Tuesday, September 16, 2025
HomeUncategorizedಡಿ.ಕೆ.ಶಿ ಯಾವ ಗುಡ್ಡ ಕಡಿದು ಹಾಕಿದ್ದಾರೆ ಎಂದು ಅವರ ಫೋನ್ ಕದ್ದಾಲಿಕೆ ಮಾಡಬೇಕು? - ಸಚಿವ...

ಡಿ.ಕೆ.ಶಿ ಯಾವ ಗುಡ್ಡ ಕಡಿದು ಹಾಕಿದ್ದಾರೆ ಎಂದು ಅವರ ಫೋನ್ ಕದ್ದಾಲಿಕೆ ಮಾಡಬೇಕು? – ಸಚಿವ ಈಶ್ವರಪ್ಪ

ಶಿವಮೊಗ್ಗ : ಡಿ.ಕೆ. ಶಿವಕುಮಾರ್ ಯಾವ ಗುಡ್ಡ ಕಡಿದು ಹಾಕಿದ್ದಾರೆ ಎಂದು ಅವರ ಫೋನ್ ಕದ್ದಾಲಿಕೆ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ. ಶಿವಮೊಗ್ಗದಲ್ಲಿಂದು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಮುಗಿದು ಹೋಗಿರುವ ಕಾಂಗ್ರೆಸ್ಸಿಗೆ ಬಂದು ಲೀಡರ್ ಎಂದು ತೋರಿಸಿಕೊಳ್ಳಲು, ಡಿ.ಕೆ. ಶಿವಕುಮಾರ್ ಫೋನ್ ಕದ್ದಾಲಿಕೆಯ ಆರೋಪ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಅವರ ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂಬ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದಿದ್ದಾರೆ. ಇದೇ ವೇಳೆ ಅವರು, ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿ ಸೇರ್ಪಡೆಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿ, ಸ್ವಾಗತ ಕೋರಿದ್ದಾರೆ. ಅಣ್ಣಾಮಲೈ ಅಂತಹ ಪ್ರಾಮಾಣಿಕ ವ್ಯಕ್ತಿ ಬಿಜೆಪಿಗೆ ಬರುತ್ತಿರುವುದು ಸಂತಸ ತಂದಿದೆ. ಅಣ್ಣಾಮಲೈಯಂತಹ ಪ್ರಾಮಾಣಿಕ ವ್ಯಕ್ತಿಯೇ ಬಿಜೆಪಿಗೆ ಸೇರ್ಪಡೆಗೊಂಡಂತೆ ಎಲ್ಲರೂ ಸೇರಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ, ನಿವೃತ್ತ ಸೈನಿಕರು, ನಿಷ್ಟಾವಂತರು, ಯುವಕರು, ಹಲವಾರು ಅಧಿಕಾರಿಗಳು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ, ಕಾಂಗ್ರೆಸ್ ಇವತ್ತಿಲ್ಲ ನಾಳೆ ಮುಳುಗುವ ಹಡಗಾಗಿದೆ. ಕಾಂಗ್ರೆಸ್ ನ್ನು ವಿಸರ್ಜನೆ ಮಾಡಿ ಎಂದು ಸ್ವಾತಂತ್ರ್ಯ ಬಂದಾಕ್ಷಣ ಮಹಾತ್ಮ ಗಾಂಧಿಯವರು ಹೇಳಿದ್ದರು. ಆದರೆ, ಇಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್, ಮತ್ತು ಸಿದ್ಧರಾಮಯ್ಯನವರು, ಕಾಂಗ್ರೆಸ್ ಪಕ್ಷದವರು ವಿಸರ್ಜನೆ ಮಾಡುತ್ತಿದ್ದಾರೆ ಎಂದು ಮೂದಲಿಸಿದ್ದಾರೆ. ಈ ಹಿಂದೆ, ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ ಎಂದಾಕ್ಷಣ ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ಸಾವರ್ಕರ್ ಹೆಸರುಗಳು ನೆನಪಾಗುತ್ತಿದ್ದವು. ಆದರೆ, ಇಂದು ಕಾಂಗ್ರೆಸ್ ಎಂದಾಕ್ಷಣ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಎರಡೇ ಹೆಸರು ಕೇಳಿ ಬರುತ್ತಿದೆ. ಪ್ರಸ್ತುತ ಕಾಂಗ್ರೆಸ್ ಒಡೆದ ಕನ್ನಡಿಯಾಗಿ ಚೂರು ಚೂರಾಗಿದೆ. ಕಾಂಗ್ರೆಸ್ ನ್ನು ಒಟ್ಟಾಗಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಜಕೀಯ ಪಕ್ಷವೆಂದ ಕೂಡಲೇ, ಪಕ್ಷದ ಸಿದ್ಧಾಂತ, ನಾಯಕತ್ವ ಅತಿ ಮುಖ್ಯವಾಗಿದ್ದು, ಆದರೆ, ಕಾಂಗ್ರೆಸ್ ನಲ್ಲಿ 23 ಜನ ನಾಯಕರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಾಯಕತ್ವ ಬೇಡ ಎಂದು ಪತ್ರ ಬರೆದಿದ್ದಾರೆ. ನರೇಂದ್ರ ಮೋದಿಯಂತಹ ನಾಯಕತ್ವ ಬೇಕು ಎನ್ನುವಂತಹ ಕಾಲದಲ್ಲಿ ಈ ರೀತಿ ಕಾಂಗ್ರೆಸ್ ಪರಿಸ್ಥಿತಿಯಾಗಿದೆ ಎಂದು ಟೀಕೆ ಮಾಡಿದ್ದಾರೆ. ದೇಶವನ್ನು ಅಭಿವೃದ್ಧಿಗೊಳಿಸುವ ಸಿದ್ಧಾಂತ ಬಿಜೆಪಿಗಿದ್ದರೆ, ಕಾಂಗ್ರೆಸ್ ನಲ್ಲಿ ಸ್ವಾರ್ಥ ರಾಜಕಾರಣವಿದೆ. ಇಡೀ ದೇಶದ ದೇಶಭಕ್ತರಿಗೆ ನಾನು ಕರೆ ನೀಡುತ್ತಿದ್ದೆನೆ ಪ್ರಾರ್ಥನೆ ಮಾಡುತ್ತೇನೆ. ಪ್ರತಿಯೊಬ್ಬರೂ ಬಂದು ಬಿಜೆಪಿಗೆ ಸೇರ್ಪಡೆಗೊಳ್ಳಿ ಎಂದು ಈಶ್ವರಪ್ಪ ಮನವಿ ಮಾಡಿಕೊಂಡಿದ್ದಾರೆ.

ಇನ್ನು ಎಐಸಿಸಿ ನಾಯಕತ್ವ ಮತ್ತು ಅಧ್ಯಕ್ಷ ಗಾದಿ ವಿಚಾರಕ್ಕೆ ಸಂಬಂಧಪಟ್ಟಂತೆ, ಮಾತನಾಡಿದ ಈಶ್ವರಪ್ಪ, ಸಿದ್ಧರಾಮಯ್ಯ ರಾಹುಲ್ ಗಾಂಧಿ ಇರಲೀ ಎಂದು ಹೇಳುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಸೋನಿಯಾ ಗಾಂಧಿ ನಾಯಕತ್ವ ಇರಲೀ ಎಂದು ಹೇಳುತ್ತಿದ್ದಾರೆ. ಆದರೆ, ಇತ್ತ ವೀರಪ್ಪ ಮೋಯಿಲಿಯವರು ಇವರಿಬ್ಬರು ಬೇಡ ಎಂದು ಹೇಳುತ್ತಿದ್ದಾರೆ. ಇದು ಕಾಂಗ್ರೆಸ್ ನ ದುಸ್ಥಿತಿ ತೋರಿಸುತ್ತಿದೆ ಎಂದು ಹೇಳಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಹೊಗಳಿದರೆ ಸ್ಥಾನಮಾನ ಸಿಗುತ್ತದೆ ಎಂಬ ಲೆಕ್ಕಾಚಾರದಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಬಗ್ಗೆಯೇ ಗೊಂದಲವಿದೆ ಎಂದು ಟೀಕೆ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments