Friday, September 12, 2025
HomeUncategorizedಸ್ವಚ್ಛ ನಗರಕ್ಕೆ ಯುವಕರ ಸಂಕಲ್ಪ

ಸ್ವಚ್ಛ ನಗರಕ್ಕೆ ಯುವಕರ ಸಂಕಲ್ಪ

ವಿಜಯಪುರ : ಗುಮ್ಮಟನಗರಿ ವಿಜಯಪುರದಲ್ಲಿ ಯುವಕರ ತಂಡವೊಂದು ಸ್ವಚ್ಛ ನಗರಕ್ಕಾಗಿ ಟೊಂಕ ಕಟ್ಟಿ ನಿಂತಿದೆ. ದುಡಿದ ಅಲ್ಪ ಹಣವನ್ನು ಸ್ವಚ್ಛನಗರಕ್ಕಾಗಿ ಬಳಸುತ್ತಿದ್ದು, ರಜಾದಿನದಲ್ಲಿ ಬಸ್ ನಿಲ್ದಾಣ, ಮಾರುಕಟ್ಟೆ, ಐತಿಹಾಸಿಕ ಕೇಂದ್ರಗಳನ್ನು ಚಂದಗೊಳಿಸಲು ತೊಡಗಿಕೊಂಡಿದ್ದಾರೆ.

ಗುಮ್ಮಟನಗರಿ ವಿಜಯಪುರದಲ್ಲಿ ಯುವಕರ ತಂಡವೊಂದು ಸಮಾಜಮುಖಿ ಸಂಕಲ್ಪ ಮಾಡಿದೆ. ಅದೇನಂದ್ರೆ ಐತಿಹಾಸಿಕ ವಿಜಯಪುರ ನಗರವನ್ನು ಸ್ವಚ್ಛ ಸುಂದರ ನಗರವನ್ನಾಗಿಸೋದು. 15 ಜನ ಸಮಾನ ಮನಸ್ಕ ಯುವಕರು ಸೇರಿಕೊಂಡು ಗಾನಯೋಗಿ ಸಂಘ ಕಟ್ಟಿಕೊಂಡಿದ್ದಾರೆ. ಇವರ ಯಾರು ಸರ್ಕಾರಿ ಕೆಲಸ ಮಾಡುತ್ತಿಲ್ಲ.ವಿವಿಧೆಡೆ ಖಾಸಗಿ ಉದ್ಯೋಗಿಗಳಾಗಿ ದುಡಿಮೆ ಮಾಡಿ,ಅಲ್ಪ ಹಣವನ್ನು ಸಮಾಜ ಸೇವೆಗೆ ಮೀಸಲಿಟ್ಟು ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯಕ್ಕಿಳಿಯುತ್ತಾರೆ. ನಗರದಲ್ಲಿರುವ ಬಸ್ ನಿಲ್ದಾಣ ಶುಚಿಗೊಳಿಸಿ, ಬಣ್ಣ ಬಳಿಯುತ್ತಿದ್ದಾರೆ. ಜೊತೆಗೆ ನಮ್ಮ ಇತಿಹಾಸವನ್ನು ವಿದ್ಯಾರ್ಥಿಗಳು, ಜನಸಾಮಾನ್ಯರಿಗೆ ಪರಿಚಯಿಸೋ ಕಾರ್ಯ ಮಾಡ್ತಿದ್ದಾರೆ. ಆದಿಲ್ ಶಾಹಿ ನೆಲೆಯಲ್ಲಿ ಇಮ್ಮಡಿ ಪುಲಕೇಶಿ ಸಾಧನೆ ಬೋರ್ಡ್ ಹಾಕಿ ಬಸ್ ನಿಲ್ದಾಣದಲ್ಲಿ ಜನರು ಕುಳಿತಾಗ ಓದಿ ಇತಿಹಾಸ ಅರಿತುಕೊಳ್ಳಲಿ ಅನ್ನೋದು ಯುವಕರ ಆಶಯ.

ಇನ್ನು ಗಾನಯೋಗಿ ಸಂಘದ ಯುವಕರು ವಿಜಯಪುರ ನಗರದಲ್ಲಿರುವ ಪುರಾತನ ಬಾವಿಯನ್ನು ಈಗಾಗಲೇ ಶುಚಿಗೊಳಿಸಿದ್ದಾರೆ.ಜೊತೆಗೆ ಮಾರುಕಟ್ಟೆ ಶುಚಿಗೊಳಿಸಿ ಮಹನೀಯರ ಚಿತ್ರಗಳನ್ನು ಬಿಡಿಸಿದ್ದಾರೆ.
ರಸ್ತೆಯಲ್ಲಿ ಗುಂಡಿ ಬಿದ್ದಿರೋದು ಕಂಡ್ರೆ ಅದನ್ನು ಮುಚ್ಚುವ ಕೆಲ್ಸ ಕೂಡಾ ಮಾಡುತ್ತಾರೆ. ರಜಾ ದಿನಗಳನ್ನು ಸಮಾಜಮುಖಿ ಕಾರ್ಯಕ್ಕೆ ಬಳಸಿಕೊಳ್ತಿದ್ದಾರೆ. ಯುವಕರು ಮೊಬೈಲ್‌ನಲ್ಲಿ ಕಾಲಹರಣ ಮಾಡದೇ, ತಮ್ಮ ಸುತ್ತಲಿನ ಪ್ರದೇಶ ಶುಚಿಯಾಗಿಸಿದ್ರೆ ಸ್ವಚ್ಛ ಭಾರತದ ಕನಸು ಸಾಕಾರವಾಗುತ್ತದೆ. ವಿಜಯಪುರ ಐತಿಹಾಸಿಕ ನಗರ. ಈ ನಗರವನ್ನು ಸ್ವಚ್ಛ ಸುಂದರ ನಗರವನ್ನಾಗಿಸಲು ಪಣ ತೊಟ್ಟಿದ್ದೇವೆ. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಕಾರ್ಯದ ಮೂಲಕ ಯುವಕರಿಗೆ ಪ್ರೇರಣೆ ನೀಡುತ್ತಿದ್ದೇವೆ ಅಂತಿದ್ದಾರೆ ತಂಡದ ಮುಖ್ಯಸ್ಥ.

ಒಟ್ಟಿನಲ್ಲಿ ಎಲ್ಲವೂ ಸರ್ಕಾರವೇ ಮಾಡ್ಲಿ ಅಂತ ಯುವಕರು ಕೈಕಟ್ಟಿ ಕುಳಿತುಕೊಳ್ಳದೇ ಸ್ವಚ್ಛತಾ ಕಾರ್ಯ ಮಾಡ್ತಿದ್ದಾರೆ. ಯುವಕರ ತಂಡ ದುಡಿದ ಕಡಿಮೆ ಹಣದಲ್ಲಿ ಸ್ವಚ್ಛ ನಗರ ಕನಸು ನನಸು ಮಾಡುವತ್ತ ಹೆಜ್ಜೆಯಿಟ್ಟಿದೆ. ಇವರ ಕಾರ್ಯಕ್ಕೆ ನಾವು ಕೂಡಾ ಶಹಬ್ಬಾಶ್ ಎನ್ನಲೇಬೇಕು.

RELATED ARTICLES
- Advertisment -
Google search engine

Most Popular

Recent Comments