Monday, August 25, 2025
Google search engine
HomeUncategorizedಚಿರು ಸರ್ಜಾ ಪುಣ್ಯಸ್ಮರಣೆ.. ಧ್ರುವಗೆ ಫ್ಯಾಮಿಲಿ, ಫ್ರೆಂಡ್ಸ್ ಸಾಥ್

ಚಿರು ಸರ್ಜಾ ಪುಣ್ಯಸ್ಮರಣೆ.. ಧ್ರುವಗೆ ಫ್ಯಾಮಿಲಿ, ಫ್ರೆಂಡ್ಸ್ ಸಾಥ್

ಬೆಂಗಳೂರು : ಚಿರುನಗೆಯ ಚಿರು, ಸ್ಯಾಂಡಲ್​ವುಡ್​ನ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿ ಇಂದಿಗೆ ಮೂರು ವರ್ಷ. ಕುಟುಂಬಸ್ಥರ ಜೊತೆ ಫ್ಯಾನ್ಸ್ ಹಾಗೂ ಕನ್ನಡ ಕಲಾಭಿಮಾನಿಗಳಿಗೆ ಮಾತ್ರ ಇಂದಿಗೂ ಅವ್ರನ್ನ ಮರೆಯಲಾಗುತ್ತಿಲ್ಲ. ಅಣ್ಣನ ಸ್ಮರಿಸಲು ಇಷ್ಟವಾದ ತಿಂಡಿ, ತಿನಿಸುಗಳ ಸಮೇತ ಫಾರ್ಮ್​ ಹೌಸ್​ಗೆ ತೆರಳಿ, ಸಮಾಧಿಗೆ ಪೂಜೆ ಸಲ್ಲಿಸಿದ ಧ್ರುವ ಸರ್ಜಾಗೆ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಸಾಥ್ ನೀಡಿದ್ರು.

ಜೂನ್ 7 ಸ್ಯಾಂಡಲ್​ವುಡ್ ಮಟ್ಟಿಗೆ ನಿಜಕ್ಕೂ ಕರಾಳ ದಿನ. ಕಾರಣ ಮೂರು ವರ್ಷದ ಹಿಂದೆ ಇದೇ ದಿನ, ಚಿರ ಯೌವ್ವನದ ಚಿರಯುವಕ ಚಿರಂಜೀವಿ ಸರ್ಜಾನ ಆ ಜವರಾಯ ಬಲವಂತವಾಗಿ ಬಾರದೂರಿಗೆ ಕಳುಹಿಸಿಕೊಟ್ಟರು. ಸಾಲು ಸಾಲು ಸಿನಿಮಾಗಳಿಂದ ಅರ್ಜುನ್ ಸರ್ಜಾ, ಧ್ರುವ ಸರ್ಜಾ ಹಾಗೂ ಮೇಘನಾ ರಾಜ್ ರೀತಿ ಮಿಂಚು ಹರಿಸುತ್ತಿದ್ದ ಚಿರು, ಆತನ ಚಿರುನಗೆ ಎರಡೂ ಮರೆಯಾಯ್ತು.

ಆದ್ರೆ ಅವ್ರ ಕುಟುಂಬಸ್ಥರು, ಫ್ಯಾನ್ಸ್ ಹಾಗೂ ಆಪ್ತ ವಲಯಕ್ಕೆ ಮಾತ್ರ ಚಿರು ಸದಾ ಜೀವಂತ. ಅವ್ರ ನೆನಪಲ್ಲೇ ಒಂದಷ್ಟು ಜೀವಗಳು ಉಸಿರಾಡ್ತಿರೋದು ವಿಶೇಷ. ಯೆಸ್.. ಇಂದು ಚಿರಂಜೀಬಿ ಸರ್ಜಾರ ಮೂರನೇ ಪುಣ್ಯಸ್ಮರಣೆ. ಕಗ್ಗಲಿಪುರದ ಬಳಿ ಇರೋ ಧ್ರುವ ಸರ್ಜಾ ಫಾರ್ಮ್​ಹೌಸ್​​ನಲ್ಲಿ ಚಿರು ಸಮಾಧಿಗೆ ಕುಟುಂಬಸ್ಥರು ಪ್ರತೀ ವರ್ಷದಂತೆ ಈ ವರ್ಷವೂ ಪೂಜೆ ಸಲ್ಲಿಸಿದ್ರು.

ಮುತ್ತೈದೆ ತನ ಕಳೆದುಕೊಂಡ ಮೇಘನಾ ರಾಜ್, ಕಣ್ಬಿಟ್ಟು ಪ್ರಪಂಚ ನೋಡೋಕೆ ಮೊದಲೇ ತಂದೆಯನ್ನ ಕಳೆದುಕೊಂಡ ರಾಯನ್ ರಾಜ್ ಸರ್ಜಾ, ಸುಂದರ್ ರಾಜ್, ಪ್ರಮಿಳಾ ಜೋಷಾಯಿ, ಧ್ರುವ ಸರ್ಜಾ, ಅವ್ರ ತಾಯಿ ಸೇರಿದಂತೆ ಇಡೀ ಸರ್ಜಾ ಕುಟುಂಬ ಅಲ್ಲಿ ನೆರೆದಿತ್ತು. ತನಗೆ ಬಲಭುಜದಂತಿದ್ದ ಚಿರು ಇನ್ನಿಲ್ಲ ಅನ್ನೋದನ್ನ ಧ್ರುವ ಸರ್ಜಾಗೆ ಇಂದಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ತಂದೆ ಕೊರಗಿಲ್ಲದೆ ರಾಯನ್ ರಾಜ್ ಸರ್ಜಾನ ನೋಡ್ಕೋತೀವಿ ಎಂದ ಧ್ರುವ, ಅಣ್ಣನ ಬಗ್ಗೆ ಒಂದಷ್ಟು ಭಾವುಕ ಮಾತುಗಳನ್ನಾಡಿದ್ರು.

ನಮ್ಮ ಅಣ್ಣನನ್ನ ಬಿಟ್ಟು ಬಾಲ್ಯ ಕಳೆದಿದ್ದೇ ಇಲ್ಲ. ಅವನೇ ನನ್ನ ಬೆಸ್ಟ್ ಫ್ರೆಂಡ್. ನಾನು ಮಾಡಿದ ತಪ್ಪು ನೀನು ಮಾಡಬೇಡ ಅಂತಿದ್ದ. ರಾಜಮಾರ್ತಾಂಡ ಸಿನಿಮಾದ ಡಬ್ಬಿಂಗ್ ಮಾಡಬೇಕು. ಆದ್ರೆ ನಾನು ಶಿವಣ್ಣನಷ್ಟು ಗಟ್ಟಿ ಇಲ್ಲ. ಅಣ್ಣನಿಲ್ಲದ ಜೀವನ ಈಗ ನೋಡ್ತಿದೀನಿ. ಸಮಯ ಸಿಕ್ಕಾಗಲೆಲ್ಲಾ ಇಲ್ಲಿ ಬಂದು ಏಕಾಂತತೆಯನ್ನ ಕಳೆಯುತ್ತೇನೆ ಅಂತ ಭಾರವಾದ ಮನಸ್ಸಿನಿಂದ ಮಾತನ್ನ ಹೊರಹಾಕಿದ್ರು.

ಧ್ರುವ ಸರ್ಜಾ ಹಾಗೂ ಮೇಘನಾ ರಾಜ್​ಗೆ ಒಂದಷ್ಟು ಫ್ಯಾಮಿಲಿ ಫ್ರೆಂಡ್ಸ್ ಹಾಗೂ ಚಿತ್ರರಂಗದ ಮಂದಿ ಸಾಥ್ ನೀಡಿದ್ದು ಗ್ರೇಟ್ ಅನಿಸಿತು. ನಟ ದುನಿಯಾ ವಿಜಯ್, ಕೆಜಿಎಫ್ ಖ್ಯಾತಿಯ ಌಂಡ್ರೂ ಅವಿನಾಶ್, ಮಾರ್ಟಿನ್ ಡೈರೆಕ್ಟರ್ ಎಪಿ ಅರ್ಜುನ್, ಬಹದ್ದೂರ್ ಚೇತನ್, ಕೆವಿಎನ್ ಸುಪ್ರೀತ್ ಹೀಗೆ ಸಾಕಷ್ಟು ಮಂದಿ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ರು.

ಮಗನ ಸಮಾಧಿಗೆ ಪೂಜೆ ಮಾಡುತ್ತಲೇ ಕಣ್ಣೀರ ಕೋಡಿ ಹರಿಸಿದ ಚಿರಂಜೀವಿ ಸರ್ಜಾ ತಾಯಿಯನ್ನ ಕಂಡು ಅಲ್ಲಿದವರೆಲ್ಲಾ ಅಯ್ಯೋ ಅಂದರು. ಇನ್ನು ಚಿರು- ಮೇಘನಾರ ಮುದ್ದಿನ ಮಗ ರಾಯನ್ ರಾಜ್ ಸರ್ಜಾ, ಅಲ್ಲಿದ್ದ ಶ್ವಾನದೊಂದಿಗೆ ಆಟವಾಡಿದ ಪರಿ ಎಲ್ಲರ ಗಮನ ಸೆಳೆಯಿತು. ಅಲ್ಲಿನ ಸಮಾಧಿಯಲ್ಲಿ ನಿಶ್ಚಿಂತೆಯಿಂದ ಮಲಗಿರೋದು ನನ್ನ ಅಪ್ಪನೇ ಅನ್ನೋ ಅರಿವೂ ಇಲ್ಲದ, ಆ ಮುಗ್ಧ ಕಂದಮ್ಮ ನಾಯಿಯೊಂದಿಗೆ ಖುಷ್ ಖುಷಿಯಾಗಿ ಆಟ ಆಡಿತು.

ಇನ್ನು ಫಾರ್ಮ್​ ಹೌಸ್​ಗೆ ಬಂದಂತಹ ಬಹುತೇಕ ಎಲ್ಲರಿಗೂ ಭರ್ಜರಿ ಭೂರಿ ಭೋಜನ ಹಾಕಿಸಿದ ಧ್ರುವ ಸರ್ಜಾ ಅಣ್ಣನ ನೆನಪಲ್ಲಿ ಸಖತ್ ಸೈಲೆಂಟ್ ಆಗಿಬಿಟ್ಟಿದ್ರು. ಅದೇನೇ ಇರಲಿ, ಚಿರು ಕೊನೆಯ ಸಿನಿಮಾ ರಾಜಮಾರ್ತಾಂಡ ಆದಷ್ಟು ಬೇಗ ತೆರೆಕಾಣಲಿ. ಮೇಘನಾ ರಾಜ್ ಕೂಡ ಕಂಬ್ಯಾಕ್ ಆಗ್ತಿದ್ದು, ರಾಯನ್ ರಾಜ್ ಸರ್ಜಾನೂ ಸೆಲೆಬ್ರಿಟಿ ಫ್ಯಾಮಿಲಿಯ ಕುಡಿ ಆಗಿರೋದ್ರಿಂದ ಬಣ್ಣ ಹಚ್ಚಿ, ಪ್ರೇಕ್ಷಕರನ್ನ ರಂಜಿಸುವಂತಾಗಲಿ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments