ಬೆಂಗಳೂರು: ಜಿಲ್ಲಾ ಪಂಚಾಯ್ತಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೆಸರೇಳಿ ವಂಚನೆ ಮಾಡಿರುವ ಆರೋಪವು ಕೇಳಿ ಬಂದಿರುವ ಹಿನ್ನೆಲೆ ಬಿಗ್ ಬಾಸ್ ರನ್ನರ್ ಅಪ್ ಡ್ರೋನ್ ಪ್ರತಾಪ್ ವಿರುದ್ದ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆಯಾಗಿದೆ.
ಇದನ್ನೂ ಓದಿ: ಪರೀಕ್ಷಾ ವೆಚ್ಚ ವಿದ್ಯಾರ್ಥಿಗಳಿಂದಲೇ ವಸೂಲಿ: ಗತಿಗೆಟ್ಟ ಸರ್ಕಾರ-HDK
ಚಂದನ್ ಕುಮಾರ್ ಗೌಡ ಎಂಬುವವರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ದೂರು ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುವುದಾಗಿ 2 ಲಕ್ಷ ಹಣ ಪಡೆದು ಪ್ರತಾಪ್ ವಂಚಿಸಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಪರಿಚಯವಿದೆ, ನಾನು ಆಗಾಗ ಕುಮಾರಸ್ವಾಮಿಯವರ ಫಾರ್ಮ್ ಹೌಸ್‌ಗೆ ಹೋಗಿ ಭೇಟಿಯಾಗುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುವುದಾಗಿ ಪ್ರತಾಪ್ ವಂಚಿಸಿರುವ ಆರೋಪ ಕೇಳಿಬಂದಿದೆ. ಬಿಗ್ ಬಾಸ್‌ನಿಂದ ಹೊರಬಂದ ನಂತರ ಕರೆ ಸ್ವೀಕರಿಸದೇ ಹಣ ಹಿಂದಿರುಗಿಸದೆ ವಂಚಿಸಲಾಗಿದೆ ಎಂದು ಪ್ರತಾಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ಚಂದನ್ ಕುಮಾರ್ ಗೌಡ ಮನವಿ ಮಾಡಿದ್ದಾರೆ.