Thursday, September 11, 2025
HomeUncategorizedಮಲೆನಾಡಿನಲ್ಲಿ ವರ್ಷಧಾರೆಗೆ ವಿರಾಮ - ಜಲಾಶಯದ ಮಟ್ಟದಲ್ಲಿ ಏರುಗತಿ.

ಮಲೆನಾಡಿನಲ್ಲಿ ವರ್ಷಧಾರೆಗೆ ವಿರಾಮ – ಜಲಾಶಯದ ಮಟ್ಟದಲ್ಲಿ ಏರುಗತಿ.

ಶಿವಮೊಗ್ಗ : ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಒಂದೇ ಸಮನೆ ಸುರಿಯುತ್ತಿದ್ದ ವರ್ಷಧಾರೆ ಅಲ್ಪ ವಿರಾಮ ನೀಡಿದೆಯಾದರೂ, ಘಟ್ಟಪ್ರದೇಶ ಮತ್ತು ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ತುಂಗಾ, ಲಿಂಗನಮಕ್ಕಿ ಹಾಗೂ ಭದ್ರಾ ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಕಳೆದೊಂದು ವಾರದಲ್ಲಿ ಭದ್ರಾ ಜಲಾಶಯ 18 ಅಡಿ ಹಾಗೂ ಲಿಂಗನಮಕ್ಕಿ ಜಲಾಶಯ 19 ಅಡಿಯಷ್ಟು ಭರ್ತಿಯಾಗಿದೆ. ತುಂಗಾ ಜಲಾನಯದ ಪ್ರದೇಶದಲ್ಲಿ ಮಳೆ ಬಿರುಸುಗೊಂಡಿದ್ದು, ಶೃಂಗೇರಿ, ಕೊಪ್ಪ, ಆಗುಂಬೆ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ತುಂಗಾ ನದಿಅಪಾಯ ಮಟ್ಟದಲ್ಲೇ ಹರಿಯುತ್ತಿದೆ. ಶರಾವತಿ ಹಾಗೂ ಭದ್ರಾ ಜಲಾನಯನ ಪ್ರದೇಶದಲ್ಲೂ ವ್ಯಾಪಕ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ವ್ಯಾಪಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕಳೆದ ಒಂದು ವಾರದಿಂದ ಆಶ್ಲೇಷ ಮಳೆ ಜಿಲ್ಲೆಯಲ್ಲಿ ಅಬ್ಬರಿಸತೊಡಗಿದ್ದು, ಪರಿಣಾಮ ಜಿಲ್ಲೆಯ ಪ್ರಮುಖ ನದಿಗಳು ಜೀವಕಳೆ ಪಡೆದುಕೊಂಡಿದೆ. ಮುಖ್ಯವಾಗಿ ತುಂಗಾ, ಭದ್ರಾ ಹಾಗೂ ಶರಾವತಿ ನದಿಗಳ ಒಳಹರಿವು ಹೆಚ್ಚಾಗಿದೆ.

ಅಂದಹಾಗೆ, ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಮಳೆರಾಯ ಸಂಪೂರ್ಣ ಮುನಿಸಿಕೊಂಡಿದ್ದ. ಆಗೊಂದು ಈಗೊಂದು ಮಳೆ ಬಂದಿದ್ದರೂ ಜಲಾಶಯಕ್ಕೆ ನೀರು ನಿರೀಕ್ಷಿತ ಪ್ರಮಾಣದಲ್ಲಿ ಹರಿದುಬಂದಿರಲಿಲ್ಲ. ಇತ್ತ ರೈತರು ಕೃಷಿ ಚಟುವಟಿಕೆಗಳತ್ತ ಮುಖ ಮಾಡಿದ್ದರೂ ಕೂಡ, ಮಳೆಯಿಲ್ಲದೆ ಕಂಗಾಲಾಗಿದ್ದರು. ಆದರೆ ಆಶ್ಲೇಷ ಮಳೆ ರೈತರ ಆತಂಕ ದೂರ ಮಾಡಿದೆ. ಜಲಾಶಯಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಅಚ್ಚುಕಟ್ಟು ಭಾಗದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಇನ್ನು ಶಿವಮೊಗ್ಗ ತಾಲೂಕಿನಲ್ಲಿ 58 ಮಿ.ಮೀ. ಅತಿ ಹೆಚ್ಚು ಮಳೆಯಾಗಿದೆ. ಉಳಿದಂತೆ ಭದ್ರಾವತಿ-14.40 ಮಿ.ಮೀ., ತೀರ್ಥಹಳ್ಳಿ-41 ಮಿ.ಮೀ., ಸಾಗರ-33.04 ಮಿ.ಮೀ., ಶಿಕಾರಿಪುರ-9.60 ಮಿ.ಮೀ., ಸೊರಬ-40.40 ಮಿ.ಮೀ., ಹಾಗೂ ಹೊಸನಗರ ತಾಲೂಕಿನಲ್ಲಿ 36.20 ಮಿ.ಮೀ. ಮಳೆ ದಾಖಲಾಗಿದೆ. ವಾಡಿಕೆಯಂತೆ ಸರಾಸರಿ 417.87 ಮಿ.ಮೀ. ಮಳೆಯಾಗಬೇಕಿದ್ದು, ಇಲ್ಲಿಯವರೆಗೆ 444.04 ಮಳೆ ಬಿದ್ದಿದ್ದು, ವಾಡಿಕೆಗಿಂತ ಅಲ್ಪ ಹೆಚ್ಚಾಗಿಯೇ ಮಳೆಯಾಗಿದೆ.

ತುಂಗಾ ಜಲಾಶಯ :-
ಸಾಮರ್ಥ್ಯ – 26 ಟಿ.ಎಂ.ಸಿ.
ಜಲಾಶಯದ ಮಟ್ಟ – 588.24 ಮೀ.
ಇಂದಿನ ನೀರಿನ ಮಟ್ಟ – 587.08 ಮೀ.
ಒಳ ಹರಿವು – 50,601 ಕ್ಯೂಸೆಕ್
*ಹೊರ ಹರಿವು – 50,601 ಕ್ಯೂಸೆಕ್ *

ಭದ್ರಾ (ಬಿ.ಆರ್.ಪಿ.) ಜಲಾಶಯ :-
ಸಾಮರ್ಥ್ಯ – 75 ಟಿ.ಎಂ.ಸಿ.
ಜಲಾಶಯದ ಮಟ್ಟ – 186 ಅಡಿ.
ಇಂದಿನ ನೀರಿನ ಮಟ್ಟ – 173.00 ಅಡಿ
ಒಳ ಹರಿವು – 18,331 ಕ್ಯೂಸೆಕ್
ಹೊರ ಹರಿವು – 2,902 ಕ್ಯೂಸೆಕ್

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments