‘ಭವ್ಯ ರಾಮನಗರ’ ನಿರ್ಮಾಣಕ್ಕೆ ಡಬಲ್ ಇಂಜಿನ್ ಸರ್ಕಾರ ಬದ್ಧ : ಸಚಿವ ಅಶ್ವತ್ಥನಾರಾಯಣ

ರಾಮನಗರ : ಡಬಲ್‌ ಇಂಜಿನ್‌ ಸರ್ಕಾರ ‘ಭವ್ಯ ರಾಮನಗರ’ ನಿರ್ಮಾಣ ಬದ್ಧವಾಗಿದೆ. ಜನತೆಯ ಆಶೀರ್ವಾದ ನಮ್ಮ ಜತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಭರವಸೆ ನೀಡಿದರು.

ತಾಲೂಕಿನ ಬಿಸ್ಕೂರು, ತಿಪ್ಪಸಂದ್ರ, ಕುದೂರು, ಸಂಕೀಘಟ್ಟ, ಉಳುವನಹಳ್ಳಿ, ವಿರುಪಾಪುರ, ಹೊನ್ನಾಪುರ, ಸುಗ್ಗನಹಳ್ಳಿ, ಉಳಕಲ್ಲ, ಮರೂರು ಮತ್ತಿತರ ಕಡೆಗಳಲ್ಲಿ ಮಾಗಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಸಾದ್ ಗೌಡ ಪರವಾಗಿ ಪ್ರಚಾರ ನಡೆಸಿ ಅವರು ಮಾತನಾಡಿದರು.

ರಾಜ್ಯದ ಬಿಜೆಪಿ ಸರ್ಕಾರವು ತಾಲೂಕಿನಲ್ಲಿ ಈ ಹಿಂದೆ 70 ವರ್ಷಗಳಲ್ಲಿ ಮಾಡಿರದಿದ್ದ ಅಭಿವೃದ್ಧಿ ಕಾರ್ಯಗಳನ್ನು ಕೇವಲ ಮೂರುವರೆ ವರ್ಷಗಳಲ್ಲಿ ಮಾಡಿ ತೋರಿಸಿದೆ ಎಂದು ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು.

ಮಾಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಸಾದ್ ಗೌಡ ಪರ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಪ್ರಚಾರ ನಡೆಸಿದರು.

ಕಾಂಗ್ರೆಸ್ ಪಕ್ಷವು ದೇಶಭಕ್ತರ ಸಂಘಟನೆಯಾದ ಬಜರಂಗದಳವನ್ನು ಭಯೋತ್ಪಾದಕ ಸಂಘಟನೆಯದ ಪಿಎಫ್ಐ ನೊಂದಿಗೆ ಒಂದೇ ತಕ್ಕಡಿಯಲ್ಲಿ ಇಟ್ಟು ತೂಗಿದೆ. ಇದು ಅವರ ಓಲೈಕೆ ರಾಜಕಾರಣಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಜನರನ್ನು ಎತ್ತಿಕಟ್ಟಿದ್ದೇ ಸಾಧನೆ

ಈ ಬಾರಿ ಬಿಜೆಪಿ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಅಂತಹ ಸಂದರ್ಭದಲ್ಲಿ ಮಾಗಡಿ ಕ್ಷೇತ್ರದಿಂದಲೂ ಪಕ್ಷದ ಅಭ್ಯರ್ಥಿಯು ವಿಧಾನಸಭೆಯಲ್ಲಿ ಇರುವಂತೆ ನೋಡಿಕೊಳ್ಳಿ. ಕ್ಷೇತ್ರದಲ್ಲಿ ಈ ಹಿಂದೆ ಬೇರೆ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಿದ್ದೀರಿ. ಅವರೆಲ್ಲ ತಾಲೂಕಿನ ಅಭಿವೃದ್ಧಿಗಾಗಿ ಕೆಲಸ ಮಾಡುವುದನ್ನು ಮರೆತು ಜನರನ್ನು ಪರಸ್ಪರ ಎತ್ತಿಕಟ್ಟುವ ಕೆಲಸವನ್ನಷ್ಟೇ ಮಾಡಿದರು. ಇದರಿಂದ ಬೆಂಗಳೂರಿಗೆ ಹತ್ತಿರವಿದ್ದರೂ ಮಾಗಡಿ ಹಿಂದುಳಿಯುವಂತಾಯಿತು ಎಂದು ತಿಳಿಸಿದರು.

ಇದನ್ನೂ ಓದಿ : ಮಲ್ಲೇಶ್ವರದ ಮನೆ ಮನೆಯಲ್ಲೂ ‘ಕಮಲ ಅರಳಲಿದೆ’ : ಅಶ್ವತ್ಥನಾರಾಯಣ

ಎತ್ತಿನಹೊಳೆಗೆ 25 ಸಾವಿರ ಕೋಟಿ

ಈಗ ಬಿಜೆಪಿ ಸರ್ಕಾರವು ತಾಲೂಕಿನ ಕೆರೆಗಳನ್ನು ತುಂಬಿಸುವ ಶ್ರೀರಂಗ, ಮಂಚನಬೆಲೆ ಮತ್ತು ವೈಜಿ ಗುಡ್ಡ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಎತ್ತಿನಹೊಳೆ ನೀರಾವರಿ ಯೋಜನೆಗಾಗಿ 25 ಸಾವಿರ ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ. ಅದೇ ರೀತಿ, ಜಲಜೀವನ್ ಮಿಷನ್ ಯೋಜನೆ ಅಡಿ ಹಳ್ಳಿ ಹಳ್ಳಿಗೂ ಕೊಳಾಯಿ ಮೂಲಕ ನದಿ ನೀರಿನ ಶುದ್ಧ ನೀರು ಪೂರೈಸಲು ಕ್ರಮ ವಹಿಸಲಾಗಿದೆ ಎಂದರು.

ಬಿಡದಿಯಲ್ಲಿ ಪಾಲಿಟೆಕ್ನಿಕ್ ಸ್ಥಾಪನೆ

ತಿಪ್ಪಸಂದ್ರದಲ್ಲಿ 64 ಕೋಟಿ ರೂಪಾಯಿ ವೆಚ್ಚದಲ್ಲಿ ಜಿಟಿಟಿಸಿ ಕೇಂದ್ರವನ್ನು ಒಂದೇ ವರ್ಷ ಅವಧಿ ಒಳಗೆ ಸ್ಥಾಪಿಸಲಾಗಿದೆ. ಇಡೀ ದೇಶದಲ್ಲೇ ದೊಡ್ಡದಾದ ಸಂಸ್ಕೃತ ವಿಶ್ವವಿದ್ಯಾಲಯ ತಿಪ್ಪಸಂದ್ರದಲ್ಲಿ ತಲೆಯೆತ್ತಲಿದೆ. ಬಿಡದಿಯಲ್ಲಿ 34 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪಾಲಿಟೆಕ್ನಿಕ್ ಸ್ಥಾಪನೆಯಾಗಲಿದೆ. ಸಂಕೀಘಟ್ಟದಲ್ಲಿ ಮಾದರಿ ಗ್ರಾಮ ಪಂಚಾಯಿತಿ ಶಾಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದರು.

ಪ್ರಚಾರದ ವೇಳೆ ನೆರೆದಿದ್ದ ಜನರು ಬಿಜೆಪಿ ಪರವಾಗಿ ಘೋಷಣೆಗಳನ್ನು ಕೂಗಿ ಜೈಕಾರ ಹಾಕಿದರು. ಇದೇ ವೇಳೆ ಅಶ್ವತನಾರಾಯಣ, ಅಭ್ಯರ್ಥಿ ಪ್ರಸಾದ್ ಗೌಡ ಅವರಿಗೆ ದೊಡ್ಡ ಹೂವಿನ ಹಾರ ಹಾಕಿ ಶುಭ ಕೋರಿದರು‌. ಹೂವಿನ ಪಕಳೆಗಳ ಮಳೆ ಸುರಿಸಿ ಹಾರೈಸಿದರು. ಅಭ್ಯರ್ಥಿ ಪ್ರಸಾದ್ ಗೌಡ, ಮುಖಂಡರಾದ ಜಯಪ್ರಕಾಶ್, ಶಿವು, ಧನಂಜಯ ಮತ್ತಿತರಿದ್ದರು.

RELATED ARTICLES

Related Articles

TRENDING ARTICLES