ನವದೆಹಲಿ: ದೇಶ ಕಂಡ ಅಪ್ರತಿಮ ರಾಜಕಾರಣಿ, ಕೇಂದ್ರ ಮಾಜಿ ಸಚಿವ ಅರುಣ್ ಜೇಟ್ಲಿಯವರು ಇನ್ನು ನೆನಪು ಮಾತ್ರ. ತೀವ್ರ ಅಸೌಖ್ಯದಿಂದ ನಿನ್ನೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದ ಅವರು ಇಂದು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ದೆಹಲಿಯ ಯಮುನಾ ತಟದ ನಿಗಮ್‌ಬೋಧ್ ಘಾಟ್‌ನಲ್ಲಿ ಅರುಣ್ ಜೇಟ್ಲಿಯವರ ಅಂತ್ಯಕ್ರಿಯೆ ನೆರವೇರಿತು.
ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಜೇಟ್ಲಿಯವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲಾಯಿತು. ಬಳಿಕ ನಿಗಮ್‌ಬೋಧ್ ಘಾಟ್‌ವರೆಗೆ ಮೆರವಣಿಗೆಯಲ್ಲಿ ತರಲಾಯಿತು. ಅಲ್ಲಿ ಅಂತಿಮ ವಿಧಿ ವಿಧಾನದ ನಂತರ ಅರುಣ್ ಜೇಟ್ಲಿಯವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಚಿವೆ ಸೃತಿ ಇರಾನಿ, ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.