Tuesday, August 26, 2025
Google search engine
HomeUncategorizedಮೇಕೆದಾಟಿಗೆ ಕ್ಯಾತೆ ಯಾಕೆ..?

ಮೇಕೆದಾಟಿಗೆ ಕ್ಯಾತೆ ಯಾಕೆ..?

ನೀರಿನ ಕ್ಯಾತೆ ಇಂದು ನಿನ್ನೆಯದಲ್ಲ.. ಅದು ಕಾಲ ಕಾಲಕ್ಕೂ ಒಂದಿಲ್ಲೊಂದು ರೀತಿಯಲ್ಲಿ ಮುಂದುವರೆದುಕೊಂಡು ಬಂದಿದೆ. ಒಮ್ಮೆ ಕಾವೇರಿ ನೀರಿಗಾಗಿ ಕನ್ನಡಿಗರು ಬೀದಿಗಿಳಿದರೆ ಮತ್ತೊಮ್ಮೆ ಮಹದಾಯಿ ನೀರಿಗಾಗಿ ಉತ್ತರ ಕನ್ನಡ ಭಾಗದ ಜನರು ನಿರಂತರ ಪ್ರತಿಭಟನೆ ಮಾಡುವ ಸ್ಥಿತಿ ಬರುತ್ತದೆ. ಇನ್ನೂಮ್ಮೆ ಮೇಕೆದಾಟಿನ ನೀರಿಗಾಗಿ ನಮ್ಮವರು ಬೀದಿಗೆ ಇಳಿಯುವ ಪರಸ್ಥಿತಿ… ಆಯಾ ಕಾಲ ಘಟದಲ್ಲಿ ನೀರು ಮತ್ತು ನೀರಾವರಿ ಯೋಜನೆಗಾಗಿ ಕನ್ನಡಿಗರು ಬೀದಿಗಿಳಿದು ಕಾಳಗ ಮಾಡಿ ನ್ಯಾಯಾಲಯಕ್ಕೆ ಅಲೆಯುವ ಪರಸ್ಥಿತಿ ಒಂದು ಕಡೆಯಾದರೆ, ಇನ್ನು ರಾಜ್ಯ ರಾಜ್ಯಗಳ ನಡುವಿನ ಜಲ ವಿವಾದ ಇತ್ಯರ್ಥಕ್ಕಾಗಿ ಸುಪ್ರಿಂ ಮೊರೆ ಹೋಗುವುದು ಮತ್ತೊಂದು ಕಡೆ.
ಇವೆಲ್ಲಾ ಸಾಲದು ಎನ್ನುವಂತೆ ಈಗ ಕೆಲವು ನೀರಾವರಿ ಯೋಜನೆಗಳು ರಾಜಕೀಯ ಪಕ್ಷಗಳ ರಾಜಕೀಯ ದಾಳದ ವಸ್ತುವಾಗಿ ಬಿಟ್ಟಿವೆ. ಅದರಲ್ಲಿ ಮೇಕೆದಾಟು ಯೋಜನೆ ಅಗ್ರಪಂಕ್ತಿಯಲ್ಲಿದೆ. ನಮ್ಮ ಜನರಿಗೆ ಕುಡಿಯುವ ನೀರಿಗಾಗಿ ನಿರ್ಮಾಣ ಮಾಡಬೇಕಿದ್ದ ಯೋಜನೆ ಅನುಷ್ಠಾನಕ್ಕೆ ಸರ್ವ ಪಕ್ಷಗಳು ಒಮ್ಮತದ ಹೋರಾಟ ಮಾಡಬೇಕಿತ್ತು. ಬದಲಿಗೆ ತಮ್ಮ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಮೇಕೆದಾಟು ಯೋಜನೆ ಗುರಿಯಾಗುತ್ತಿದೆ. ವಾಸ್ತವದಲ್ಲಿ ಕನ್ನಡ ನಾಡಿನ ಜನರಿಗೆ ಈ ಯೋಜನೆ ಅಸಲಿಯತ್ತಿನ ಪರಿಚಯ ಇಲ್ಲದಿರುವುದು ರಾಜಕೀಯ ನಾಯಕರಿಗೆ ವರದಾನವಾಗಿದೆ. ಆದರೆ ಕನ್ನಡಿಗರು ಇಲ್ಲಿ ನಡೆಯುವ ರಾಜಕೀಯ ಕಚ್ಚಾಟಗಳನ್ನು ನೋಡಿ ಈ ಜನನಾಯಕರ ಬಗ್ಗೆ ಅಸಹ್ಯ ಪಡುವಂತಾಗಿದೆ.

ಏನಿದು ಮೇಕೆದಾಟು ಯೋಜನೆ..?
ರಾಮನಗರ ಜಿಲ್ಲೆಯ ಮೇಕೆದಾಟು ಎಂಬಲ್ಲಿ ಕಿರು ಅಣೆಕಟ್ಟು ನಿರ್ಮಾಣ ಮಾಡುವ ಮೂಲಕ ಈ ಭಾಗದ ಜನರಿಗೆ ಕುಡಿಯುವ ನೀರಿಗಾಗಿ ಬಳಸಿಕೊಳ್ಳುವ ಯೋಜನೆ ಇದಾಗಿದೆ. ಬೆಂಗಳೂರಿನಿಂದ 90 ಕಿ.ಮೀ ದೂರದಲ್ಲಿ ಮೇಕೆದಾಟು ಇದ್ದು, ಅದು ಸದ್ಯ ಪಿಕ್ನಿಕ್ ಸ್ಪಾಟ್ ಆಗಿದೆ. ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮ ಸ್ಥಳದಿಂದ ಸುಮಾರು 4 ಕಿಲೋಮೀಟರ್ ಅಂತರದಲ್ಲಿ ಇದೆ ಈ ಮೇಕೆದಾಟು ಪ್ರದೇಶ. ಈ ಪ್ರದೇಶಕ್ಕೆ ಮೇಕೆದಾಟು ಎಂದು ಹೆಸರು ಬರುವುದಕ್ಕೆನ ಕಾರಣ ಕಾವೇರಿ ನದಿಯನ್ನು ಮೇಕೆ ಹಾರಿ ದಾಟುವಷ್ಟು ಕಿರು ಜಾಗದಲ್ಲಿ ಹರಿದು ಆಳವಾದ ಕಂದಕಕ್ಕೆ ಧುಮುಕುವುದು. ಈ ಜಾಗದ ಪ್ರಾಕೃತಿಕ ವ್ಯವಸ್ಥೆಯಿಂದಾಗಿ ಇದಕ್ಕೆ ಮೇಕೆದಾಟು ಎಂಬ ಹೆಸರು ಬಂದಿದೆ. ಇನ್ನೂ ಈ ಹೆಸರು ಬರಲು ಒಂದು ಜನಪದ ಕಥೆಯೂ ಇದೆ. ಶತಮಾನಗಳ ಹಿಂದೆ ಇಲ್ಲೊಬ್ಬ ಕುರಿಗಾಹಿ ತನ್ನ ಮೇಕೆಗಳನ್ನು ಮೇಯಿಸುತ್ತ ಇದ್ದನಂತೆ. ನೂರಾರು ಮೇಕೆಗಳು ಒಂದೆಡೆ ಮೇಯುತ್ತಾ ಇದ್ದರೆ ಒಂದು ಮೇಕೆ ಮಾತ್ರ ಒಂಟಿಯಾಗಿ ಓಡಾಡುತ್ತ ಸೊಪ್ಪು ತಿನ್ನುತ್ತಾ ಇತ್ತು. ಈ ಸಮಯದಲ್ಲಿ ಬೇಟೆಯಾಡಲು ಬಂದಿದ್ದ ಒಂದು ಹುಲಿ  ಒಂಟಿಯಾಗಿ ಸೊಪ್ಪು ತಿನ್ನುತ್ತಿದ್ದ ಮೇಕೆಯನ್ನು ನೋಡಿ ಅದರ ಮೇಲೆ ದಾಳಿ ನಡೆಸಿತು. ಆದರೆ ಹುಲಿಯಿಂದ ತಪ್ಪಿಸಿಕೊಂಡ ಮೇಕೆ ನದಿಯ ತೀರದಲ್ಲೇ ಪ್ರಾಣ ಬಿಟ್ಟಿತ್ತಂತೆ ಎಂಬೆಲ್ಲಾ ಕಥೆಗಳಿವೆ.


ಮೇಕೆದಾಟು ಯೋಜನೆಯ ಬಗ್ಗೆ:
ಕರ್ನಾಟಕ ಸರಕಾರ ಕಾವೇರಿ ನದಿಗೆ ಮೇಕೆದಾಟು ಬಳಿ ಕಿರು ಆಣೆಕಟ್ಟು ಕಟ್ಟಿ ಕುಡಿಯುವ ನೀರಿಗಾಗಿ ಬಳಸಿಕೊಳ್ಳುವ ಯೋಜನೆ ಇದು. ಎಂದಿನಂತೆ ಈ ಯೋಜನೆಗೆ ತಮಿಳು ನಾಡು ಕ್ಯಾತೆ ತೆಗೆದಿದೆ. ಅಣೆಕಟ್ಟು ನಿರ್ಮಾಣ ಮಾಡುವುದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದೆ. ಅಷ್ಟೆ ಅಲ್ಲದೇ ಸುಪ್ರೀಂ ಕೋರ್ಟ್ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ ಈ ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದೆ.


ಈ ಯೋಜನೆಯ ಲಾಭ:
ಈಗಾಗಲೆ ಕಾವೇರಿ ನ್ಯಾಯಾಧೀಕರಣ ನೀಡಿದ ತೀರ್ಪಿನಂತೆ ಕರ್ನಾಟಕ ಸರ್ಕಾರ ಪ್ರತಿವರ್ಷ 192 ಟಿಎಂಸಿ ನೀರನ್ನು ತಮಿಳುನಾಡಿಗೆ ಮಂಡ್ಯದಲ್ಲಿರುವ ಕೃಷ್ಣರಾಜಸಾಗರ ಜಲಾಶಯದಿಂದ ಬಿಡುಗಡೆ ಮಾಡುತ್ತದೆ. ಈ ನೀರಿನ ಜೊತೆಗೆ ಹೆಚ್ಚುವರಿಯಾಗಿ ಒಂದು ಅಂದಾಜಿನ ಪ್ರಕಾರ 80, 90 ಟಿಎಂಸಿ ನೀರು ತಮಿಳುನಾಡಿಗೆ ಸೇರುತ್ತದೆ. ಹೀಗೆ ರಾಜ್ಯದಿಂದ ಹರಿದು ಹೋಗುತ್ತಿರುವ ಈ ನೀರನ್ನು ಸಂಗ್ರಹಿಸಿ ಬೆಂಗಳೂರು ನಗರಕ್ಕೆ ಪೂರೈಕೆ ಮಾಡಲು ಕರ್ನಾಟಕ ಸರ್ಕಾರ ಅಣೆಕಟ್ಟು ನಿರ್ಮಿಸಲು ಹೊರಟಿದೆ.
ತಮಿಳನಾಡಿನ ಕ್ಯಾತೆ:
1952 ರಲ್ಲೇ ಈ ಮೇಕೆದಾಟು ಯೋಜನೆ ಪ್ರಸ್ತಾಪ ಹುಟ್ಟಿಕೊಂಡಿತ್ತು. ಆದರೆ ಕೆಲ ಕಾರಣಗಳಿಂದ ಈ ಯೋಜನೆಯನ್ನು ಸರ್ಕಾರ ಕೈಬಿಟ್ಟಿತ್ತು. ನಂತರ 1996ರಲ್ಲಿ ಮೇಕೆದಾಟುವಿನಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ರಾಜ್ಯ ಸರ್ಕಾರ ತಯಾರಿಸಿ ಕೇಂದ್ರದ ವಿದ್ಯುತ್ ಪ್ರಾಧಿಕಾರದ ಅನುಮೋದನೆಗೆ ಕಳುಹಿಸಿಕೊಟ್ಟಿತ್ತು. ಆದರೆ ಇದೇ ಸಮಯದಲ್ಲಿ ಕಾವೇರಿ ವಿವಾದ ನ್ಯಾಯಾಧಿಕರಣ ಮುಂದೆ ಇತ್ತು. ಹಾಗಾಗಿ ಕಾವೇರಿ ವಿವಾದ ಬಗೆ ಹರಿದ ನಂತರ ಪ್ರಸ್ತುತ ವಿಚಾರ ಕೈಗೆತ್ತಿಕೊಳ್ಳಿ ಎಂಬ ಜಾಣ ಉತ್ತರ ನೀಡಿತ್ತು. ಕೇಂದ್ರದ ವಿದ್ಯುತ್ ಪ್ರಾಧಿಕಾರ ಈ ಮೂಲಕ ತನ್ನ ಹೆಗಲ ಮೇಲಿನ ಭಾರವನ್ನು ಇಳಿಸಿಕೊಂಡತ್ತು. 2007ರಲ್ಲಿ ನ್ಯಾಯಾಧಿಕರಣ ಅಂತಿಮ ತೀರ್ಪು ಪ್ರಕಟಿಸಿದ ಬಳಿಕ ಮತ್ತೆ ಮೇಕೆದಾಟು ಯೋಜನೆ ಚುರುಕುಕೊಂಡಿತ್ತು. ಅಂತು ಇಂತು ಎಲ್ಲಾ ಹೈಡ್ರಾಮಾಗಳ ನಂತರ 2013ರಲ್ಲಿ ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ನಿರ್ಮಿಸಲು ಮಹತ್ವದ ಹೆಜ್ಜೆ ಇಟ್ಟಿತು.
ರಾಜ್ಯ ಸರ್ಕಾರ ಅಣೆಕಟ್ಟು ನಿರ್ಮಿಸಲು ಮುಂದಾಗುತ್ತಿದ್ದಂತೆ ಆಗಿನ ತಮಿಳುನಾಡು ಸಿಎಂ ಜಯಲಲಿತಾ ಕೇಂದ್ರದ ಮೊರೆ ಹೋಗಿ, ಸುಪ್ರೀಂನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದರು. ಆದರೆ ಕರ್ನಾಟಕ ಸರ್ಕಾರ ಮೇಕೆದಾಟು ಸಮಗ್ರ ಯೋಜನೆ(ಡಿಪಿಆರ್) ತಯಾರಿಸಲು ಜಾಗತಿಕ ಟೆಂಡರ್ ಕರೆದಿದೆ. ಅಷ್ಟೇ ಅಲ್ಲದೇ ಬಜೆಟ್ನಲ್ಲಿ ಡಿಪಿಆರ್ಗೆ 25 ಕೋಟಿ ರೂ.ಹಣವನ್ನು ಸರ್ಕಾರ ಮೀಸಲಿಟ್ಟಿದೆ. ಡಿಪಿಆರ್ ತಯಾರಿಸಲು ಮುಂದಾಗುತ್ತಿದ್ದಂತೆ ತಮಿಳುನಾಡು ರೈತರ ಮತ್ತು ಅಲ್ಲಿನ ರಾಜಕೀಯ ಪಕ್ಷಗಳ ಕೆಂಗಣ್ಣಿಗೆ ಕಾರಣವಾಗಿದೆ. ಇನ್ನೂ ನಮ್ಮ ರಾಜ್ಯದ ರಾಜಕೀಯ ಪಕ್ಷಗಳಿಗೂ ತಮ್ಮ ಗುರಿಯಾಗಿದ್ದು ಕರ್ನಾಟಕದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.

ತಮಿಳುನಾಡಿನ ತಕರಾರೇನು..?

ಕಾವೇರಿ ನ್ಯಾಯಾಧೀಕರಣದಲ್ಲಿ ನೀರು ಹಂಚಿಕೆ ವಿಚಾರಣೆ ನಡೆಯುವ ವೇಳೆ ಮೇಕೆದಾಟು ವಿಚಾರ ಪ್ರಸ್ತಾಪವೇ ಆಗಿರಲಿಲ್ಲ. ಆದರೆ ಸರ್ಕಾರ ಈಗ ಯೋಜನೆ ರೂಪಿಸೋದಕ್ಕೆ ಮುಂದಾಗಿದ್ದು ನ್ಯಾಯಾಮಂಡಳಿಯ ತೀರ್ಪನ್ನು ಉಲ್ಲಂಘಿಸಿದೆ. ಜೊತೆಗೆ ತಮಿಳುನಾಡಿಗೆ ನೈಸರ್ಗಿಕವಾಗಿಯೇ ಮಳೆ ಮೂಲಕ ಹೆಚ್ಚುವರಿ ನೀರು ಬರುತ್ತದೆ. ಅದರೆ ಈ ಅಣೆಕಟ್ಟು ನಿರ್ಮಿಸುವ ಮೂಲಕ ಕರ್ನಾಟಕ ತಮಿಳುನಾಡಿನ ರೈತರ ಕೃಷಿಗೆ ಅಡ್ಡಗಾಲು ಹಾಕುತ್ತಿದೆ. ಹೀಗಾಗಿ ಈ ಯೋಜನೆಗೆ ಅನುಮತಿ ನೀಡಬಾರದು ಎಂದು ತಮಿಳನಾಡು ತಕರಾರು ಮಾಡುತ್ತಿದೆ.

ನಮ್ಮವರ ವಾದ ಏನು..?

ಕಾವೇರಿ ನ್ಯಾಯಾಧೀಕರಣದ ತೀರ್ಪಿನ ಪ್ರಕಾರ ಪ್ರತಿವರ್ಷ 192 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವುದು ನಮ್ಮ ಹೊಣೆ. ಒಂದು ವೇಳೆ ನಾವು ಅಷ್ಟು ಪ್ರಮಾಣದ ನೀರನ್ನು ಬಿಡದಿದ್ದರೆ ತಮಿಳುನಾಡು ಪ್ರಶ್ನಿಸುವುದು ಸರಿ. ನಾವು ಕುಡಿಯುವ ನೀರಿಗಾಗಿ ಡ್ಯಾಂ ಕಟ್ಟುತ್ತೇವೆಯೇ ಹೊರತು ವಿದ್ಯುತ್ ಉತ್ಪಾದನೆಗೆ ಅಲ್ಲ. ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕೆಂದು ಎಂದು ಅಂತಾರಾಷ್ಟ್ರೀಯ ಜಲ ನೀತಿಯೇ ಹೇಳಿದೆ. ಹೀಗಾಗಿ ನಾವು ಎತ್ತಿಕೊಂಡ ಮೇಕೆದಾಟು ಯೋಜನೆ ನ್ಯಾಯ ಸಮ್ಮತವಾಗಿದೆ. ಇದರಲ್ಲಿ ತಕರಾರು ಮಾಡುವುದು ಮೋಸರಲ್ಲಿ ಕಲ್ಲು ಹುಡುಕಿದಂತೆ ಎನ್ನುವುದು ನಮ್ಮವರ ವಾದ.

ನಮಗೆ ಮೇಕೆದಾಟಿನ ಅಗತ್ಯ ಇದೆಯಾ..? .

ಈಗ ನಮ್ಮ ಬೆಂಗಳೂರು ನಗರಕ್ಕೆ ಕುಡಿಯುವುದಕ್ಕೆ ನೀರು ಬರುವುದು ಕೆಆರ್​ಎಸ್ ಡ್ಯಾಂನಿಂದ. ಮಳೆಗಾಲದಲ್ಲಿ ಡ್ಯಾಂ ಭರ್ತಿಯಾದರೆ ಬೆಂಗಳೂರು ಜನತೆಗೆ ನೀರಿಗೆ ತೊಂದರೆ ಇಲ್ಲ. ಪ್ರತಿ ದಿನ ಬೆಂಗಳೂರು ಮಹಾನಗರಕ್ಕೆ 1400 ದಶಲಕ್ಷ ಲೀಟರ್ ನೀರಿನ ಅಗತ್ಯವಿದೆ. ಬೇಸಿಗೆ ಸಮಯದಲ್ಲಿ ನೀರಿನ ಬೇಡಿಕೆ ಶೇ.15ರಷ್ಟು ಹೆಚ್ಚಾಗುತ್ತದೆ.
2012 ರಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನೀರು ಪಂಪಿಂಗ್ ಮಾಡುವುದನ್ನು ನಿಲ್ಲಿಸಲಾಗಿದೆ. ಪರಿಣಾಮ ಬೆಂಗಳೂರಿಗೆ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಇಲ್ಲಿ ಸಂಗ್ರಹವಾದ ಡ್ಯಾಂ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗೆ ಬಳಸಿಕೊಳ್ಳುವುದು ಉದ್ದೇಶವಾಗಿದೆ.

ಹೇಗಿರಲಿದೆ ಯೋಜನೆ..?

ಮೇಕೆದಾಟು ಯೋಜನೆಯ ಪ್ರಕಾರ ಶುರುವಿನಲ್ಲಿ 4,500 ಎಕ್ರೆ ಅರಣ್ಯ ಪ್ರದೇಶ ಮುಳುಗಡೆಯಾಗಲಿದೆ ಎನ್ನಲಾಗಿತ್ತು. ಇದರಿಂದ ಸಾಕಷ್ಟು ಅರಣ್ಯ ಪ್ರದೇಶ ಮುಳುಗಡೆ ಯಾಗುವ ಹಿನ್ನೆಲೆಯಲ್ಲಿ ಯೋಜನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿತ್ತು. ಸದ್ಯ ಸರಾಸರಿ 20 ಟಿಎಂಸಿ ಸಾಮರ್ಥ್ಯದ 2 ಅಥವಾ 3 ಅಣೆಕಟ್ಟು ಕಟ್ಟುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ. ಆದರೆ ನಿಖರವಾಗಿ ಸರಕಾರ ಎಷ್ಟು ಡ್ಯಾಮ್ಗಳನ್ನು ಕಟ್ಟಬೇಕು ಎನ್ನುವ ಸ್ಪಷ್ಟನೆ ಕೊಟ್ಟಿಲ್ಲ. ಇನ್ನೂ ಸ್ಥಳ ಪರಿಶೀಲನೆಯಾಗಿಬೇಕು. ನಂತರ ಸಮಗ್ರ ಯೋಜನಾ ವರದಿ ತರಿಸಿಕೊಳ್ಳಬೇಕು. ನಂತರವೇ ಸರ್ಕಾರದ ಸ್ಪಷ್ಟ ನಿರ್ಣಯ ಹೊರಬರುವ ನಿರೀಕ್ಷೆಯಿದೆ.

ನ್ಯಾಯಾಧೀಕರಣದ ಪ್ರಕಾರ ಕಾವೇರಿ ನೀರಿನಲ್ಲಿ ನಮ್ಮ ಪಾಲು..

1990ರ ಜೂನ್ 6 ರಂದು ಕಾವೇರಿ ನ್ಯಾಯಾಧೀಕರಣ ರಚನೆಯಾಗಿದೆ. 2007 ರ ಫೆಬ್ರವರಿ 2 ರಂದು ನ್ಯಾಯಮೂರ್ತಿ ಎನ್. ಪಿ. ಸಿಂಗ್ ನೇತೃತ್ವದ, ಎನ್. ಎಸ್. ರಾವ್ ಮತ್ತು ಸುಧೀರ್ ನಾರಾಯಣ್ ಅವರನ್ನೊಳಗೊಂಡ ಪ್ರಾಧಿಕಾರವು ರಚನೆ ಯಾಗಿತ್ತು. ಅದು 2007ರಲ್ಲಿ ನೀಡಿದ ತೀರ್ಪಿನಲ್ಲಿ ಕಾವೇರಿ ಜಲಾನಯನದಲ್ಲಿ ಒಟ್ಟು 740 ಟಿಎಂಸಿ ನೀರು ಲಭ್ಯವಿದೆ ಎಂದು ಸ್ಪಷ್ಟಪಡಿಸಿತ್ತು.
ಕರ್ನಾಟಕ ರಾಜ್ಯವು ನ್ಯಾಯಾಧೀಕರಣದ ಮುಂದೆ 27.28ಲಕ್ಷ ಎಕರೆ ನೀರಾವರಿ ಮತ್ತು ಬೆಂಗಳೂರು ಸೇರಿದಂತೆ ಎಲ್ಲಾ ಪಟ್ಟಣ ಪ್ರದೇಶಗಳ ಕುಡಿಯುವ ನೀರು, ವಿದ್ಯುತ್ ಮುಂತಾದವುಗಳಿಗೆ ಒಟ್ಟು 465 ಟಿ.ಎಂ.ಸಿ ನೀರಿನ ಬೇಡಿಕೆ ಮಂಡಿಸಿತ್ತು. ಆದರೆ ನ್ಯಾಯಮಂಡಳಿಯು ಈ ಎಲ್ಲಾ ಉದ್ದೇಶಕ್ಕಾಗಿ 270 ಟಿಎಂಸಿ ಮಾತ್ರ ದಯಪಾಲಿಸಿತ್ತು. ತಮಿಳುನಾಡು 562 ಟಿಎಂಸಿ ನೀರಿಗೆ ಬೇಡಿಕೆ ಇಟ್ಟಿತ್ತು. ಆದರೆ ನ್ಯಾಯಮಂಡಳಿ ಅವರಿಗೆ 419 ಟಿಎಂಸಿ ಹಂಚಿಕೆ ಮಾಡಿತ್ತು. ಕೇರಳಕ್ಕೆ 30 ಟಿಎಂಸಿ ಮತ್ತು ಪುದುಚೇರಿಗೆ 7 ಟಿಎಂಸಿ ನೀರು ಹಂಚಿಕೆ ಸೂತ್ರದ ರಚಿಸಿ ತೀರ್ಪು ನೀಡಿತ್ತು.
ಈ ತೀರ್ಪಿನ ಜೊತೆಗೆ ಪ್ರತಿ ವರ್ಷ ಜೂನ್ ತಿಂಗಳಿನಿಂದ ಏಪ್ರಿಲ್ ವರೆಗೆ 192 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಕರ್ನಾಟಕಕ್ಕೆ ಆದೇಶ ನೀಡಲಾಗಿದೆ. ಇಷ್ಟು ಪ್ರಮಾಣದ ನೀರನ್ನು ಪ್ರತಿ ತಿಂಗಳು ವಾರದಲ್ಲಿ ನಿಗದಿತ ಪ್ರಮಾಣದಲ್ಲಿ ಬಿಡುಗಡೆ ಮಾಡಲು ಸೂಚಿಸಿದೆ.
ಇಷ್ಟಲ್ಲಾ ವಿಷಯಗಳಿದ್ದರು ನಾವೇಲ್ಲಾ ಒಂದಾಗಿ ನೀರಿಗಾಗಿ ಹೋರಾಟ ಮಾಡೋಣ ಎನ್ನವ ಮನೊಭಾವ ನಮ್ಮ ರಾಜಕಾರಣಿಗಳಿಗೆ ಬಂದಿದ್ದರೆ ಈ ಯೋಜನೆ ಹುಲ್ಲು ಕಡ್ಡಿ ಎತ್ತಿದಂತೆ ಸರಾಗವಾಗಿ ಮಾಡಿ ಮುಗಿಸಬಹುದಾಗಿತ್ತು. ಆದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಒಣ ಪ್ರತಿಷ್ಟೆ ಇಂದು ರಾಜಕೀಯ ಅಖಾಡ ನಿರ್ಮಾಣವಾಗಲು ಕಾರಣವಾಗಿದೆ.

ಶ್ರೀನಾಥ್​ ಜೋಶಿ, ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments