Monday, September 15, 2025
HomeUncategorized'ವಂದೇಮಾತರಂ' ದೃಶ್ಯ ಕಾವ್ಯ ಸಾರುವ ಪರಿಸರ ಕಾಳಜಿ..! ಏನಿದು ಕುಂದಾಪುರ ಯುವಜನತೆ ಹೊಸ ಪ್ರಯತ್ನ?

‘ವಂದೇಮಾತರಂ’ ದೃಶ್ಯ ಕಾವ್ಯ ಸಾರುವ ಪರಿಸರ ಕಾಳಜಿ..! ಏನಿದು ಕುಂದಾಪುರ ಯುವಜನತೆ ಹೊಸ ಪ್ರಯತ್ನ?

ಅಕ್ಟೋಬರ್ 2ರ (ನಾಳೆ) ವಿಶೇಷತೆ ಎಲ್ರಿಗೂ ಗೊತ್ತೇ ಇದೆ. ಗಾಂಧಿ ಜಯಂತಿ.., ಈ ದಿನ ದೇಶದೆಲ್ಲೆಡೆ ಸ್ವಚ್ಛ ಭಾರತ ಜಾಗೃತಿ ಅಭಿಯಾನ ನಡೆಯಲಿದೆ. ಅಂತೆಯೇ ಈ ಬಾರಿ ಪ್ಲಾಸ್ಟಿಕ್​ ವಿರುದ್ಧ ಇಡೀ ದೇಶ ಸಮರ ಸಾರುತ್ತಿದೆ. ಇದೇ ರೀತಿ ಪರಿಸರ ರಕ್ಷಣೆ ಸಂದೇಶ ಹಾಗೂ ಪ್ಲಾಸ್ಟಿಕ್ ಮಹಾಮಾರಿಯ ವಿರುದ್ಧ ಯುದ್ಧ ಸಾರಿ ಕುಂದಾಪುರ ಯುವಜನತೆ ‘ವಂದೇ ಮಾತರಂ’ ದೃಶ್ಯ ಕಾವ್ಯವನ್ನು ರಿಲೀಸ್ ಮಾಡಿದ್ದಾರೆ..!
ಹೌದು, ಲೈಫ್​ ಲೈಕ್​​ ಪ್ರೊಡಕ್ಷನ್​​ ಯು ಟ್ಯೂಬ್​​ ಚಾನಲ್​​ ‘ದಿ ಟೇಲ್​​ ಆಫ್​ ವಂದೇ ಮಾತರಂ’ ಎಂಬ ಹಾಡನ್ನು ಮಾಡಿದೆ. ಈ ಹಾಡಿನ ನಾಯಕಿ ಭೂಮಿ (ಶ್ರುತಿ ಜೈನ್) ವಿಲನ್​​ ಮಹಾಮಾರಿ ಪ್ಲಾಸ್ಟಿಕ್. ಭೂಮಿಯನ್ನು ಕಾಯುವ ದೈವ (ತುಳುನಾಡ ದೈವ ಪಾತ್ರದಲ್ಲಿ ಸತ್ಯಮಂಜು) ಭೂಮಿಯ ಜೊತಗಿನ ತನ್ನ ಸುಮಧುರ ನೆನಪುಗಳನ್ನು ಮೆಲುಕು ಹಾಕುವ ಕಥೆ ಇದು.
ಪ್ಲಾಸ್ಟಿಕ್​ ಊರೆಲ್ಲಾ ಹರಡಿ ಕಡಲನ್ನು ಸೇರಿದೆ… ಇನ್ನೂ ಸೇರುತ್ತಲೇ ಇದೆ.. ಕಡಲನ್ನು, ಭೂ ತಾಯಿಯನ್ನು ಕಲ್ಮಶಗೊಳಿಸುತ್ತಿದೆ. ಭೂಮಿ ತನ್ನ ಸೌಂದರ್ಯವನ್ನು ಕಳೆದುಕೊಂಡಿದ್ದಾಳೆ. ಭೂಮಿಯ ಹಿಂದಿನ ಚೆಲುವನ್ನು ದೈವ ಊರೆಲ್ಲಾ ಹುಡುಕುವುದೇ ಈ ಹಾಡಿನ ಜೀವಾಳ.
ವಿವಿಧ ವೃತ್ತಿಯಲ್ಲಿ ನಿರತರಾಗಿರುವ ಸ್ವಯಂ ಸೇವಕರು ಭರತ್ ಕುಂದರ್ ನೇತೃತ್ವದಲ್ಲಿ ಕ್ಲೀನ್ ಕುಂದಾಪುರ ಪ್ರಾಜೆಕ್ಟ್​ ಅನ್ನೋ ಜಲಾಂದೋಲನ ಆರಂಭಿಸಿದ್ದಾರೆ. ಈ ಮೂಲಕ ಸಮುದ್ರ ತಟವನ್ನು ಸ್ವಚ್ಛಗೊಳಿಸುವ, ಪ್ಲಾಸ್ಟಿಕ್ ಮುಕ್ತಗೊಳಿಸುವ ಮಹತ್ತರ ಕೆಲಸವನ್ನು ಮಾಡ್ತಿದ್ದಾರೆ. ಈ ತಂಡ ಲೈಫ್​ ಲೈಕ್​​ ಪ್ರೊಡಕ್ಷನ್​​ ಯು ಟ್ಯೂಬ್​​ ಚಾನಲ್​​ ಜೊತೆಗೂಡಿ ಹಾಡಿನ ಮೂಲಕ ಪರಿಸರ ರಕ್ಷಣೆಯ ಧ್ವನಿಯಾಗಿದ್ದಾರೆ.
ಇನ್ನು ಹಾಡಿನ ಪರಕಲ್ಪನೆ ಯತೀಶ್ ರೈ, ಡೇನಿಯಲ್​ ಮತ್ತು ಸುಹಿತ್ ಅವರದ್ದು. ಯತೀಶ್ ನಿರ್ದೇಶನ ಮತ್ತು ಸಿನಿಮಾಟೋಗ್ರಫಿ ಹೊಣೆಯನ್ನೂ ನಿಭಾಯಿಸಿದ್ದಾರೆ. ಸಿನಿಮಾಟೋಗ್ರಾಫಿಯಂತೂ ಬಹಳ ಅದ್ಭುತವಾಗಿದ್ದು, ಕಣ್ಮನ ಸೆಳೆಯುತ್ತಿದೆ. ಡೇನಿಯಲ್​ ಮತ್ತು ಸುಹಿತ್ ಮ್ಯೂಸಿಕ್ ನೀಡಿದ್ದಾರೆ. ಎಸ್​ಡಿಎಂ ಕಾಲೇಜಿನ ಉಪನ್ಯಾಸಕಿ ಶ್ರುತಿ ಜೈನ್​ ಭೂಮಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸದ್ಯ ಯೂಟ್ಯೂಬ್​ನಲ್ಲಿ ಈ ಹಾಡು ಸಖತ್ ಸದ್ದು ಮಾಡ್ತಾ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments