾಯಾಲಯಕ್ಕೂ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ತಮಿಳುನಾಡಿಗೆ ನೀರು ಬಿಡಬೇಕು ಎನ್ನುವ ಆದೇಶವನ್ನು ಹಿಂಪಡೆಯಬೇಕು. ಪ್ರಾಧಿಕಾರವನ್ನು ರದ್ದುಮಾಡಿ, ಸ್ವತಂತ್ರ ಪ್ರಾಧಿಕಾರವನ್ನು ರಚಿಸಬೇಕು. ಸದನದಲ್ಲಿ ಚರ್ಚೆ ಮಾಡಿ. ಅಲ್ಲಿ ಎಲ್ಲಾ ಶಾಸಕರು ತಮಿಳುನಾಡಿಗೆ ನೀರು ಬಿಡುವುದು ಸರಿ ಎಂದು ಹೇಳಿದ್ದೇ ಆದರೆ, ಅದನ್ನೂ ಸಾರ್ವಜನಿಕರ ಮುಂದಿಡಿ. ಬೆಳಗ್ಗೆಯೇ ಕುರುಬೂರು ಶಾಂತ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಏಕೆ?. ನಾವು ಜೈಲಿಗೆ ಹೋಗಲು ಕೂಡ ಸಿದ್ಧ ಎಂದು ಕಿಡಿಕಾರಿದರು.

ನೀರು ಬಿಡುವುದಿಲ್ಲ ಎಂಬ ನಿರ್ಣಯ ಕೈಗೊಳ್ಳಿ :

ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ನೀರು ಬಿಡಲ್ಲ ಎನ್ನುವ ಸರ್ಕಾರ, ರಾತ್ರೋರಾತ್ರಿ 5 ಸಾವಿರ ಕ್ಯುಸೆಕ್ ನೀರು ಬಿಟ್ಟು 3.5 ಸಾವಿರ ಕ್ಯುಸೆಕ್ ನೀರು ಬಿಟ್ಟಿರುವುದಾಗಿ ಹೇಳುತ್ತಿದೆ. ರಾಜ್ಯ ಸರ್ಕಾರವೇ ತಮಿಳುನಾಡಿಗೆ ಬೆಂಬಲ ಸೂಚಿಸುವುದರ ಜೊತೆಗೆ ಕಾನೂನಿನ ಕುಣಿಗೆಗೆ ಹೆದರುತ್ತಿದೆ ಮತ್ತು ತಮ್ಮ ಅಧಿಕಾರದ ಬಗ್ಗೆ ಯೋಚಿಸುತ್ತಿದೆ. ಬಂದ್‌ಗೆ ಬೆಂಬಲ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನೀರು ನಮ್ಮ ಹಕ್ಕು. ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೀರು ಬಿಡುವುದಿಲ್ಲ ಎಂಬ ನಿರ್ಧಾರ ತೆಗೆದುಕೊಳ್ಳಿ, ಉಭಯ ಸದನ ಕರೆದು ನೀರು ಬಿಡುವುದಿಲ್ಲ ಎಂದು ನಿರ್ಣಯ ಕೈಗೊಳ್ಳಿ. ಈ ಹೋರಾಟ ರಾಜಕೀಯವಲ್ಲ. ಸಂಕಷ್ಟದ ಸಮಯದಲ್ಲಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದರು.

ಪಂಚಾಯಿತಿ ಮಟ್ಟದಲ್ಲಿ ಮದ್ಯದಂಗಡಿ ತೆರೆಯುವ ಸರ್ಕಾರದ ನಿರ್ಧಾರದ ವಿರುದ್ಧ ಕಿಡಿಕಾರಿದ ಅವರು, ಪ್ರತಿ ಬಾರಿಯು ಚುನಾವಣೆಯಲ್ಲಿ ಮತದಾರರು ಯೋಗ್ಯರನ್ನು ಆಯ್ಕೆ ಮಾಡಬೇಕಿದೆ. ಸಾರ್ವಜನಿಕರ ಹಿತಕ್ಕೆ ವಿರುದ್ಧವಾಗಿ ಮದ್ಯದಂಗಡಿ ತೆರೆಯಲು ಮುಂದಾಗಿದೆ. ಇದಕ್ಕೆ ನಮ್ಮ ವಿರೋಧವಿದೆ. ಈ ನಿರ್ಧಾರವನ್ನು ಹಿಂಪಡೆಯಬೇಕು ಮತ್ತು ನೀರಿಗಾಗಿ ಹೋರಾಟಲು ಬೀದಿಗೆ ಬರಬೇಕು. ಎಲ್ಲರೊಂದಿಗೆ ಚರ್ಚಿಸಿ ಕರ್ನಾಟಕ ಬಂದ್ ಕುರಿತು ಅಂತಿನ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬೇಕಿದ್ದರೆ ರಕ್ತ ತಗೊಳಿ, ಪ್ರಾಣ ತಗೊಳಿ :

ಇದೇ ವೇಳೆ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಇದು ರೈತರಿಗಾಗಿ, ಕನ್ನಡಿಗರಿಗಾಗಿ ನಡೆಯುತ್ತಿರುವ ಬಂದ್ ಆಗಿದೆ. ಹೀಗಾಗಿ, ಬಂದ್ ಯಶಸ್ವಿಯಾಗುವತ್ತ ಸಾಗಿದೆ. ಕರ್ನಾಟಕ ಕಂಡರಿಯದ ಬೆಂಬಲವನ್ನು ಮಾಧ್ಯಮಗಳು ನಮ್ಮ ಹೋರಾಟಕ್ಕೆ ನೀಡುತ್ತಿವೆ. ಪೊಲೀಸರ ಮೂಲಕ ಹೋಕಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಬೇಕಿದ್ದರೆ ಜೈಲಿಗೆ ಕಳುಹಿಸಿ, ರಕ್ತ ತಗೊಳಿ, ಪ್ರಾಣವನ್ನು ತಗೊಳಿ ಆದರೆ, ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಕೂಡಲೇ ನಿಲ್ಲಿಸಿ. ನಮ್ಮ ಹೋರಾಟ ಬೆಂಗಳೂರು ಮತ್ತು ಕರ್ನಾಟಕದ ಜೀವನದಿ ಕಾವೇರಿಗಾಗಿ ಎಂದರು.

ಇದನ್ನೂ ಓದಿ: ಬೆಂಗಳೂರು ಬಂದ್​ ಗೆ ಕನ್ನಡ ಚಿತ್ರರಂಗದ ಪೋಷಕ ನಟರ ಸಂಘ ಸಾಥ್​!

ತಲೆಯ ಮೇಲೆ ಕಲ್ಲು ಹೊತ್ತಿದ್ದ ಎಎಪಿ ಸಂಘಟನಾ ಕಾರ್ಯದರ್ಶಿ ಮಾತನಾಡಿ, ರೈತನ ಮಗನಾಗಿ ಹೋರಾಟಕ್ಕೆ ಮುಂದಾಗಿದ್ದೇನೆ. ನಮಗೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಹೀಗಿರುವಾಗ, ತಮಿಳುನಾಡಿಗೆ ನೀರು ಬಿಡುತ್ತಿರುವುದು ಸರಿಯಲ್ಲ. ಕೂಡಲೇ ಪ್ರಾಧಿಕಾರವನ್ನು ರದ್ದುಗೊಳಿಸಬೇಕು. ಮುಂದಿನ ದಿನಗಳಲ್ಲಿ ಮತ್ತಷ್ಟು ಹೋರಾಟ ಮಾಡಲಾಗುವುದು ಎಂದರು.

ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಹಾಗೂ ಕುರುಬೂರು ಶಾಂತಕುಮಾರ್ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments