Monday, August 25, 2025
Google search engine
HomeUncategorizedನಂದಿನಿ ಮುಗಿಸಲು ಬಿಜೆಪಿ 3ನೇ ಸಂಚು : ಕುಮಾರಸ್ವಾಮಿ ಕಿಡಿ

ನಂದಿನಿ ಮುಗಿಸಲು ಬಿಜೆಪಿ 3ನೇ ಸಂಚು : ಕುಮಾರಸ್ವಾಮಿ ಕಿಡಿ

ಬೆಂಗಳೂರು : ಕನ್ನಡದ ನಂದಿನಿಯನ್ನು ಗುಜರಾತ್‌ನ ಅಮೂಲ್ ನುಂಗಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವಿಟ್ ಮಾಡಿದ ಅವರು, ಕನ್ನಡಿಗರ ಜೀವನಾಡಿ ನಂದಿನಿಯನ್ನು ಮುಗಿಸಲು ಈಗ 3ನೇ ಸಂಚು ನಡೆದಿದೆ. ಅಮೂಲ್ ಜತೆ ನಂದಿನಿ ವಿಲೀನ, ಗೃಹ ಸಚಿವ ಅಮಿತ್ ಶಾ ಹೇಳಿಕೆ 1ನೇ ಸಂಚು. ಮೊಸರಿನ ಮೇಲೆ ಹಿಂದಿ ದಹಿ ಪದ ಮುದ್ರಣ 2ನೇ ಸಂಚು ಮಾಡಿದ್ದು ವಿಫಲಗೊಂಡಿದೆ. ಈಗ 3ನೇ ಸಂಚು ಸಫಲಗೊಳಿಸಲು ಅಮೂಲ್ ಮೂಲಕ ಕೇಂದ್ರ ಸರ್ಕಾರ ಹೊರಟಿದೆ ಎಂದು ಕಿಡಿಕಾರಿದ್ದಾರೆ.

ತನ್ನ ಏಕೈಕ ಪ್ರತಿಸ್ಪರ್ಧಿ ನಂದಿನಿಗೆ ಕರ್ನಾಟಕದಲ್ಲೇ ಅಡ್ಡಿ ಮಾಡಬೇಕೆನ್ನುವುದು ಅಮುಲ್ ದುರಾಲೋಚನೆ. ಒಂದು ದೇಶ, ಒಂದು ಅಮುಲ್, ಒಂದೇ ಹಾಲು, ಒಂದೇ ಗುಜರಾತ್ ಎನ್ನುವುದು ಕೇಂದ್ರ ಸರ್ಕಾರದ ಅಧಿಕೃತ ನೀತಿಯಂತಿದೆ. ಅದಕ್ಕೆ ಅಮುಲ್ ಗೆ ಒತ್ತಾಸೆಯಾಗಿ ನಿಂತು ಕೆಎಂಎಫ್ ಕತ್ತು ಹಿಚುಕುತ್ತಿದೆ.ಈಗ ಅಮುಲ್ ಹಿಂಬಾಗಿಲ ಮೂಲಕ ಒಳನುಗ್ಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೆಎಂಎಫ್ ಕಥೆ ಮುಗಿಸಲು ಪಣ

ಹೈನುಗಾರಿಕೆಯ ಮೂಲ ಉತ್ಪನ್ನ ಹಾಲನ್ನು ತನ್ನ ಬ್ರ್ಯಾಂಡ್ ನಲ್ಲಿಯೇ ಕರ್ನಾಟಕದಲ್ಲಿಯೇ ಮಾರಲು ಹೊರಟಿರುವ ಅಮುಲ್, ನಂದಿನಿಯನ್ನು ಆಪೋಶನ ತೆಗೆದುಕೊಳ್ಳುವುದು ಖಚಿತ. ವಿಲೀನಕ್ಕೆ, ಹಿಂದಿ ಹೇರಿಕೆಗೆ ಪ್ರಬಲ ಪ್ರತಿರೋಧ ಒಡ್ಡುತ್ತಿರುವ ಕನ್ನಡಿಗರು ಮತ್ತು ಕೆಎಂಎಫ್ ನ ಕಥೆ ಮುಗಿಸಲೇಬೇಕು ಎಂದು ಅಮುಲ್ ಪಣ ತೊಟ್ಟಂತಿದೆ ಎಂದು ಆರೋಪ ಮಾಡಿದ್ದಾರೆ.

ಗುಲಾಮರನ್ನಾಗಿಸುವ ಹುನ್ನಾರ

ಬಿಜೆಪಿ ಡಬಲ್ ಎಂಜನ್ ಸರ್ಕಾರ ನಮ್ಮ ರಾಜ್ಯದ ಹಾಲು ಉತ್ಪಾದಕರನ್ನು ಬೀದಿಗೆ ತಳ್ಳಿ ಗುಜರಾತಿಗಳ ಗುಲಾಮರನ್ನಾಗಿ ಮಾಡುವ ಹುನ್ನಾರ ನಡೆಸಿರುವುದು ಸ್ಪಷ್ಟ. ಇದುರೆಗೂ ಇಷ್ಟೆಲ್ಲಾ ಆದರೂ ರಾಜ್ಯ ಬಿಜೆಪಿ ಸರಕಾರದ ದಿವ್ಯಮೌನ, ಕೆಎಂಎಫ್  ನಿಷ್ಕ್ರಿಯತೆ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಗುಜರಾತಿನಲ್ಲಿ ಎಂದೂ ಕೆಎಂಎಫ್ ಹಾಲು ಮಾರಿದ್ದಿಲ್ಲ. ಅದು ಅಮುಲ್ ನ ಸ್ಥಳೀಯ ಮಾರುಕಟ್ಟೆ ಹಿತ, ಸಹಕಾರಿ ತತ್ವವನ್ನು ಗೌರವಿಸಿದೆ. ಹಾಲು ಸಮೃದ್ಧಿ ಇರುವ ಯಾವುದೇ ಮಹಾಮಂಡಳದ ಸ್ಥಳೀಯ ವ್ಯಾಪ್ತಿಯಲ್ಲಿ ಕೆಎಂಎಫ್ ತನ್ನ ಹಾಲನ್ನು ಮಾರಲ್ಲ. ಕರ್ನಾಟಕ ನೈಜ ಸಹಕಾರ ತತ್ತ್ವ ನಂಬಿದ್ದರೆ, ಗುಜರಾತ್ ಅಸಹಕಾರವನ್ನೇ ನಂಬಿದೆ ಎಂದು ಹೇಳಿದ್ದಾರೆ.

ದೇವೇಗೌಡರು ಪ್ರಧಾನಿ ಆಗಿದ್ದಾಗ..!

ಕನ್ನಡಿಗರಿಗೆ ಅಮುಲ್ ಋಣಿ ಇರಬೇಕು. ಎಚ್.ಡಿ ದೇವೇಗೌಡರು ಪ್ರಧಾನಿ ಆಗಿದ್ದಾಗ, ಎಚ್.ಡಿ ರೇವಣ್ಣ ಅವರು ಕೆಎಂಎಫ್ ಅಧ್ಯಕ್ಷರಾಗಿದ್ದಾಗ ಯಲಹಂಕ ಮದರ್ ಡೈರಿಯಲ್ಲಿ ವಿಶೇಷ ಐಸ್ ಕ್ರೀಮ್ ಘಟಕ ಸ್ಥಾಪಿಸಿ, ಈ ಘಟಕದಿಂದ ದಶಕಗಳಿಂದ ನಿತ್ಯವೂ  ಕೆಎಂಎಫ್ ದೊಡ್ಡ ಪ್ರಮಾಣದಲ್ಲಿ ಅಮುಲ್ ಬ್ರ್ಯಾಂಡ್ ಐಸ್ ಕ್ರೀಮ್ ತಯಾರಿಸಿ ಈಗಲೂ ಕೊಡುತ್ತಿದೆ ಎಂದು ಎಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಡಬಲ್ ಎಂಜಿನ್ ಸರ್ಕಾರ ಈಗಲಾದರೂ ಎಚ್ಚೆತ್ತು ತಕ್ಷಣ ರಾಜ್ಯದಲ್ಲಿ ಅಮುಲ್ ನ ಪ್ಯಾಕೆಟ್ ಹಾಲಿನ ಮಾರಾಟಕ್ಕೆ ತಡೆ ಒಡ್ಡಬೇಕು. ಕೇಂದ್ರದ ಒತ್ತಾಸೆಯಿಂದ ಅಮುಲ್ ಕದ್ದುಮುಚ್ಚಿ ಹಿಂಬಾಗಿಲ ಮೂಲಕ ಬರುತ್ತಿದೆ. ಕೆಎಂಎಫ್ ಮತ್ತು ರೈತರ ಕುತ್ತಿಗೆಗೆ ಕುಣಿಕೆ ಬಿಗಿಯುತ್ತಿರುವ ಅಮುಲ್ ವಿರುದ್ಧ ಕನ್ನಡಿಗರು ಸಿಡಿದೇಳಬೇಕು ಎಂದು ಕರೆ ಕೊಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments