Monday, August 25, 2025
Google search engine
HomeUncategorizedಮತದಾನ ಯಶಸ್ವಿಗೆ 'ಯುವಸಮೂಹ'ವೇ ರಾಯಭಾರಿ : ಫಸ್ಟ್ ಟೈಮ್ ವೋಟರ್ಸ್ ಎಷ್ಟು ಗೊತ್ತಾ?

ಮತದಾನ ಯಶಸ್ವಿಗೆ ‘ಯುವಸಮೂಹ’ವೇ ರಾಯಭಾರಿ : ಫಸ್ಟ್ ಟೈಮ್ ವೋಟರ್ಸ್ ಎಷ್ಟು ಗೊತ್ತಾ?

ಬೆಂಗಳೂರು : ಮತದಾನ ಯಶಸ್ವಿಗೊಳಿಸಲು ಯುವಸಮೂಹವೇ ವಿಧಾನಸಭಾ ಚುನಾವಣೆಯ ರಾಯಭಾರಿಗಳು ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ವಿಧಾನಸಭೆ-2023ರ ಹಿನ್ನೆಲೆ ಚುನಾವಣಾ ಆಯೋಗದ ವತಿಯಿಂದ ನಗರದ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಓಟ್ ಫೆಸ್ಟ್(ಮತದಾನದ ಹಬ್ಬ) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಯುವಸಮೂಹವು ತಮ್ಮ ತಮ್ಮ ನೆರೆಹೊರೆಯ ಪ್ರದೇಶದ ಜನರನ್ನು ಮತದಾನಕ್ಕೆ ಪ್ರೇರೇಪಿಸುವ ಮೂಲಕ ಈ ಬಾರಿಯ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂದು ಕರೆ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಹೆಚ್ಚು ಮಂದಿ ಐಟಿ-ಬಿಟಿ ಸೆಕ್ಟಾರ್ ಗಳಲ್ಲಿ ಕೆಲಸ ಮಾಡುತ್ತಿದ್ದರೂ ಕೂಡಾ ಶೇಕಡಾವಾರು ಮತದಾನ ಮಾತ್ರ ಕಡಿಮೆ ಇದೆ. ಅದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮತದಾನ ಪ್ರಮಾಣ ಕಡಿಮೆ

ಕಳೆದ 2 ಸಾರ್ವತ್ರಿಕ ಚುನಾವಣೆಗಳನ್ನು ಗಮನಿಸಿದರೆ ಶೇಕಡಾವಾರು ಮತದಾನ ಪ್ರಮಾಣ ಕಡಿಮೆಯಾಗುತ್ತಲೇ ಬರುತ್ತಿದೆ. ಈ ಸಂಬಂಧ ಎಲ್ಲರೂ ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.

1 ಲಕ್ಷ ಹೊಸ ಯುವ ಮತದಾರರು

ಈ ಬಾರಿಯ ಚುನಾವಣೆಯಲ್ಲಿ ಮೊದಲನೇ ಬಾರಿ ಮತದಾನ ಮಾಡುವ ಯುವಕರ ಸಂಖ್ಯೆ 1 ಲಕ್ಷ ಮೀರಿರುವುದು ದಾಖಲಾರ್ಹ ಸಂಗತಿ. 18 ತುಂಬಿರುವ ಯುವಕರು ಮೊದಲನೇ ಬಾರಿಗೆ ಮತದಾನ ಮಾಡಲು ಮುಂದೆ ಬರಬೇಕಿದೆ. ಮತದಾನದ ಬಗ್ಗೆ ಅರಿವು ಮೂಡಿಸಲು ಕಾಲೇಜುಗಳಲ್ಲಿ 4,000 ಎಲೆಕ್ಟೋರಲ್ ಲಿಟ್ರೆಸಿ ಕ್ಲಬ್ ಗಳನ್ನು ಪ್ರಾರಂಭಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ‘ನನಗೆ ಕುಸ್ತಿ ಬೇಕು..ಕಣಕ್ಕೆ ಯಾರ್ ಬರ್ತಿರೋ ಬನ್ನಿ..’ : ಸಿಎಂ ಬೊಮ್ಮಾಯಿ ಸವಾಲ್

ಮತದಾನಕ್ಕೆ ವಿಶೇಷ ವ್ಯವಸ್ಥೆ

ಕಾಲೇಜುಗಳಿಂದ 18 ತುಂಬಿರುವ ಯುವಕರ ಪಟ್ಟಿಯನ್ನು ಪಡೆದು ಮತದಾನ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಹಿರಿಯ ನಾಗರಿಕರು, ಅಂಗವಿಕಲರಿಗೆ ಮತಗಟ್ಟೆಗಳಲ್ಲಿ ಮತದಾನ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಮತದಾನ ಮಾಡುವುದು ಆದ್ಯ ಕರ್ತವ್ಯವಾಗಿದ್ದು, ಅವರವರ ಹಕ್ಕನ್ನು ತಪ್ಪದೆ ಚಲಾಯಿಸಬೇಕು. ಅದಕ್ಕಾಗಿ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಐಟಿ-ಬಿಟಿ ಸಂಸ್ಥೆಗಳು, ವಿದ್ಯಾರ್ಥಿಗಳು, ಹೋಟೆಲ್ ಸಂಘಟನೆಗಳು, ಆಸ್ಪತ್ರೆಗಳು, ಯುವ ಮತದಾರರು, ಕಾರ್ಖಾನೆಗಳ ಮುಖ್ಯಸ್ಥರ ಜೊತೆ ಮತದಾನ ದಿನ ಎಲ್ಲರೂ ತಪ್ಪದೆ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments