Sunday, August 31, 2025
HomeUncategorizedಕೊರೋನಾ ಭೀತಿಯ ನಡುವೆಯೇ ಆನ್ ಲೈನ್ ನಲ್ಲಿ ನಡೆದ ಕುವೆಂಪು ವಿವಿ ಘಟಿಕೋತ್ಸವ

ಕೊರೋನಾ ಭೀತಿಯ ನಡುವೆಯೇ ಆನ್ ಲೈನ್ ನಲ್ಲಿ ನಡೆದ ಕುವೆಂಪು ವಿವಿ ಘಟಿಕೋತ್ಸವ

ಶಿವಮೊಗ್ಗ : ಆ ಗೋಲ್ಡನ್ ಹುಡುಗಿಯರ ಜೊತೆ ಆ ಸಾಧಿಸಿದ ಯುವಕನ ಮುಖದಲ್ಲಿ ಮಂದಹಾಸವಿತ್ತು. ಏನೋ ಸಾಧಿಸಿದ ಆತ್ಮತೃಪ್ತಿ ಇತ್ತು. ಖುಷಿಯ ಕ್ಷಣಗಳು ಅವರ ಕಣ್ಣುಗಳಲ್ಲಿ ಮಿನುಗುತ್ತಿತ್ತು. ಬಂಗಾರ ಪದಕ ಗೆದ್ದ ಆ ಹುಡುಗಿಯರ ಖುಷಿಗೆ ಪಾರವೇ ಇರಲಿಲ್ಲ. ಅಂದಹಾಗೆ, ಕೊರೋನಾದ ಕರಿನೆರಳಿನಲ್ಲಿ ನಡೆದ ಶಿವಮೊಗ್ಗದ ಕುವೆಂಪು ವಿವಿ ಘಟಿಕೋತ್ಸವದಲ್ಲಿ, ಬಂಗಾರದ ಪದಕಗಳನ್ನು ಗಳಿಸಿದ ಯುವತಿಯರ ಜೊತೆ, ಏಕಾಂಗಿ ಯುವಕ ಇಂದು ಖುಷಿಯ ಅಲೆಯಲ್ಲಿ ತೇಲಿದ್ರು. ಹೌದು, ಇವೆಲ್ಲ ದೃಶ್ಯ ಕಂಡು ಬಂದಿದ್ದು, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ. ಕುವೆಂಪು ವಿವಿಯ 30 ನೇ ಘಟಿಕೋತ್ಸವದಲ್ಲಿ, ಒಟ್ಟು 119 ಸ್ವರ್ಣ ಪದಕಗಳಿದ್ದು, ಅವುಗಳನ್ನು 54 ಮಹಿಳೆಯರು, 13 ಪುರುಷರು ಸೇರಿದಂತೆ ಒಟ್ಟು 67 ವಿದ್ಯಾರ್ಥಿಗಳು ಹಂಚಿಕೊಂಡು ಹೆಮ್ಮೆಯಿಂದ ಬೀಗಿದ್ದಾರೆ. ಅದರಲ್ಲೂ ಅತಿ ಹೆಚ್ಚು ಅಂದರೆ, 54 ಮಹಿಳೆಯರೇ ಸ್ವರ್ಣ ಪದಕಗಳನ್ನು ಗಳಿಸಿರುವುದು ಹೆಮ್ಮೆಯ ವಿಚಾರವಾಗಿದ್ದು, 140 ಪುರುಷರು ಸೇರಿದಂತೆ, 194 ಅಭ್ಯರ್ಥಿಗಳು, ಪಿಹೆಚ್‍ಡಿ ಪದವಿ ಪಡೆದಿದ್ದಾರೆ.

ಈ ಬಾರಿ ಘಟಿಕೋತ್ಸವದಲ್ಲಿ 4 ಪುರುಷರು,15 ಮಹಿಳೆಯರು ಸೇರಿದಂತೆ 19 ವಿದ್ಯಾರ್ಥಿಗಳು 24 ನಗದು ಬಹುಮಾನಗಳನ್ನು ಪಡೆದಿದ್ದು, ಇದರಲ್ಲಿಯೂ, ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ. ಅದರಂತೆ, ಕನ್ನಡ ಅಧ್ಯಯನ ಎಂ.ಎ. ವಿಭಾಗದ ಕನ್ನಡದಲ್ಲಿ ಹೆಚ್.ರಂಗನಾಥ್ ಎಂಬ ಈ ವಿದ್ಯಾರ್ಥಿ 10 ಸ್ವರ್ಣ ಪದಕಗಳನ್ನು ಬಾಚಿಕೊಂಡಿದ್ದು, ಇದರ ಜೊತೆಗೆ,ಮೂರು ನಗದು ಬಹುಮಾನಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ಪದಕ ಪಡೆದ ವಿದ್ಯಾರ್ಥಿಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಅತಿ ಹೆಚ್ಚು ಮಹಿಳೆಯರೇ ಮೆಲುಗೈ ಸಾಧಿಸಿದ್ದರೂ ಕೂಡ, 10 ಸ್ವರ್ಣ ಪದಕಗಳನ್ನು ಕಡು ಬಡತನದ ಹಿನ್ನೆಲೆಯಿಂದ ಬಂದಿರುವ ವಿದ್ಯಾರ್ಥಿಗೆ ದಕ್ಕಿರುವುದು ಎಲ್ಲರ ಹುಬ್ಬೇರಿಸುವಂತಾಗಿದೆ.

ಎಂ.ಆರ್.ಸಂಚಿತ(ಎಂಎಸ್ಸಿ ಜೈವಿಕ ತಂತ್ರಜ್ಞಾನ), ಬಿ.ಬಿ.ರುಕ್ಕಯ್ಯ (ಬಿ.ಕಾಂ), ತಲಾ 5 ಸ್ವರ್ಣ ಪದಕಕ್ಕೆ ಭಾಜನರಾದರು. ಹೆಚ್.ವಾಣಿ(ಸಮಾಜ ಶಾಸ್ತ್ರ,ಎಂಎ.,) ಎನ್.ಜಿ.ಪೂಜಾ(ಎಂಎಸ್ಸಿ ಪರಿಸರ ವಿಜ್ಞಾನ), ಕೆ.ವಿ.ಅಮೃತ (ಎಂಬಿಎ), ತಲಾ 4 ಸ್ವರ್ಣ ಪದಕ ಗಳಿಸಿದರು. ಸೀಮಾ ಎಸ್.ಡಿ. ಎಂಎಸ್ಸಿ ಗಣಿತಶಾಸ್ತ್ರದಲ್ಲಿ 3 ಪದಕ, 3 ನಗದು ಬಹುಮಾನ ಪಡೆದರೆ, ಎಂಸಿಎ ವಿಭಾಗದಲ್ಲಿ ಕೆ.ಆರ್.ಆಶ್ವಿನಿ 3 ಸ್ವರ್ಣ ಪದಕ, ಒಂದು ನಗದು ಬಹುಮಾನ ಪಡೆದರು. ಎಂಎಸ್ಸಿ ರಸಾಯನ ಶಾಸ್ತ್ರ ವಿಭಾಗದಲ್ಲಿ ಬಿ.ಎಂ.ನವೀನ, ಎಂ.ಎ.ಇತಿಹಾಸ ವಿಭಾಗದಲ್ಲಿ ಪಿ.ದೀಪ್ತಿ, ಎಂಎಸ್ಸಿ ಸಸ್ಯಶಾಸ್ತ್ರ ವಿಭಾಗದಲ್ಲಿ ಶಾಶ್ವತಿ ಹೆಚ್.ಎಸ್, 3 ಸ್ವರ್ಣ ಪದಕ ಬಹುಮಾನ ಪಡೆದರು.

ಪಿಹೆಚ್‍ಡಿ ಪದವಿಯನ್ನು 194 ವಿದ್ಯಾರ್ಥಿಗಳು ಪಡೆದಿದ್ದು ಇಲ್ಲಿ ಪುರುಷರೇ ಮೇಲುಗೈ ಸಾಧಿಸಿದ್ಧಾರೆ. ಕಲಾ ವಿಭಾಗದಲ್ಲಿ 80, ವಾಣಿಜ್ಯ ನಿಕಾಯದಲ್ಲಿ 13, ಶಿಕ್ಷಣ ನಿಕಾಯದಲ್ಲಿ 05, ಕಾನೂನು ನಿಕಾಯದಲ್ಲಿ 01, ವಿಜ್ಞಾನ ನಿಕಾಯದಲ್ಲಿ 93 ವಿದ್ಯಾರ್ಥಿಗಳು ಸೇರಿ 194 ಜನರಿಗೆ ಪಿಹೆಚ್‍ಡಿ ಪದವಿ ನೀಡಲಾಗಿದೆ ಎಂದರು.

ಅಷ್ಟಕ್ಕೂ ಈ ಬಾರಿಯ ಘಟಿಕೋತ್ಸವ ಎಂದಿನಂತೆ ಇರದೇ, ವಿಶೇಷವಾಗಿರುವುದೇ ಕೇಂದ್ರ ಬಿಂದುವಾಗಿತ್ತು. ಕೊರೋನಾ ಸೋಂಕಿನ ಭೀತಿಯ ನಡುವೆಯೇ ನಡೆದ ಈ ಘಟಿಕೋತ್ಸವ ಸಂಪೂರ್ಣವಾಗಿ ಆನ್ ಲೈನ್ ಮಾಡಲಾಗಿತ್ತು. ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರಿಗೆ ಆನ್ ಲೈನ್ ನಿಂದಲೇ ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು. ಕೇವಲ ಸ್ವರ್ಣ ಪದಕ ಪಡೆದ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಿಂಡಿಕೇಟ್ ಸದಸ್ಯರು ಹೀಗೆ ಎಲ್ಲರೂ ಸೇರಿ ಸುಮಾರು 100 ಮಂದಿಗೆ ಮಾತ್ರ ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿತ್ತಲ್ಲದೇ, ಸ್ವರ್ಣ ಪದಕ ಗಳಿಸಿದ ವಿದ್ಯಾರ್ಥಿಗಳ ಕೊರಳಿಗೂ ಸ್ವರ್ಣ ಪದಕಗಳನ್ನು ಹಾಕದೇ, ಫೋಟೋ ಫ್ರೇಮ್ ವಿನ್ಯಾಸ ಮಾಡಿ ಪ್ರದಾನ ಮಾಡಲಾಯಿತು. ಅಲ್ಲದೇ, ಒಡಿಸ್ಸಾದ ಕೇಂದ್ರೀಯ ವಿವಿಯ ಕುಲಾಧಿಪತಿ ಪ್ರೊ.ಪಿ.ವಿ.ಕೃಷ್ಣಭಟ್ ಅವರು ಕೂಡ ಆನ್ ಲೈನ್ ನಲ್ಲಿಯೇ, ಘಟಿಕೋತ್ಸವ ಭಾಷಣ ಮಾಡಿದ್ದು ವಿಶೇಷವಾಗಿತ್ತು.

ಅಲ್ಲದೇ, ಬಿ.ಕಾಂ. ನಲ್ಲಿ ಬಿಬಿ ರುಕ್ಕಯ್ಯ ಇವರು 5 ಸ್ವರ್ಣ ಪದಕಗಳನ್ನು ಬಾಚಿಕೊಂಡಿದ್ದು, ಮತ್ತು 4 ಸ್ವರ್ಣ ಪದಕಗಳಿಗೆ ಭಾಜನರಾದ ಅಮೃತ, ಸೇರಿದಂತೆ, ಸ್ವರ್ಣ ಪದಕಗಳನ್ನು ಗಳಿಸಿದ ಇತರೇ ವಿದ್ಯಾರ್ಥಿನಿಯರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಎಲ್ಲರೂ, ಸಂಭ್ರಮದಿಂದಲೇ, ಕ್ಯಾಮೆರಾಗೆ ಫೋಸ್ ನೀಡಿ, ತಮ್ಮ ಪದಕಗಳ ಹಿಂದಿನ ವಿಶ್ವಾಸ ಮತ್ತು ಕಷ್ಟಗಳ ದಿನಗಳನ್ನು ಮೆಲುಕು ಹಾಕಿದರು. ಒಬ್ಬರಿಗೊಬ್ಬರು ಸೆಲ್ಫಿ ಕ್ಲಿಕ್ಕಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡ್ರು. ಈ ವೇಳೆ, ಇವರ ಮುಖದಲ್ಲಿ ಮಂದಹಾಸ ಮಿನುಗುವಂತಾಗಿತ್ತು.

ಒಟ್ಟಿನಲ್ಲಿ, ಕೋವಿಡ್ ಹಿನ್ನೆಲೆಯಲ್ಲಿ ಘಟಿಕೋತ್ಸವ ಹಲವಾರು ದಿನ ಮುಂದೂಡುತ್ತಾ ಬಂದಿದ್ದರೂ ಇಂದು ಆನ್ ಲೈನ್ ಸ್ಟ್ರೀಮಿಂಗ್ ನಲ್ಲಿ ಯಶಸ್ವಿಯಾಗಿ ನೆರವೇರಿದೆ. ಬಡತನದ ಬೇಗೆಯಲ್ಲಿ ಮಿಂದರೂ, ಕಷ್ಟಪಟ್ಟು ಓದಿ, ಸ್ವರ್ಣಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡ ಓರ್ವ ಯುವಕ ಮತ್ತು ಹಲವಾರು ಯುವತಿಯರ ಸಾಧನೆ ಕಂಡು, ಇವರ ಪೋಷಕರು ಬೆಕ್ಕಸ ಬೆರಗಾಗಿದ್ರು. ಸ್ವರ್ಣಪದಕಗಳ ಜೊತೆಗೆ ತಾವು ಕಂಡ ಸುಂದರ ಕನಸುಗಳು ಸಾಕಾರಗೊಳ್ಳಲಿ ಎಂಬುದೇ ಪವರ್ ಟಿವಿ ಆಶಯ.

ಗೋ.ವ. ಮೋಹನಕೃಷ್ಣ, ಪವರ್ ಟಿ.ವಿ., ಶಿವಮೊಗ್ಗ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments