Wednesday, August 27, 2025
Google search engine
HomeUncategorizedಕಳೆದ ಭಾರಿಯ ಪ್ರವಾಹ ಪೀಡತರಿಗೆ ಇನ್ನೂ ಪೂರ್ಣ ಹಣ ಸಿಕ್ಕಿಲ್ಲ : ಪ್ರಜ್ವಲ್ ರೇವಣ್ಣ

ಕಳೆದ ಭಾರಿಯ ಪ್ರವಾಹ ಪೀಡತರಿಗೆ ಇನ್ನೂ ಪೂರ್ಣ ಹಣ ಸಿಕ್ಕಿಲ್ಲ : ಪ್ರಜ್ವಲ್ ರೇವಣ್ಣ

ಹಾಸನ : ಹಾಸನ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಯಾವುದೇ ರೋಗಲಕ್ಷಣಗಳಿಲ್ಲದಿದ್ದರೂ ಕೂಡ ಆರೋಗ್ಯಯುತ ಸೋಂಕಿತ ವ್ಯಕ್ತಿಗಳು ಮೃತಪಟ್ಟಿರುವ ಪ್ರಕರಣಗಳು ಕಂಡುಬರುತ್ತಿವೆ, ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚು ನಿಗಾವಹಿಸಿ ಕಾರ್ಯನಿರ್ವಹಿಸಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಹೊಳೆನರಸೀಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಟ್ಟಣ ಪ್ರದೇಶದ ಪ್ರತಿ ವಾರ್ಡ್‍ಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿ ನಿತ್ಯ ಕನಿಷ್ಟ 200 ಗಂಟಲ ದ್ರವ ಮಾದರಿಗಳನ್ನು ಪಡೆದು ಪರೀಕ್ಷೆಗೆ ಒಳಪಡಿಸಿದರೆ ಸಮುದಾಯದಲ್ಲಿ ಸೋಂಕು ಹರಡುವುದನ್ನು ಕಡಿಮೆ ಮಾಡಬಹುದು ಎಂದರು.

ಕಳೆದ ಬಾರಿ ಪ್ರವಾಹ ಪೀಡಿತರಿಗೆ ಮನೆ ಕಟ್ಟಿಕೊಳ್ಳಲು ಕೇವಲ 2 ಕಂತುಗಳನ್ನು ಬಿಡುಗಡೆ ಮಾಡಿದ್ದು, 3 ನೇ ಕಂತು ಇನ್ನೂ ಸಹ ಬಂದಿಲ್ಲ. ಖಾತೆ ಪಹಣಿ ತೆಗೆದುಕೊಳ್ಳುವುದು ಹಾಗೂ ಸಲ್ಲಿಸುವುದು ಹಳ್ಳಿ ಜನರಿಗೆ ಅಷ್ಟಾಗಿ ತಿಳಿಯುವುದಿಲ್ಲ. ಅಧಿಕಾರಿಗಳು ಈ ಬಗ್ಗೆ ಗ್ರಾಮೀಣ ಜನರಿಗೆ ಸರಿಯಾದ ಮಾಹಿತಿ ನೀಡಬೇಕು. ಕೆಲವೆಡೆ ಬಿದ್ದುಹೋಗಿರುವ ಮನೆಗಳ ಸರ್ವೆ ಕೂಡ ಮಾಡಿಲ್ಲ. ಇದರಿಂದ ಹಲವಾರು ಕುಟುಂಬಗಳಿಗೆ ಪರಿಹಾರವೇ ದೊರೆತಿಲ್ಲ. ಗ್ರಾಮ ಲೆಕ್ಕಿಗರು ಹಾಗೂ ಪಿ.ಡಿ.ಓ. ಗಳು ಇದರ ಬಗ್ಗೆ ನಿಗಾವಹಿಸಬೇಕು ಎಂದರು.

ಮಾಜಿ ಸಚಿವ, ಶಾಸಕ ಹೆಚ್.ಡಿ. ರೇವಣ್ಣ ಅವರು ಮಾತನಾಡಿ ತಾಲ್ಲೂಕಿನಲ್ಲಿ ಅತಿಹೆಚ್ಚು ಮಳೆಯಾಗಿರುವುದರಿಂದ ಹೂವಿನ ಬೆಳೆ ನಾಶವಾಗಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ ಆದರೆ ಇದುವರೆಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಲಿ ಅಥವಾ ಪರಿಹಾರ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವುದಾಗಲಿ ಮಾಡಿಲ್ಲ. ಅಲ್ಲದೇ ಹೇಮಾವತಿ ಜಲಾಶಯವು ಸಂಪೂರ್ಣವಾಗಿ ತುಂಬುವ ಪರಿಸ್ಥಿತಿಯಲ್ಲಿದ್ದು, ರೈತರಿಗೆ ನೀರಿನ ಅವಶ್ಯಕತೆ ಇರುವುದರಿಂದ ಆದಷ್ಟು ಬೇಗ ನಾಲೆಗಳ ಮೂಲಕ ನೀರು ಬಿಡುವಂತೆ ಕ್ರಮವಹಿಸಬೇಕು ಎಂದರು.

ಪ್ರಸಕ್ತ ಕೋವಿಡ್ ಕೇರ್ ಕೇಂದ್ರಗಳಲ್ಲಿ ಶೌಚಾಲಯ ಹಾಗೂ ಇತರೆ ಮೂಲಭೂತ ಸೌಕರ್ಯಗಳು ಸರಿಯಾದ ರೀತಿಯಲ್ಲಿ ದೊರೆಯುತ್ತಿಲ್ಲ ಎಂದು ದೂರುಗಳು ಬರುತ್ತಿವೆ, ಆದ್ದರಿಂದ ಹೊರ ಪ್ರದೇಶಗಳಲ್ಲಿರುವ ಕನಿಷ್ಟ 5 ಹಾಸ್ಟಲ್‍ಗಳನ್ನು ಗುರುತಿಸಿ ಪ್ರತಿ ಹಾಸ್ಟಲ್‍ನಲ್ಲಿಯೂ 20 ಮಂದಿ ಸೋಂಕಿತರನ್ನು ಇರಿಸಿ ಅಲ್ಲಿಯೇ ಊಟ, ಚಿಕಿತ್ಸೆ ಹಾಗೂ ವೈದ್ಯರನ್ನು ನೇಮಿಸುವಂತೆ ಹೆಚ್.ಡಿ ರೇವಣ್ಣ ಅವರು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಸಂಸದರಾದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕರಾದ ಹೆಚ್.ಡಿ. ರೇವಣ್ಣ ಅವರು ಸೂಚಿಸಿದಂತೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಿ ಕಾರ್ಯನಿರ್ವಹಿಸಬೇಕು. ಅತಿವೃಷ್ಠಿಯಿಂದಾಗಿರುವ ಹಾನಿಗಳ ಸಂಪೂರ್ಣ ವರದಿಯನ್ನು ಆದಷ್ಟು ಬೇಗ ನೀಡಬೇಕು ಎಂದರು. ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಜಿಲ್ಲೆಯ ಕೋವಿಡ್ ಸ್ಥಿತಿಗತಿ ಹಾಗೂ ಬೆಳೆಹಾನಿ ಸೇರಿದಂತೆ ಸಂಪೂರ್ಣ ವರದಿ ಸಲ್ಲಿಸಿದರು. ನಂತರ ಸಚಿವರು ಶ್ರೀರಾಮ ದೇವರ ಅಣೆಕಟ್ಟೆ ಹಾಗೂ ಹೆಚ್.ಆರ್.ಬಿ.ಸಿ. ಬಲದಂಡೆ ನಾಲೆಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‍ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಉಪವಿಭಾಗಾಧಿಕಾರಿ ಡಾ. ನವೀನ್ ಭಟ್ ಸಚಿವರ ಆಪ್ತ ಕಾರ್ಯದರ್ಶಿ ಕಾಂತರಾಜ್ ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

-ಪ್ರತಾಪ್ ಹಿರೀಸಾವೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments