Sunday, August 24, 2025
Google search engine
HomeUncategorized'ಕಮಲ-ದಳ' ದೋಸ್ತಿ.. 5 ಕ್ಷೇತ್ರಗಳ ಮೇಲೆ ಕಣ್ಣಿಟ್ಟ ಕುಮಾರಸ್ವಾಮಿ

‘ಕಮಲ-ದಳ’ ದೋಸ್ತಿ.. 5 ಕ್ಷೇತ್ರಗಳ ಮೇಲೆ ಕಣ್ಣಿಟ್ಟ ಕುಮಾರಸ್ವಾಮಿ

ಬೆಂಗಳೂರು : ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಳಿಕ ಇದೀಗ ಸೀಟು ಹಂಚಿಕೆ ವಿಚಾರ ಮುನ್ನೆಲೆಗೆ ಬಂದಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಬ್ಯೂಸಿಯಿದ್ದ ಬಿಜೆಪಿ ಹೈಕಮಾಂಡ್ ನಾಯಕರು ಇದೀಗ ದಳಪತಿಗಳಿಗೆ ಬುಲಾವ್ ನೀಡಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಆಗಿದ್ದು, ಸೀಟು ಹಂಚಿಕೆ ವಿಚಾರ ಮುನ್ನೆಲೆಗೆ ಬಂದಿದೆ. ಈ ಸಂಬಂಧ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿ ಅಂತಿಮಗೊಳಿಸಲು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನೂ, ಜೆಡಿಎಸ್‌ ವರಿಷ್ಠ ಹೆಚ್.ಡಿ. ದೇವೇಗೌಡರು ಸಹ ದೆಹಲಿಯಲ್ಲಿಯೇ ತಂಗಿದ್ದಾರೆ. ಹೀಗಾಗಿ, ಬಿಜೆಪಿ ವರಿಷ್ಠರ ಜೊತೆ ಚರ್ಚಿಸಲು ಸೂಕ್ತವಾಗಿದೆ.

ಸೀಟು ಹಂಚಿಕೆ ವಿಚಾರವಾಗಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಸಮಾಲೋಚನೆ ನಡೆಸಿ ಅಂತಿಮಗೊಳಿಸುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆಗೆ ಜೆಡಿಎಸ್ 4ರಿಂದ 5 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಆಕಾಂಕ್ಷೆಯನ್ನು ಹೊಂದಿದೆ. ಈ ವಿಚಾರವಾಗಿ ಬಿಜೆಪಿ ವರಿಷ್ಠರೊಂದಿಗೆ ಪ್ರಸ್ತಾಪಿಸಿ ಚರ್ಚಿಸಲಾಗುವುದು.

ಹಾಸನದ ಜೊತೆ 4 ಕ್ಷೇತ್ರಕ್ಕೆ ದಳಪತಿಗಳ ಪಟ್ಟು?

ಈಗಾಗಲೇ ಹಾಸನ ಜೆಡಿಎಸ್‌ ಹಿಡಿತದಲ್ಲಿದ್ದು, ಈ ಕ್ಷೇತ್ರದ ಜೊತೆಗೆ ತುಮಕೂರು, ಕೋಲಾರ ಮತ್ತು ಉತ್ತರ ಕರ್ನಾಟಕದ ಒಂದು ಕ್ಷೇತ್ರ ಸೇರಿದಂತೆ ನಾಲ್ಕೈದು ಸ್ಥಾನಗಳನ್ನು ನೀಡುವಂತೆ ಕೇಳುವ ಸಾಧ್ಯತೆ ಇದೆ. ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲಿಯೇ ಈ ವಿಚಾರವನ್ನ ಚರ್ಚೆ ನಡೆಸಲಾಗುತ್ತದೆ ಎನ್ನಲಾಗಿದೆ.

ವಿಜಯೇಂದ್ರಗೂ ಹೈಕಮಾಂಡ್ ಬುಲಾವ್

ಮೈತ್ರಿ ವಿಚಾರವಾಗಿ ಈ ಹಿಂದೆ ಕೂಡ ಕುಮಾರಸ್ವಾಮಿ ರಾಜ್ಯ ಬಿಜೆಪಿ ಮುಖಂಡರೊಂದಿಗೆ ಚರ್ಚೆ ನಡೆಸಿರಲಿಲ್ಲ. ಈ ಬಾರಿ ರಾಜ್ಯ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಲು ಮುಂದಾಗಿದ್ದಾರೆ. ಹೀಗಾಗಿ, ಬಿಜೆಪಿ ‌ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೂ ಹೈಕಮಾಂಡ್ ಬುಲಾವ್ ನೀಡಿದೆ. ಕುಮಾರಸ್ವಾಮಿ ದೆಹಲಿಗೆ ಹೋಗಿರೋ ಬೆನ್ನಲ್ಲೇ ವಿಜಯೇಂದ್ರ ‌ಕೂಡ ದೆಹಲಿಗೆ ತೆರಳಿದ್ದಾರೆ. ಮೈತ್ರಿ ಸೀಟು ಹಂಚಿಕೆ ಚರ್ಚೆ ವೇಳೆ ವಿಜಯೇಂದ್ರ ‌ಕೂಡ ಇರಲಿದ್ದು ಕುತೂಹಲ ‌ಹೆಚ್ಚಿಸಿದೆ.

ಹೆಚ್​ಡಿಕೆಗೆ ರಾಷ್ಟ್ರ ರಾಜಕಾರಣಕ್ಕೆ ಆಫರ್

ಜೆಡಿಎಸ್​ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಬೇಕಿದೆ. ಹೀಗಾಗಿ, ಉಭಯ ಪಕ್ಷಗಳ ವರಿಷ್ಠರು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದ್ದಾರೆ. ಸೀಟು‌ ಹಂಚಿಕೆಯನ್ನ ಅತ್ಯಂತ ಎಚ್ಚರಿಕೆಯಿಂದ ಮಾಡಬೇಕಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಇನ್ನಷ್ಟು ಬಲತುಂಬುವ ನಿಟ್ಟಿನಲ್ಲಿ ಕುಮಾರಸ್ವಾಮಿಗೆ ಕೇಂದ್ರ ರಾಜಕೀಯಕ್ಕೆ ಎಂಟ್ರಿ ಕೊಡೊದಕ್ಕೂ ಬಿಜೆಪಿ ಹೈಕಮಾಂಡ್ ಆಫರ್ ಕೊಟ್ಟಿದೆ. ಕ್ಷೇತ್ರಗಳ ಹಂಚಿಕೆಯ ಮಾತುಕತೆಯ ಸಮಯದಲ್ಲಿಯೇ ಇದೇ ವಿಚಾರವು ಫೈನಲ್ ಆಗುವ ಸಾಧ್ಯತೆ ಇದೆ.

ಮೈತ್ರಿಯ ಮಾತುಕತೆಯಲ್ಲಿ ಅಂದುಕೊಂಡಂತೆ ಜೆಡಿಎಸ್ ನಾಯಕರಿಗೆ ಮಣೆ ಹಾಕ್ತಾರಾ? ಕ್ಷೇತ್ರ ಹಂಚಿಕೆ ವಿಚಾರದಲ್ಲಿ ದಳಪತಿಗಳಿಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡುತ್ತಾ? ಅನ್ನೋದನ್ನ ಕಾದುನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments