Saturday, September 13, 2025
HomeUncategorizedಸಂವಿಧಾನ ವಿರೋಧಿ ಹೇಳಿಕೆ: ಪೇಜಾವರ ಶ್ರೀ ವಿರುದ್ಧ ಕೇಸು ದಾಖಲಿಸುವಂತೆ ಮುಸ್ಲಿಂ ಒಕ್ಕೂಟ ಒತ್ತಾಯ

ಸಂವಿಧಾನ ವಿರೋಧಿ ಹೇಳಿಕೆ: ಪೇಜಾವರ ಶ್ರೀ ವಿರುದ್ಧ ಕೇಸು ದಾಖಲಿಸುವಂತೆ ಮುಸ್ಲಿಂ ಒಕ್ಕೂಟ ಒತ್ತಾಯ

ಉಡುಪಿ: ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥರು ದೇಶದ ಸಂವಿಧಾನವನ್ನು ವಿರೋಧಿಸಿ ನೀಡಿರುವ ಹೇಳಿಕೆ ಅತ್ಯಂತ ಆಘಾತಕಾರಿಯಾಗಿದೆ. ಈ ಹಿಂದೆಯೂ ಅಧ್ಯಾತ್ಮಿಕ ನಾಯಕರಿಗೆ ತಕ್ಕದಲ್ಲದ ಹೇಳಿಕೆಗಳನ್ನು ನೀಡಿದ್ದಾರೆ. ಈ ಬಾರಿ ಅವರು ನೇರವಾಗಿ ದೇಶದ ಸಂವಿಧಾನವನ್ನೇ ವಿರೋಧಿಸಿ ಮಾತಾಡಿದ್ದಾರೆ. ಇದು ಅತ್ಯಂತ ಕಳವಳಕಾರಿ ಬೆಳವಣಿಗೆಯಾಗಿದೆ. ಇದನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕು ಹಾಗು ದೇಶವಿರೋಧಿ, ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಪೇಜಾವರ ಮಠಾಧೀಶರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪದಾಧಿಕಾರಿಗಳ ಸಭೆಯು ಆಗ್ರಹಿಸಿದೆ.

‘ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು’ ಎಂದು ಹೇಳುವ ಮೂಲಕ ಪೇಜಾವರ ಮಠಾದೀಶರು ಏನು ಹೇಳಲು ಬಯಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಬೇಕಾಗಿದೆ. ಈ ದೇಶಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಇಡೀ ವಿಶ್ವವೇ ಮಾದರಿ ಎಂದು ಗೌರವಿಸುವಂತಹ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ. ಈ ದೇಶದ ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ಗೌರವ ಹಾಗೂ ಅವಕಾಶಗಳು ಸಿಗಬೇಕು, ಅಲ್ಲದೆ ಪ್ರತಿಯೊಬ್ಬರಿಗೂ ಅವರವರ ನಂಬಿಕೆಗಳನ್ನು ಅನುಸರಿಸಿಕೊಂಡು ಹೋಗಲು ಅವಕಾಶವಿದೆ ಎಂದು ನಮ್ಮ ದೇಶದ ಸಂವಿಧಾನ ಹೇಳುತ್ತದೆ. ಆದರೆ ಪೇಜಾವರ ಮಠಾಧೀಶರಿಗೆ ಎಲ್ಲರಿಗೂ ಗೌರವ ಕೊಡುವ ಸಂವಿಧಾನ ಬೇಡವಾಗಿದೆ. ಸಮಾಜದ ಒಂದು ವರ್ಗವನ್ನು ಮಾತ್ರ ಉಳಿದ ಎಲ್ಲ ವರ್ಗಗಳು ಗೌರವಿಸುವ ಹಾಗೂ ಉಳಿದೆಲ್ಲ ವರ್ಗಗಳು ಗುಲಾಮರಾಗಿಯೇ ಇರುವ ವ್ಯವಸ್ಥೆ ಹಾಗು ಸಂವಿಧಾನ ಬೇಕು ಎಂಬ ಧಾಟಿಯ ತೀರಾ ಅಮಾನವೀಯ ಬೇಡಿಕೆಯನ್ನು ಪೇಜಾವರ ಮಠಾದೀಶರು ಇಟ್ಟಿರುವುದು ಆಘಾತಕಾರಿಯಾಗಿದೆ.

ಸಮಾನತೆಯ ವಿರೋಧಿಗಳು ಆರಂಭದಿಂದಲೂ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಿರುವ ಈ ದೇಶದ ಸಂವಿಧಾನವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಮನುಷ್ಯ ವಿರೋಧಿ, ಸ್ತ್ರೀ ವಿರೋಧಿ ಆಶಯಗಳಿಂದಲೇ ತುಂಬಿ ತುಳುಕುತ್ತಿರುವ ಮನುಸ್ಮೃತಿಯನ್ನೇ ಈ ದೇಶದ ಸಂವಿಧಾನವಾಗಿ ಮಾಡಬೇಕು ಎಂದು ಬಯಸುತ್ತಾರೆ. ಈಗ ಪೇಜಾವರ ಮಠಾದೀಶರು ಪರೋಕ್ಷವಾಗಿ ಅದನ್ನೇ ಹೇಳುತ್ತಿರುವ ಹಾಗೆ ಕಾಣುತ್ತಿದೆ. ಆಧ್ಯಾತ್ಮಿಕತೆಯ ಮಾರ್ಗದರ್ಶಕರಾಗಬೇಕಾದ ವ್ಯಕ್ತಿಯೊಬ್ಬರು ಇಂತಹ ಜನವಿರೋಧಿ, ದೇಶವಿರೋಧಿ ಹಾಗು ಸಂವಿಧಾನ ವಿರೋಧಿ ಮಾತುಗಳನ್ನಾಡುವುದು ಅತ್ಯಂತ ಖಂಡನೀಯವಾಗಿದೆ.

ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಕೇಸು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಆಗ್ರಹಿಸಿದೆ.S

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments