ಶಿವಮೊಗ್ಗ : ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಇತ್ತೀಚೆಗಷ್ಟೇ ಕೋಮು ದಳ್ಳುರಿಯಿಂದ ನಲುಗಿ ಹೋಗಿತ್ತು.ಬೂದಿ ಮುಚ್ಚಿದ ಕೆಂಡದಂತಾಗಿರುವ ನಗರವೀಗ ಸಂಪೂರ್ಣ ಕೇಸರಿಮಯವಾಗಿದೆ.ಶುಕ್ರವಾರ ಅದ್ದೂರಿಯಾಗಿ ಗಣೇಶ ಮೂರ್ತಿ ವಿಸರ್ಜನೆಗೆ ಹಿಂದೂ ಮಹಾಸಭಾ ಸಿದ್ಧತೆ ಮಾಡಿಕೊಂಡಿದೆ. ಅದರಲ್ಲೂ ಗಾಂಧಿ ಬಜಾರ್ನಲ್ಲಿ ನಿರ್ಮಿಸಲಾಗಿರುವ ಗೀತೋಪದೇಶ ಸಾರುವ ಮಹಾದ್ವಾರ ಕಣ್ಮನ ಸೆಳೆಯುತ್ತಿದೆ. ಕೃಷ್ಣನು ತನ್ನ ವಿಶ್ವರೂಪ ಪ್ರದರ್ಶಿಸಿ, ಅರ್ಜುನನಿಗೆ ಗೀತೋಪದೇಶ ಸಾರುವ ಪರಿಗೆ ಎಲ್ಲರೂ ಫಿದಾ ಆಗಿದ್ದಾರೆ.
ಇನ್ನು ಗಣಪತಿ ವಿಸರ್ಜನೆಗೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. 2 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 19 ಪೊಲೀಸ್ ಉಪಾಧೀಕ್ಷಕರು, 46 ಪೊಲೀಸ್ ನಿರೀಕ್ಷಕರು, 71 ಪೊಲೀಸ್ ಉಪನಿರೀಕ್ಷಕರು, 1970 ಪೊಲೀಸ್ ಸಿಬ್ಬಂದಿ, 700 ಗೃಹರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ, 1 RAF ತುಕಡಿಯ 200 ಅಧಿಕಾರಿ ಮತ್ತು ಸಿಬ್ಬಂದಿ, 15 KSRP ತುಕಡಿಯ 300 ಅಧಿಕಾರಿ ಮತ್ತು ಸಿಬ್ಬಂದಿ, 15 ಡಿ.ಎ.ಆರ್. ತುಕಡಿಯ 120 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇನ್ನುಳಿದಂತೆ, ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಹೊರಗಿನಿಂದ ಬರುವ ದುಷ್ಟ ಶಕ್ತಿಗಳು ಗಲಾಟೆ ಎಬ್ಬಿಸುವ ಸಾಧ್ಯತೆ ಇದೆ ಅಂತಾ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಶಿವಮೊಗ್ಗದಲ್ಲಿ ಕಳೆದ ಹಲವಾರು ದಶಕಗಳಿಂದಲೂ ಈ ಹೆಚ್.ಎಂ.ಎಸ್. ಗಣಪತಿಯನ್ನು ಗಲಾಟೆ ಗಣಪತಿ ಎಂದೇ ಕರೆಯುವ ರೂಡಿ ಇದ್ದು, ಈ ಕಳಂಕ ಬಾರದಂತೆ ನೋಡಿಕೊಳ್ಳಬೇಕಿದೆ.
ಗೋ.ವ.ಮೋಹನಕೃಷ್ಣ, ಪವರ್ ಟಿ.ವಿ, ಶಿವಮೊಗ್ಗ


