ಹುಬ್ಬಳ್ಳಿ: ಮಹಿಳೆಯೊಬ್ಬರು ಸ್ನಾನ ಮಾಡುತ್ತಿದ್ದಾಗ ಕಾಮುಕನೊಬ್ಬ ವಿಡಿಯೊ ರೆಕಾರ್ಡ್ ಮಾಡಿ ಸಿಕ್ಕಿಬಿದ್ದಿದ್ದಾನೆ.
ಲೋಹಿಯಾ ನಗರದಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುತ್ತಿದ್ದಾಗ ದುಷ್ಟನೊಬ್ಬ ವಿಡಿಯೊ ರೆಕಾರ್ಡ್ ಮಾಡಿದ್ದಾನೆ. ಹುಬ್ಬಳ್ಳಿಯ ಗಣೇಶ ಪೇಟೆ ನಿವಾಸಿಯಾಗಿರುವ ಲಾಡ್‌ಸಾಬ್ ಎಂಬಾತ ವಿಡಿಯೊ ರೆಕಾರ್ಡ್ ಮಾಡಿ ಸರೆಸಿಕ್ಕಿದ್ದಾನೆ.
ಸ್ನಾನಕ್ಕೂ ಮೊದಲು ಬಾತ್‌ರೂಮಿನ ಕಿಟಕಿಯನ್ನು ಮಹಿಳೆ ಮುಚ್ಚಿದ್ದಳು. ಸ್ನಾನ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಬಾತ್ ರೂಮಿನ ಕಿಟಕಿ ತೆರದಿರುವುದು ಗಮನಕ್ಕೆ ಬಂದಿದೆ. ಜತೆಗೆ ಯಾರೋ ನಿಂತಿರುವುದು ಕಂಡಿದೆ. ಕೂಡಲೇ ಗಾಬರಿಗೊಂಡ ಮಹಿಳೆ ಕಿಟಕಿ ಬಳಿ ಗಮನಿಸಿದಾಗ ಈ ಕಿರಾತಕ ಮೊಬೈಲ್ ಹಿಡಿದು ರೆಕಾರ್ಡಿಂಗ್ ಮಾಡುತ್ತಿರುವುದು ಗೊತ್ತಾಗಿದೆ.
ಕೂಡಲೇ ಮಹಿಳೆ ಚೀರಿಕೊಂಡಿದ್ದಾಳೆ. ಆಕೆಯ ಚೀರಾಟ ಕೇಳಿ ಓಡಿ ಬಂದ ಮನೆ ಸದಸ್ಯರಿಗೆ ವಿಷಯವನ್ನು ಮುಟ್ಟಿಸಿದ್ದಾರೆ. ಈ ಲಾಡ್‌ಸಾಬ್ ಲೋಹಿಯಾ ನಗರದಲ್ಲಿ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ. ಮಹಿಳೆಯ ಚೀರಾಟಕ್ಕೆ ಅಕ್ಕ-ಪಕ್ಕದ ಸ್ಥಳೀಯರು ಜಮಾಯಿಸಿದ್ದಾರೆ.
ಓಡಿ ಹೋಗುತ್ತಿದ್ದ ಲಾಡ್‌ಸಾಬ್‌ನನ್ನು ಹಿಡಿದು ಬಳಿಕ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ನಂತರ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿ, ಆರೋಪಿಯನ್ನು ಒಪ್ಪಿಸಿದ್ದಾರೆ.