ಮಂಡ್ಯ : ದೇವರು ಕೊಟ್ಟರೂ, ಪೂಜಾರಿ ಕೊಡನು ಎನ್ನುವಂತಾಗಿದೆ ಮಂಡ್ಯ ಜಿಲ್ಲಾಡಳಿತದ ಕಾರ್ಯವೈಖರಿ. ಸಿಎಂ ಸೂಚನೆಯಂತೆ ಸರ್ಕಾರ ಪರಿಹಾರದ ಹಣ ಮಂಜೂರು ಮಾಡಿದ್ದರೂ, ಅದನ್ನ ಕೊಡದೇ ಮಂಡ್ಯ ಜಿಲ್ಲಾಡಳಿತದ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತಾಳಿದ್ದಾರೆ.
ಹೌದು, ಸಿಎಂ ಯಡಿಯೂರಪ್ಪ ಮಾಡಿದ್ದ ಪರಿಹಾರದ ಘೋಷಣೆ ಕೇವಲ ದಾಖಲೆಯಲ್ಲೇ ಉಳಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಕೆರೆಯಲ್ಲಿ ಜೀವ ಕಳೆದುಕೊಂಡ ಏಳು ಮಂದಿಗೆ ಘೋಷಣೆ ಮಾಡಿದ್ದ ಪರಿಹಾರ ಇನ್ನೂ ಕುಟುಂಬಸ್ಥರಿಗೆ ಸಿಕ್ಕದೆ ಕಣ್ಣೀರಲ್ಲೇ ಜೀವನ ಸಾಗಿಸುತ್ತಿರುವ ಘಟನೆ ನಡೆದಿದೆ. ನಾಗಮಂಗಲ ತಾಲೂಕಿನಲ್ಲಿ ಐವರು ಕೆರೆಯಲ್ಲಿ ಮುಳುಗಿ ಸಾವಿಗೀಡಾಗಿದ್ದರು. ಅದೇ ದಿನ ಮತ್ತೊಂದು ಪ್ರಕರಣದಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನ ಹುರುಳಿ ಗಂಗನಹಳ್ಳಿಯ ಕೆರೆಯಲ್ಲಿ ನಡೆದ ಜಲ ದುರಂತದಲ್ಲಿ ಇಬ್ಬರು ಸಾವಿಗೀಡಾಗಿದ್ದರು.
ವಿಚಾರ ತಿಳಿದ ಸಿಎಂ ಯಡಿಯೂರಪ್ಪ ಎರಡೂ ತಾಲೂಕಿನ ಮೃತರ ಕುಟುಂಬಗಳಿಗೆ 23 ಲಕ್ಷ ರೂಪಾಯಿ ಪರಿಹಾರವನ್ನು ತುರ್ತಾಗಿ ಬಿಡುಗಡೆಗೊಳಿಸಲು ಸೂಚಿಸಿ ಆದೇಶ ಹೊರಡಿಸಿದ್ದರು. ಆದರೆ ಆದೇಶ ಇನ್ನೂ ಕಡತದಲ್ಲೇ ಉಳಿದುಕೊಂಡಿದೆ. ದುರಂತದಲ್ಲಿ ಸಾವಿಗೀಡಾದ ಕುಟುಂಬಕ್ಕೆ ಇನ್ನೂ ಪರಿಹಾರ ಸಿಗದೆ ಕುಟುಂಬಗಳು ಪರಿತಪಿಸುತ್ತಿವೆ.
ಎರಡು ತಿಂಗಳು ಕಳೆದರೂ ಪರಿಹಾರದ ಹಣ ಬಂದಿಲ್ಲವೆಂದು ಕುಟುಂಬಸ್ಥರು ಪರಿತಪಿಸುತ್ತಿದ್ದಾರೆ.
ಚೋಳಸಮುದ್ರ ಗ್ರಾಮದ ನರಸಿಂಹಯ್ಯರ ಪತ್ನಿ ಗೀತಾ, ಮಕ್ಕಳಾದ ಸವಿತಾ ಮತ್ತು ಸೌಮ್ಯ ಗ್ರಾಮದ ಸಣ್ಣಪ್ಪನ ಕಟ್ಟೆಯಲ್ಲಿ ಹಸುವನ್ನು ತೊಳೆಯಲು ಹೋಗಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವಿಗೀಡಾಗಿದ್ದರು.
ಅದೇ ದಿನ ಬೆಳ್ಳೂರು ಹೋಬಳಿಯ ಚೋಳಸಂದ್ರ ಗ್ರಾಮದ ರಶ್ಮಿ ಹಾಗೂ ಇಂಚರ ಗ್ರಾಮದ ಕಟ್ಟೆಯ ಬಳಿ ಬಟ್ಟೆ ತೊಳೆಯಲು ಹೋಗಿ ನೀರಿಗೆ ಬಿದ್ದು ಅಸುನೀಗಿದ್ದರು.
ಮತ್ತೊಂದು ಪ್ರಕರಣದಲ್ಲಿ ಕೆ.ಆರ್. ಪೇಟೆ ತಾಲ್ಲೂಕಿನ ಹುರುಳಿ ಗಂಗನಹಳ್ಳಿಯ ಅಭಿಷೇಕ್ ಮತ್ತು ಕುಮಾರ್ ಹಸು ತೊಳೆಯಲು ಹೋಗಿ ಕೆರೆಯಲ್ಲಿ ಮುಳುಗಿ ಸಾವಿಗೀಡಾಗಿದ್ದರು.
ಘಟನೆಯ ವಿಚಾರ ತಿಳಿದ ಸಿಎಂ ಯಡಿಯೂರಪ್ಪ 23 ಲಕ್ಷಗಳ ಪರಿಹಾರ ಘೋಷಣೆ ಮಾಡಿದ್ದರು. ಆದರೆ ಪರಿಹಾರದ ಹಣ ಕುಟುಂಬದ ಸದಸ್ಯರಿಗೆ ತಲುಪಿಲ್ಲ. ಕೇಳಿದರೆ, ಇಲ್ಲ ಸಲ್ಲದ ಸಬೂಬು ಹೇಳುವ ಅವರು ಇಂದು, ನಾಳೆ ಅಂತಾ ಕಾಲ ದೂಡ್ತಿದ್ದಾರಂತೆ.
ಇನ್ನಾದರೂ ಸಂಬಂಧಪಟ್ಟವರು ತಮ್ಮ ನಿರ್ಲಕ್ಷ್ಯ ಬಿಟ್ಟು, ಸರ್ಕಾರ ಮಂಜೂರು ಮಾಡಿರೋ ಪರಿಹಾರದ ಹಣವನ್ನ ಅರ್ಹರಿಗೆ ವಿತರಣೆ ಮಾಡಬೇಕಿದೆ.
…..
ಡಿ.ಶಶಿಕುಮಾರ್, ಮಂಡ್ಯ.