Saturday, August 23, 2025
Google search engine
HomeUncategorizedSC.SP/ TSP ಅಡಿ 34,293.69 ಕೋಟಿ ಕ್ರಿಯಾ ಯೋಜನೆ ಅನುಮೋದನೆ!

SC.SP/ TSP ಅಡಿ 34,293.69 ಕೋಟಿ ಕ್ರಿಯಾ ಯೋಜನೆ ಅನುಮೋದನೆ!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಅನುಸೂಚಿತ ಜಾತಿ/ ಅನುಸೂಚಿತ ಬುಡಕಟ್ಟುಗಳ ರಾಜ್ಯ ಅಭಿವೃದ್ಧಿ ಪರಿಷತ್‌ ಸಭೆಯಲ್ಲಿ 2023-24ನೇ ಸಾಲಿನ ಎಸ್‌.ಸಿ.ಎಸ್‌.ಪಿ./ ಟಿ.ಎಸ್.ಪಿ. ಅಡಿ 34,293.69  ಕೋಟಿ ರೂ. ಗಳ ಕ್ರಿಯಾ ಯೋಜನೆಯನ್ನು ಅನುಮೋದಿಸಲಾಯಿತು.

ಇದನ್ನೂ ಓದಿ: ಇಂದಿನಿಂದ ಹಾಲಿನ ಬೆಲೆ ಏರಿಕೆ : ಪರಿಷ್ಕೃತ ದರ ಪಟ್ಟಿ ಇಲ್ಲಿದೆ!

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಸ್‌.ಸಿ.ಎಸ್.ಪಿ./ ಟಿಎಸ್.ಪಿ. ಅನುದಾನ ಖರ್ಚು ಮಾಡದಿದ್ದರೆ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಯ್ದೆ ಹೇಳುತ್ತದೆ. ಕಾಯ್ದೆ ಗಂಭೀರವಾಗಿದೆ. ಅದರಂತೆ ಯಾರು ನಿರ್ಲಕ್ಷ್ಯ ಮಾಡುತ್ತಾರೆ, ಅವರ ವಿರುದ್ಧ ಕಾಯ್ದೆಯನ್ವಯ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಪ್ರತಿ ಇಲಾಖೆಯು ಎಸ್‌.ಸಿ.ಎಸ್.ಪಿ. / ಟಿ.ಎಸ್.ಪಿ. ಯೋಜನೆಗಳ ಅನುಷ್ಠಾನದ ನಂತರ ಪರಿಣಾಮದ ಮೌಲ್ಯಮಾಪನ ವರದಿಯನ್ನೂ ಸಿದ್ಧಪಡಿಸಿ ಫಲಾನುಭವಿಗಳ ಸ್ಥಿತಿಗತಿಯಲ್ಲಿ ಆಗಿರುವ ಬದಲಾವಣೆ ಕುರಿತು ಮಾಹಿತಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ತಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮಗ್ರ ಅಭಿವೃದ್ಧಿಗಾಗಿ ಎಸ್‌.ಸಿ.ಎಸ್.ಪಿ/ ಟಿ.ಎಸ್.ಪಿ. ಅಧಿನಿಯಮ 2013 ಮತ್ತು ನಿಯಮ 2017 ನ್ನು ಜಾರಿಗೆ ತರಲಾಗಿದೆ. ಇದರನ್ವಯ ಅಭಿವೃದ್ಧಿ ಯೋಜನೆಗಳಿಗೆ ಹಂಚಿಕೆ ಮಾಡಿರುವ ಅನುದಾನದ ಶೇ. 24.10 ರಷ್ಟು ಮೊತ್ತವನ್ನು ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಗಳಡಿ ಒದಗಿಸಲಾಗುತ್ತಿದೆ. ಈ ಯೋಜನೆಯ ಅನುದಾನ ನೇರವಾಗಿ ಈ ಸಮುದಾಯಗಳಿಗೇ ತಲುಪಬೇಕು ಎಂಬ ಉದ್ದೇಶದಿಂದ ಕಾಯ್ದೆ ರೂಪಿಸಲಾಗಿದೆ. ಆದ್ದರಿಂದ ಈ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

ಮುಖ್ಯಾಂಶಗಳು:

  • ಪ್ರಸಕ್ತ ಸಾಲಿನಲ್ಲಿ ರಾಜ್ಯದ ಒಟ್ಟು ಆಯವ್ಯಯ ಗಾತ್ರ28 ಲಕ್ಷ ಕೋಟಿ ರೂ. ಆಗಿದ್ದು, ಇದರಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನಿಗದಿ ಪಡಿಸಿದ ಆಯವ್ಯಯ 1.42 ಲಕ್ಷ ಕೋಟಿ ರೂ. ನಷ್ಟಿದೆ.
  • ಇದರಲ್ಲಿ ಎಸ್‌.ಸಿ.ಎಸ್‌.ಪಿ./ ಟಿ.ಎಸ್‌.ಪಿ. ಗೆ10% ಅನುದಾನ ಅಂದರೆ ಒಟ್ಟು 34,221.49 ಕೋಟಿ ರೂ. ಹಾಗೂ ಹಿಂದಿನ ವರ್ಷ ಬಳಕೆಯಾಗದ ಮೊತ್ತ 72.20 ಕೋಟಿ ರೂ. ಸೇರಿಸಿ, 34,293.69 ಕೋಟಿ ರೂ. ಅನುದಾನವನ್ನು ನೀಡಲಾಗಿದೆ. ಇದರಲ್ಲಿ ಶೇ. 84 ರಾಜಸ್ವ ಹಾಗೂ ಶೇ. 16 ಬಂಡವಾಳ ಮೇಲಣ ವೆಚ್ಚವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
  • ಇಂದಿನ ಸಭೆಯಲ್ಲಿ ಎಲ್ಲ ಇಲಾಖೆಗಳ ಕಾರ್ಯಕ್ರಮಗಳ ವಿವರವಾದ ಕರಡು ಕ್ರಿಯಾ ಯೋಜನೆಯ ಕುರಿತು ಚರ್ಚಿಸಿ, ಅನುಮೋದನೆ ನೀಡಲಾಯಿತು.
  • 2023-24 ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ. / ಟಿ.ಎಸ್.ಪಿ. ಅಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ67 ಕೋಟಿ , ಇಂಧನ ಇಲಾಖೆಗೆ 5400.98 ಕೋಟಿ ರೂ., ಕಂದಾಯ ಇಲಾಖೆಗೆ 4041.78 ಕೋಟಿ ರೂ., ಪರಿಶಿಷ್ಟ ಜಾತಿ ಕಲ್ಯಾಣಕ್ಕೆ 3787.29 ಕೋಟಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 2779.97 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಲಾಖೆಗೆ 2349.85 ಕೋಟಿ ರೂ., ವಸತಿ ಇಲಾಖೆಗೆ 1431.5 ಕೋಟಿ ರೂ., ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ 1387.35 ಕೋಟಿ ರೂ., ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ 1296.96 ಕೋಟಿ ರೂ., ಆರೋಗ್ಯ ಇಲಾಖೆಗೆ 1122.25 ಕೋಟಿ ರೂ. ಹಂಚಿಕೆ ಮಾಡಲಾಗಿದೆ.
  • ಮುಂದುವರೆದ ಯೋಜನೆಗಳಿಗೆ 1897 ಕೋಟಿ ರೂ. ಈ ವರೆಗೆ ವೆಚ್ಚ ಮಾಡಲಾಗಿದೆ. ಮುಂದಿನ ಎಂಟು ತಿಂಗಳಲ್ಲಿ ಇಂದು ಅನುಮೋದಿಸಲಾದ ಕ್ರಿಯಾ ಯೋಜನೆಯನ್ವಯ ಯೋಜನೆ ಅನುಷ್ಠಾನ ಮಾಡಿ, 34293.69 ಕೋಟಿ ರೂ. ಅನುದಾನ ಸಂಪೂರ್ಣ ವೆಚ್ಚ ಮಾಡಬೇಕು ಎಂದು ಸೂಚಿಸಲಾಯಿತು.
  • ಅನುದಾನದ ಸಂಪೂರ್ಣ ಸದ್ಬಳಕೆಗಾಗಿ ಅನುಮೋದಿಸಿದ ಕ್ರಿಯಾ ಯೋಜನೆಯಂತೆ ಅನುಷ್ಠಾನಗೊಳಿಸಲಾಗುವುದು. ಸಂಬಂಧಿಸಿದ ಇಲಾಖೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಅನುದಾನ ಉಳಿದರೆ, ಅದರ ಮರು ಹಂಚಿಕೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
  • ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಯೋಜನಾ ಉಸ್ತುವಾರಿ ಕೋಶ ರಚನೆ ಪ್ರಸ್ತಾವನೆ ಮಾಡಲಾಗಿತ್ತು ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ ಗಳ ಅತ್ಯುತ್ತಮ ನಿರ್ವಹಣೆಗೆ ಶ್ರೀಮತಿ ರೇಣುಕಾ ಚಿದಂಬರಂ ಅಧ್ಯಕ್ಷತೆಯ ಸಮಿತಿಯು ಸಲ್ಲಿಸಿರುವ ವರದಿಯನ್ನು ಪರಿಗಣಿಸುವಂತೆ ಪರಿಷತ್‌ ನ ಸದಸ್ಯರು ಸಲಹೆ ನೀಡಿದರು.
  • ಇದರಲ್ಲಿ ಹಳ್ಳಿಗಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶ. ವಸತಿ ಶಾಲೆಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ. 60 ಹಾಗೂ ಹೊರಗಿನ ವಿದ್ಯಾರ್ಥಿಗಳಿಗೆ ಶೇ. 40 ರಷ್ಟು ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಲು ಸೂಚಿಸಲಾಯಿತು.
  • ಪರಿಶಿಷ್ಟ ಜಾತಿ, ಪಂಗಡದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿನಿಲಯ ಸೌಲಭ್ಯ ಕಲ್ಪಿಸಬೇಕು. ಯಾವುದೇ ಕಾರಣಕ್ಕೆ ದಲಿತರ ಮಕ್ಕಳು drop out ಆಗಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
  • ದಲಿತರಿಗೆ ಎಲ್ಲೆಲ್ಲಿ ರುದ್ರಭೂಮಿ ಬೇಡಿಕೆ ಇದೆಯೊ ಅಲ್ಲಿ ರುದ್ರಭೂಮಿ ಒದಗಿಸಬೇಕು.
  • ಹಾಸ್ಟೆಲ್‌ ಮತ್ತು ವಸತಿ ಶಾಲೆಗಳಿಗೆ ಆದ್ಯತೆ ಮೇರೆಗೆ ಜಾಗ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಯಿತು.
  • ಸಭೆಯಲ್ಲಿ ರಾಜ್ಯ ಅಭಿವೃದ್ಧಿ ಪರಿಷತ್ತಿನ ಉಪಾಧ್ಯಕ್ಷ ಹಾಗೂ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ ಮಹದೇವಪ್ಪ, ಸದಸ್ಯರಾದ ಸಚಿವರುಗಳಾದ ನಾಗೇಂದ್ರ, ಹೆಚ್‌.ಕೆ. ಪಾಟೀಲ್‌, ಪ್ರಿಯಾಂಕ್‌ ಖರ್ಗೆ, ಎಂ.ಸಿ. ಸುಧಾಕರ್‌, ರಾಜ್ಯ ಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ, ಶಾಸಕರಾದ ಪಿ.ಎಂ. ನರೇಂದ್ರ ಸ್ವಾಮಿ, ಪ್ರಸಾದ ಅಬ್ಬಯ್ಯ, ಇ. ತುಕಾರಾಂ, ಪ್ರಕಾಶ ರಾಥೋಡ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಎಸ್​ಸಿಪಿ, ಟಿಎಸ್​ಪಿ ಸಭೆ ನಾಳೆ : ಸಿಎಂ ಭೇಟಿಯಾದ ಪರಮೇಶ್ವರ್​, ಪ್ರಿಯಾಂಕ್​ ಖರ್ಗೆ!

ಸಿದ್ದರಾಮಯ್ಯ ಸಂವಿಧಾನದ ಗಂಭೀರ ವಿದ್ಯಾರ್ಥಿ:

ಪರಿಷತ್ ಸಭೆ ಆರಂಭವಾಗುತ್ತಿದ್ದಂತೆ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಅವರು ತಮ್ಮ ಆರಂಭಿಕ ಮಾತುಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ,”ಸಂವಿಧಾನದ ಗಂಭೀರ ವಿದ್ಯಾರ್ಥಿ” ಎಂದು ಉಲ್ಲೇಖಿಸಿದರು. ಈ ಕಾಯ್ದೆ ಜಾರಿಗೆ ತರುವ ಹಿಂದೆ ಮುಖ್ಯಮಂತ್ರಿಗಳ ಸಾಮಾಜಿಕ ಬದ್ಧತೆಯನ್ನು ಅರ್ಥ ಮಾಡಿಕೊಳ್ಳಬೇಕು. ಮುಖ್ಯಮಂತ್ರಿಗಳ ಮತ್ತು ಕಾಯ್ದೆಯ ಆಶಯ ಮತ್ತು ಉದ್ದೇಶಕ್ಕೆ ಧಕ್ಕೆ ಆಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments