Saturday, August 30, 2025
HomeUncategorizedಅಗ್ನಿಪಥ್ ಯೋಜನೆ ವಿರೋಧ: ರೈಲ್ವೆ ಆಸ್ತಿಗಳಿಗೆ ಹಾನಿ ಮಾಡಿ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ಅಗ್ನಿಪಥ್ ಯೋಜನೆ ವಿರೋಧ: ರೈಲ್ವೆ ಆಸ್ತಿಗಳಿಗೆ ಹಾನಿ ಮಾಡಿ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ಬಿಹಾರ: ಅಗ್ನಿಪಥ್ ಯೋಜನೆ ವಿರೋಧಿಸಿ ವಿವಿಧ ರಾಜ್ಯಗಳಲ್ಲಿ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಹಾರ, ರಾಜಸ್ಥಾನದಲ್ಲಿ ಈ ಯೋಜನೆಯ ವಿರುದ್ಧ ಜನರು ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ. ಜೊತೆಗೆ ಉದ್ಯೋಗ ಭದ್ರತೆ ಮತ್ತು ಪಿಂಚಣಿಗೆ ಒತ್ತಾಯಿಸುತ್ತಿದ್ದಾರೆ. ಛಾಪ್ರಾದಲ್ಲಿ ಪ್ರತಿಭಟನಾಕಾರರು ರೈಲಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.

ಸಶಸ್ತ್ರ ಪಡೆಗಳಿಗೆ ತ್ವರಿತ ನೇಮಕಾತಿ ಮಾಡಿಕೊಳ್ಳುವ ಯೋಜನೆಯಾದ ಅಗ್ನಿಪಥ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿಂಸಾ ಸ್ವರೂಪ ಪಡೆದುಕೊಂಡಿದೆ. ಬುಧವಾರ ಆರಂಭವಾಗಿದ್ದ ಪ್ರತಿಭಟನೆ ಮುಂದುವರಿದಿದ್ದು, ಬಿಹಾರದ ಹಲವು ಭಾಗಗಳಲ್ಲಿ ಸತತ ಎರಡನೇ ದಿನ ರೈಲು ಮತ್ತು ವಾಹನ ಸಂಚಾರಕ್ಕೆ ಸೇನಾ ಆಕಾಂಕ್ಷಿಗಳು ಅಡ್ಡಿಪಡಿಸಿದರು.

ಭಭುವಾ ರೋಡ್ ರೈಲ್ವೆ ನಿಲ್ದಾಣಕ್ಕೆ ನುಗ್ಗಿದ ಪ್ರತಿಭಟನಾಕಾರರು ಇಂಟರ್ಸಿಟಿ ಎಕ್ಸ್‌ಪ್ರೆಸ್‌ ರೈಲಿನ ಗಾಜಿನ ಕಿಟಕಿಗಳನ್ನು ಒಡೆದು ಹಾಕಿದರು. ಅಲ್ಲದೆ, ಒಂದು ಕೋಚ್‌ಗೆ ಬೆಂಕಿ ಕೂಡ ಹಾಕಿದರು. ರೈಲ್ವೆ ನಿಲ್ದಾಣದಿಂದ ಪ್ರತಿಭಟನಾಕಾರರನ್ನು ಚೆದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು. ‘ಇಂಡಿಯನ್ ಆರ್ಮಿ ಲವರ್ಸ್’ ಎಂಬ ಬ್ಯಾನರ್ ಹಿಡಿದು, ಹೊಸ ನೇಮಕಾತಿ ಯೋಜನೆ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜೆಹನಾಬಾದ್ನಲ್ಲಿ ರೈಲ್ವೆ ಸಂಚಾರಕ್ಕೆ ಅಡ್ಡಿಪಡಿಸಲು ರೈಲು ಹಳಿಗಳ ಮೇಲೆ ನಿಂತುಕೊಂಡಿದ್ದ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಪೊಲೀಸರು ಬೆನ್ನಟ್ಟಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಪೊಲೀಸರು ಸೇರಿದಂತೆ ಅನೇಕ ಮಂದಿಗೆ ಗಾಯಗಳಾಗಿವೆ.

ಪ್ರತಿಭಟನಾಕಾರರು ಮತ್ತು ಪೊಲೀಸರು ಪರಸ್ಪರ ಕಲ್ಲು ಎಸೆಯುವ ದೃಶ್ಯಾವಳಿಗಳು ರೈಲ್ವೆ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಪ್ರತಿಭಟನಾಕಾರರನ್ನು ಹೆದರಿಸಿ ಓಡಿಸಲು ಪೊಲೀಸರು ಅವರ ಕಡೆಗೆ ಬಂದೂಕು ತೋರಿಸಿದ್ದಾರೆ. ನಾವಡಾದಲ್ಲಿ ಯುವಕರ ಗುಂಪೊಂದು ರಸ್ತೆ ಮಧ್ಯೆ ಟೈರ್ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದೆ. ಅಗ್ನಿಪಥ್ ಯೋಜನೆ ಕೈಬಿಡುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಸಹರ್ಸಾದಲ್ಲಿ ಕೂಡ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆದಿದ್ದು, ಅವರನ್ನು ನಿಯಂತ್ರಿಸಲು ತೆರಳಿದ ಪೊಲೀಸರ ಮೇಲೆ ಕಲ್ಲುತೂರಾಟ ನಡೆದಿದೆ. ಪ್ರತಿಭಟನಾಕಾರರು ರೈಲ್ವೆ ಹಳಿಗಳ ಮೇಲೆ ಪೀಠೋಪಕರಣಗಳನ್ನು ಎಸೆದು ಬೆಂಕಿ ಹಚ್ಚಿದ್ದಾರೆ. ರೈಲ್ವೆ ಸಿಬ್ಬಂದಿ ಅಗ್ನಿ ನಂದಿಸುವ ಸಾಧನಗಳ ಮೂಲಕ ಬೆಂಕಿ ಆರಿಸಿದ್ದಾರೆ.

ಬ್ಯೂರೋ ರಿಪೋರ್ಟ್‌ ಪವರ್‌ ಟಿವಿ

RELATED ARTICLES
- Advertisment -
Google search engine

Most Popular

Recent Comments