Friday, August 29, 2025
HomeUncategorizedಕಿರುಗಾವಲು ಭಾಗದ ರೈತರಿಗೆ ಕೊಳಚೆ ನೀರಿನ ಭಾಗ್ಯ | ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ.

ಕಿರುಗಾವಲು ಭಾಗದ ರೈತರಿಗೆ ಕೊಳಚೆ ನೀರಿನ ಭಾಗ್ಯ | ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ.

ಮಂಡ್ಯ : ಕಿರುಗಾವಲು ಕೆರೆ ತುಂಬಿದರೆ ಐವತ್ತು ಹಳ್ಳಿಗೆ ನೀರಾವರಿ ಸೌಭಾಗ್ಯ. ಇಲ್ಲವಾದರೇ ಹುಳ್ಳಿಯೇ ಗತಿ ಎಂಬ ಮಾತು ಮಳವಳ್ಳಿ ತಾಲ್ಲೂಕಿನಲ್ಲಿ ಇದೆ. ಆದರೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಯಡವಟ್ಟೋ ಅಥವಾ ಗ್ರಾಮ ಪಂಚಾಯತ್ ನಿರ್ಲಕ್ಷ್ಯವೋ ಗೊತ್ತಿಲ್ಲ. ನೀರಾವರಿ ಸೌಭಾಗ್ಯ ಸಿಗದೇ ಇದ್ದರೂ ಸರಿ ರೋಗ ಭಾಗ್ಯ ಕಟ್ಟಿಟ್ಟ ಬುತ್ತಿಯಾಗಿದೆ. ಯಾಕೆ ಅಂತೀರಾ? ಈ ಸ್ಟೋರಿ ನೋಡಿ.
ಎಲ್ಲೆಡೆ ಮುಂಗಾರು ಆರಂಭವಾಗಿದೆ. ಎಲ್ಲೆಲ್ಲೂ ರೈತರು ಸಂತಸದಿಂದ ಕೃಷಿ ಚಟುವಟಿಕೆ ಆರಂಭ ಮಾಡಿದ್ದಾರೆ. ಆದರೆ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಕೃಷಿ ಜಮೀನಿಗೆ ಇಳಿಯಲು ಭಯ ಬೀಳುತ್ತಿದ್ದಾರೆ. ಇದಕ್ಕೆ ಕಾರಣ ಕಿರುಗಾವಲು ಕೆರೆಯ ಈ ಕಾಲುವೆ. ಹೌದು, ಈ ನಾಲೆಯಿಂದ ಸುಮಾರು 1500 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಸುಮಾರು 20 ಗ್ರಾಮಗಳ ರೈತರು ಈ ಕೆರೆಯ ನೀರನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಸಣ್ಣ ನೀರಾವರಿ ಇಲಾಖೆ, ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಚರ್ಮರೋಗಕ್ಕೆ ಈ ಭಾ‍ಗದ ರೈತರು ತುತ್ತಾಗುತ್ತಿದ್ದಾರೆ. ಇದಕ್ಕೆ ಕಾರಣ ಕಿರುಗಾವಲು ಪಟ್ಟಣದ ಕೊಳಚೆ ನೀರನ್ನು ಈ ನಾಲೆಗೆ ಬಿಟ್ಟಿರೋದು.
ಕಿರುಗಾವಲು ಕೆರೆ ನಾಲೆ ದುರಸ್ಥಿಗೆ ಮೂರು ಬಾರಿ ಗುದ್ದಲಿ ಪೂಜೆ ಮಾಡಲಾಗಿದೆ. ಮಾಜಿ ಶಾಸಕ ನರೇಂದ್ರ ಸ್ವಾಮಿ, ಹಾಲಿ ಶಾಸಕ ಅನ್ನದಾನಿ ಗುದ್ದಲಿ ಪೂಜೆ ಮಾಡಿದರೂ ನಾಲೆ ದುರಸ್ಥಿ ಕಾಮಗಾರಿ ಕೈಗೊಂಡಿಲ್ಲ. ಇದರಿಂದ ಕಿರುಗಾವಲು ಪಟ್ಟಣದ ಕೊಳಚೆ ನೀರು ಸಂಪೂರ್ಣವಾಗಿ ಈ ನಾಲೆಗೆ ಸೇರುತ್ತಿದೆ. ಈಗಾಗಲೇ ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸಲಾಗಿದೆ. ಇನ್ನೇನಿದ್ರೂ ಕೆರೆ ತುಂಬಿಸಿ ಕೃಷಿ ಚಟುವಟಿಕೆಗೆ ಈ ನಾಲೆಗೆ ನೀರು ಬಿಡಲಾಗುತ್ತದೆ. ಆದರೂ ಅಧಿಕಾರಿಗಳು ಇತ್ತ ಕಡೆ ಗಮನವನ್ನೇ ಹರಿಸಿಲ್ಲ ಎಂಬುದು ರೈತರ ನೋವಿನ ಮಾತಾಗಿದೆ.
ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ನಾಲೆಯಲ್ಲಿ ಬೆಳೆದು ನಿಂತಿರುವ ಗಿಡಗಳ ತೆರವು ಮಾಡಿ, ನಾಲೆಗೆ ಸೇರುತ್ತಿರುವ ಕೊಳಚೆ ನೀರನ್ನು ತಡೆಗಟ್ಟಬೇಕಾಗಿದೆ. ಇಲ್ಲವಾದರೆ ರೈತರಿಗೆ ಚರ್ಮರೋಗ ಬಂದು ಸಂಕಷ್ಟಕ್ಕೆ ಒಳಗಾಗಿ ಹಿಡಿ ಶಾಪ ಹಾಕಲಿದ್ದಾರೆ.
….
ಡಿ.ಶಶಿಕುಮಾರ್, ಮಂಡ್ಯ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments