Tuesday, September 16, 2025
HomeUncategorizedಖಾಸಗಿ ಆಸ್ಪತ್ರೆಗಳಲ್ಲಿ ಕುಂದುಕೊರತೆಯಾಗದಂತೆ ಕೊರೋನಾ ಪೀಡಿತರಿಗೆ ಚಿಕಿತ್ಸೆಗೆ ಕ್ರಮ ಕೈಗೊಳ್ಳಿ: ಸಚಿವ ಕೆ.ಎಸ್ ಈಶ್ವರಪ್ಪ

ಖಾಸಗಿ ಆಸ್ಪತ್ರೆಗಳಲ್ಲಿ ಕುಂದುಕೊರತೆಯಾಗದಂತೆ ಕೊರೋನಾ ಪೀಡಿತರಿಗೆ ಚಿಕಿತ್ಸೆಗೆ ಕ್ರಮ ಕೈಗೊಳ್ಳಿ: ಸಚಿವ ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ : ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳನ್ನು ದಾಖಲಿಸಿ ಯಾವುದೇ ಕುಂದುಕೊರತೆಯಾಗದಂತೆ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸೂಚನೆ ನೀಡಿದ್ದಾರೆ. ಇಂದು ಜಿಲ್ಲಾಡಳಿತ ಸಭಾಂಗಣದಲ್ಲಿ ನಗರದ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ಕುರಿತು ಮಾತನಾಡಿದ್ರು. ಪ್ರಸ್ತುತ ಸುಬ್ಬಯ್ಯ ಮೆಡಿಕಲ್ ಕಾಲೇಜು, ನಾರಾಯಣ ಹೃದಯಾಲಯ, ಮ್ಯಾಕ್ಸ್ ಮತ್ತು ನಂಜಪ್ಪ ಆಸ್ಪತ್ರೆಗಳಲ್ಲಿ ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸುಮಾರು 600 ಬೆಡ್‍ಗಳಿವೆ. ಇವುಗಳ ಪೈಕಿ ಶೇ.50 ರಷ್ಟು ಬೆಡ್‍ಗಳನ್ನು ಸರ್ಕಾರಿ ಕೋಟಾದಡಿ ಒದಗಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಆದರೆ ಕೆಲವು ಖಾಸಗಿ ಆಸ್ಪತ್ರೆಗಳ ಕಾರ್ಯವೈಖರಿ ಬಗ್ಗೆ ದೂರುಗಳು ಬರುತ್ತಿವೆ. ಇತ್ತೀಚೆಗೆ ಕೊರೋನಾ ಪೀಡಿತೆ ತುಂಬು ಗರ್ಭಿಣಿಯೊಬ್ಬರನ್ನು ದಾಖಲಿಸಲು ಖಾಸಗಿ ಆಸ್ಪತ್ರೆಯೊಂದು ನಿರಾಕರಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಯಾವುದೇ ದೂರುಗಳು ಬರಬಾರದು ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದ್ರು.

ತಂಡ ರಚನೆ :-
ಮೆಗ್ಗಾನ್ ಸೇರಿದಂತೆ ಎಲ್ಲಾ ಕೋವಿಡ್ ಆಸ್ಪತ್ರೆಗಳಿಗೆ ಪ್ರತಿದಿನ ಭೇಟಿ ನೀಡಿ, ರೋಗಿಗಳೊಂದಿಗೆ ಮಾತನಾಡಿ, ಲಭ್ಯವಿರುವ ಬೆಡ್ ಸಂಖ್ಯೆ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಲು ಹಿರಿಯ ವೈದ್ಯಾಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗುವುದು. ಈ ತಂಡ ಪ್ರತಿದಿನ ವರದಿಯನ್ನು ಸಲ್ಲಿಸಲಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ಹೇಳಿದ್ರು. ಪ್ರಸ್ತುತ ಮೆಗ್ಗಾನ್ ಕೋವಿಡ್-19 ಆಸ್ಪತ್ರೆಯಲ್ಲಿ 160 ಕೊರೋನಾ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ 250 ಮಂದಿ ಕೊರೋನಾ ಶಂಕಿತರು ಐಸೋಲೇಷನ್ ವಾರ್ಡ್‍ನಲ್ಲಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಸಹ ಇಂತಹ ಐಸೋಲೇಷನ್ ವಾರ್ಡ್ ಆರಂಭಿಸಲು ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಿದ್ರು.

ಪ್ರಮಾಣ ಇಳಿಮುಖ :-
ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಿಂದ ಕೊರೋನಾ ಪಾಸಿಟಿವ್ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಮೆಗ್ಗಾನ್ ಆಸ್ಪತ್ರೆಗಿಂತ ಹೆಚ್ಚಾಗಿ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವವರಿಂದ ಹೆಚ್ಚಿನ ದೂರುಗಳು ಬರುತ್ತಿವೆ. ಕೊರೋನಾ ಪೀಡಿತರಿಗೆ ಮಾನಸಿಕ ಧೈರ್ಯ ತುಂಬಲು ಮನ:ಶಾಸ್ತ್ರಜ್ಞರು ಮತ್ತು ಕೌನ್ಸಿಲರ್‍ಗಳನ್ನು ನಿಯೋಜಿಸಬೇಕು. ಅವರು ಪ್ರತಿದಿನ ಕೊರೋನಾ ಪೀಡಿತರನ್ನು ಭೇಟಿಯಾಗಿ ಮಾತುಕತೆ ನಡೆಸಬೇಕೆಂದು ಕೂಡ ಸಭೆಯಲ್ಲಿ ಎಚ್ಚರಿಕೆ ನೀಡಲಾಯಿತು. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ನಡೆಸಲಾಗುವ ಕೊರೋನಾ ತಪಾಸಣೆಯ ಫಲಿತಾಂಶವನ್ನು ಆದಷ್ಟು ಬೇಗನೆ ಸಂಬಂಧಪಟ್ಟವರಿಗೆ ತಿಳಿಸುವ ವ್ಯವಸ್ಥೆ ಮಾಡಬೇಕೆಂದು ಕೂಡ ಸೂಚನೆ ನೀಡಿದ್ರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments