Tuesday, August 26, 2025
Google search engine
HomeUncategorizedKarnataka Budget 2024: ಸುಳ್ಳು ಸುದ್ದಿಗಳ ಪತ್ತೆಗೆ ʼಸತ್ಯ ತಪಾಸಣಾ ತಂಡʼ ರಚನೆ: ಸಿಎಂ ಸಿದ್ದರಾಮಯ್ಯ 

Karnataka Budget 2024: ಸುಳ್ಳು ಸುದ್ದಿಗಳ ಪತ್ತೆಗೆ ʼಸತ್ಯ ತಪಾಸಣಾ ತಂಡʼ ರಚನೆ: ಸಿಎಂ ಸಿದ್ದರಾಮಯ್ಯ 

ಬೆಂಗಳೂರು: ಸಮಾಜದಲ್ಲಿ ಸುಳ್ಳು ಸುದ್ದಿಗಳನ್ನು ಹರಡಿಸಿ ಸಾರ್ವಜನಿಕರಲ್ಲಿ ಅಭದ್ರತೆ ಮತ್ತು ಭಯವನ್ನು ಉಂಟು ಮಾಡುವವರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಲು ITBT ಇಲಾಖೆಯ ಸಹಯೋಗದಲ್ಲಿ ʼಸತ್ಯ ತಪಾಸಣಾ ತಂಡ’ಗಳನ್ನು ರಚಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಸತ್ಯ ತಪಾಸಣಾ ತಂಡಗಳನ್ನು ರಚಿಸುವುದರೊಂದಿಗೆ ಒಳಾಡಳಿತ ಇಲಾಖೆಯಲ್ಲಿ ಒಂದು ವಿಶೇಷ ಕೋಶವನ್ನು ರಚಿಸಿ ಅದಕ್ಕೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಅಧಿಕಾರ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ರಾಜ್ಯ ಒಳಾಡಳಿತ ಕುರಿತು ಬಜೆಟ್‌ನಲ್ಲಿ ಅವರು ನೀಡಿದ ಇತರ ಭರವಸೆಗಳು ಈ ಕೆಳಗಿನಂತಿವೆ:

1) ರಾಷ್ಟ್ರಕವಿ ಕುವೆಂಪು ಅವರು ಬಣ್ಣಿಸಿದಂತೆ ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟವಾಗಿದೆ. ನೂರಾರು ವರ್ಷಗಳಿಂದ ನಮ್ಮ ಕನ್ನಡ ನೆಲದಲ್ಲಿ ವಿವಿಧ ಧರ್ಮ, ಭಾಷೆ, ಸಂಸ್ಕೃತಿ, ಸಮುದಾಯಗಳ ಜನರು ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಆದ್ದರಿಂದ ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಗಲಭೆಯನ್ನುಂಟು ಮಾಡುವವರ ವಿರುದ್ಧ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಲಿದೆ.

2) ಡೀಪ್ ಫೇಕ್ ಮತ್ತಿತರ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಗ್ಧ ಸಾರ್ವಜನಿಕರನ್ನು ವಂಚಿಸುವ ಕೃತ್ಯ ಎಸಗುವವರ ವಿರುದ್ಧ ತನಿಖೆ ನಡೆಸಿ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳುವ ಉದ್ದೇಶದಿಂದ ರಾಜ್ಯದಲ್ಲಿ ಸೈಬರ್ ಕ್ರೈಂ ವಿಭಾಗವನ್ನು ಬಲಪಡಿಸಲು ಒಟ್ಟು 43 ಸಿ.ಇ.ಎನ್.  ಪೊಲೀಸ್ ಠಾಣೆಗಳನ್ನು ಉನ್ನತೀಕರಿಸಲಾಗುವುದು.

3) ಪೊಲೀಸ್ ಗೃಹ-2025 ಯೋಜನೆಯಡಿ ಇದುವರೆಗೆ 800 ಕೋಟಿ ರೂ.ಗಳ ವೆಚ್ಚದಲ್ಲಿ 1,128 ವಸತಿಗೃಹಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡಲಾಗಿದ್ದು, 2,956 ವಸತಿ ಗೃಹಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಯೋಜನೆಗೆ 2024-25ನೇ ಸಾಲಿನಲ್ಲಿ 200 ಕೋಟಿ ರೂ.ಗಳ ಅನುದಾನ ಒದಗಿಸಲಾಗುವುದು.

4) ಕಟ್ಟಡ ರಹಿತ ಠಾಣೆ ಮತ್ತು ಪೊಲೀಸ್ ಕಛೇರಿಗಳಿಗೆ 30 ಕೋಟಿ ರೂ.ಗಳ ವೆಚ್ಚದಲ್ಲಿ ಸ್ವಂತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು.

5) ವಿಧಿ ವಿಜ್ಞಾನ ಪ್ರಯೋಗಾಲಯಗಳ (Forensic Science Lab) ಮೊಬೈಲ್ ಫೋರೆನ್ಸಿಕ್, ಆಡಿಯೋ ಮತ್ತು ವಿಡಿಯೋ ವಿಭಾಗಗಳನ್ನು ಬಲಪಡಿಸಲು 10 ಕೋಟಿ ರೂ.ಗಳ ವೆಚ್ಚದಲ್ಲಿ ಅಗತ್ಯ ಉಪಕರಣಗಳನ್ನು ಮತ್ತು ತಂತ್ರಾಂಶಗಳನ್ನು ಒದಗಿಸಲಾಗುವುದು.

6) ರಾಜ್ಯದ ಎಲ್ಲಾ ಕಾರಾಗೃಹಗಳ ಸುಗಮ ಆಡಳಿತ ಮತ್ತು ಭದ್ರತೆಗಾಗಿ 5 ಕೋಟಿ ರೂ. ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಾಂಶ, ಬ್ಯಾಗೇಜ್ ಸ್ಕ್ಯಾನರ್ ಮುಂತಾದ ಆಧುನಿಕ ಉಪಕರಣಗಳನ್ನು ಖರೀದಿಸಲಾಗುವುದು.

7) ಶಿವಮೊಗ್ಗ ಜಿಲ್ಲೆಯಲ್ಲಿ 100 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಹೈ-ಸೆಕ್ಯೂರಿಟಿ ಕಾರಾಗೃಹವನ್ನು ನಿರ್ಮಿಸಲಾಗುವುದು.

8) ಅಗ್ನಿಶಾಮಕ ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು The Karnataka Fire Force Act, 1964 ರನ್ವಯ ರಾಜ್ಯದಲ್ಲಿ ಹೊಸದಾಗಿ ನಿರ್ಮಾಣವಾಗುವ ಬಹುಮಹಡಿ ಕಟ್ಟಡಗಳ ಆಸ್ತಿ ತೆರಿಗೆಯೊಂದಿಗೆ ಶೇ.1 ರ ದರದಲ್ಲಿ Fire Cess ಅನ್ನು ವಿಧಿಸಲಾಗುವುದು.

9) ಬೆಂಗಳೂರಿನ ಪೊಲೀಸ್ ಸುಲಿವನ್ ಮೈದಾನದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಆಸ್ಟ್ರೋ ಟರ್ಫ್ ಹಾಕಿ ಪ್ರಾಂಗಣವನ್ನು ನಿರ್ಮಿಸಲಾಗುವುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments