Monday, August 25, 2025
Google search engine
HomeUncategorizedಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ

ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಸರ್ಕಾರ ಸಂವಿಧಾನದ ಆಶಯಗಳಿಗೆ ತಕ್ಕಂತೆ ಆದಿವಾಸಿ, ಬುಡಕಟ್ಟು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಈ ಕುರಿತು ಯಾವುದೇ ಆತಂಕ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿ ಶೇ 100 ರಷ್ಟು ಬಿತ್ತನೆಯಾಗುವ ನಿರೀಕ್ಷೆ: ಸಿಎಂ

ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿಯಾದ ಆಲ್‌ ಇಂಡಿಯಾ ಮುಸ್ಲಿಂ ಪರ್ಸನಲ್‌ ಲಾ ಬೋರ್ಡ್‌ ನ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ನಿಯೋಗದ ಮುಖಂಡರು ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ಮುಸ್ಲಿಮರು, ಆದಿವಾಸಿ, ಬುಡಕಟ್ಟು ಹಾಗೂ ಇನ್ನಿತರೆ ಅಲ್ಪಸಂಖ್ಯಾತ ಹಕ್ಕುಗಳಿಗೆ, ಕಾನೂನಿಗೆ ಧಕ್ಕೆಯಾಗುವ ಕುರಿತು ಆತಂಕ ವ್ಯಕ್ತಪಡಿಸಿದರು.

ಹಿಂದಿನ ಕಾನೂನು ಆಯೋಗವು ವೈವಿಧ್ಯತೆ ಇರುವ ಈ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಅನುಷ್ಠಾನ ಕಾರ್ಯಸಾಧ್ಯವಲ್ಲ ಎಂದು ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಇದೀಗ ಮತ್ತೆ ಈ ಕುರಿತು ಪರಿಶೀಲಿಸುವಂತೆ ಪ್ರಸಕ್ತ ಕಾನೂನು ಆಯೋಗಕ್ಕೆ ಕೇಂದ್ರ ಸರ್ಕಾರ ತಿಳಿಸಿದೆ. ಅದರಂತೆ ಕಾನೂನು ಆಯೋಗವು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿದೆ. ತಮ್ಮ ಬೋರ್ಡ್‌ನ ವತಿಯಿಂದ ಏಕರೂಪ ನಾಗರಿಕ ಸಂಹಿತೆ ಜಾರಿ ವಿರೋಧಿಸಿ ಒಂದು ಕೋಟಿಗೂ ಹೆಚ್ಚು ಸಹಿ ಸಂಗ್ರಹ ಮಾಡಿ ಕಾನೂನು ಆಯೋಗಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಬುರ್ಕಾ ಧರಿಸದೇ ಬಂದ ವಿದ್ಯಾರ್ಥಿನಿಯರನ್ನು ಬಸ್​ ನಿಂದ ಕೆಳಗಿಳಿಸಿದ ಬಸ್ ಚಾಲಕ!

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಏಕರೂಪ ನಾಗರಿಕ ಸಂಹಿತೆಯ ಕರಡು ಪ್ರಕಟವಾದ ನಂತರ ಪರಿಶೀಲಿಸಿ ಪ್ರತಿಕ್ರಿಯಿಸಲಾಗುವುದು. ಅಲ್ಪಸಂಖ್ಯಾತರ ಹಕ್ಕುಗಳ ದಮನಕ್ಕೆ ತಮ್ಮ ಸರ್ಕಾರ ಎಂದಿಗೂ ಅವಕಾಶ ನೀಡದು. ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅನಗತ್ಯ ವಿವಾದ ಸೃಷ್ಟಿಸುತ್ತಿದೆ  ಎಂದು ಎಂದರು.

ಇದೇ ಸಂದರ್ಭದಲ್ಲಿ ನಿಯೋಗದ ಸದಸ್ಯರು ವಕ್ಫ್‌ ಆಸ್ತಿಗಳ ರಕ್ಷಣೆ ಮಾಡುವಂತೆಯೂ ಮುಸ್ಲಿಂ ಮುಖಂಡರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಭೆಯಲ್ಲಿ ಮಾಜಿ ಉಪಾಧ್ಯಕ್ಷ ಕೆ. ರೆಹಮಾನ್‌ ಖಾನ್‌, ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್. ಜಮೀರ್‌ ಅಹ್ಮದ್‌ ಖಾನ್‌, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ್‌, ಶಾಸಕ ರಿಜ್ವಾನ್‌ ಅರ್ಷದ್‌, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಝೀರ್‌ ಅಹ್ಮದ್‌, ಮೌಲಾನಾ ಸೈಯದ್‌ ಮುಸ್ತಫಾ ರಫಾಯಿ ನದ್ವಿ, ಮೌಲಾನಾ ಸೈಯದ್‌ ಮುಹಮ್ಮದ್‌ ತನ್ವೀರ್‌ ಹಶ್ಮಿ, ಮೌಲಾನಾ ಶಬೀರ್‌ ಅಹ್ಮದ್‌ ಹುಸೈನಿ ನದ್ವಿ, ಮುಫ್ತಿ ಇಫ್ತಿಕಾರ್‌ ಅಹ್ಮದ್‌ ಕಾಸ್ಮಿ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments