ದೆಹಲಿ: ತನ್ನ ಮಗ ಅಶ್ಲೀಲ ವೀಡಿಯೊಗಳನ್ನು ನೋಡುತ್ತಿದ್ದ ಮತ್ತು ಶಾಲೆಯಲ್ಲಿ ಹುಡುಗಿಯರನ್ನು ಚುಡಾಯಿಸುತ್ತಿದ್ದ ಎಂದು ತಂದೆಯೊಬ್ಬ ಮಗನ್ನು ಕೊಂದು ಹಾಕಿರುವ ಘಟನೆ ನಡೆದಿದೆ.
ಹೌದು, ತಂದೆಯೇ ಮಗನ ಪಾನೀಯಕ್ಕೆ ವಿಷ ಹಾಕಿ ಸಾಯಿಸಿದ ಘಟನೆ ಮಹಾರಾಷ್ಟ್ರದ ಸೋಲಾಪುರದಲ್ಲಿ ಕಳೆದ ತಿಂಗಳು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗ ವಿಶಾಲ್ (14) ಕೊಲೆ ಮಾಡಿದ ತಂದೆ ವಿಜಯ್ ಬಟ್ಟು ಎಂಬಾತನನ್ನು ಬಂಧಿಸಲಾಗಿದೆ.
ಘಟನೆಗೆ ಕಾರಣ
ಹದಿಹರೆಯದ ಯುವಕ ಕಾಣೆಯಾದ ಬಗ್ಗೆ ದೂರನ್ನು ಜನವರಿ 13ರಂದು ಪೊಲೀಸರು ಸ್ವೀಕರಿಸಿದ್ದರು. ಶೀಘ್ರದಲ್ಲೇ ಯುವಕನ ಶವ ಪತ್ತೆಯಾಗಿತ್ತು. ಕುಟುಂಬದವರು ಶವವನ್ನು ತಮ್ಮ ಕಾಣೆಯಾದ ಮಗ ವಿಶಾಲ್ ಎಂದು ಗುರುತಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಅವನು ವಿಷ ಸೇವಿಸಿದ್ದ ಎಂದು ತಿಳಿದುಬಂದಿತ್ತು.
ವಿಶಾಲ್ ಓದುತ್ತಿರಲಿಲ್ಲ. ಆತ ಶಾಲೆಯಲ್ಲಿ ಹುಡುಗಿಯರನ್ನು ಚುಡಾಯಿಸುತ್ತಿದ್ದ. ಫೋನ್‌ನಲ್ಲಿ ಅಶ್ಲೀಲ ವೀಡಿಯೊಗಳನ್ನು ನೋಡುತ್ತಿದ್ದ. ಶಾಲೆಯಿಂದಲೂ ದೂರುಗಳು ಬರುತ್ತಿದ್ದವು. ನಿನ್ನ ನಡತೆ ಸರಿಪಡಿಸಿಕೋ ಎಂದು ಹೆತ್ತವರು ಎಷ್ಟು ಬುದ್ಧಿ ಹೇಳಿದರೂ ಅದನ್ನು ಕೇಳುತ್ತಿರಲಿಲ್ಲ.
ಘಟನೆ ನಡೆದಿದ್ದು ಹೇಗೆ..?
ಮಗನ ವರ್ತನೆಯಿಂದ ಹತಾಶೆಗೊಂಡ ಬಟ್ಟು, ಜನವರಿ 13ರಂದು ವಿಶಾಲ್‌ನನ್ನು ತನ್ನ ದ್ವಿಚಕ್ರ ವಾಹನದಲ್ಲಿ ತುಳಜಾಪುರ ರಸ್ತೆಗೆ ಕರೆದೊಯ್ದ. ಅಲ್ಲಿ ತಂಪು ಪಾನೀಯವನ್ನು ಖರೀದಿಸಿ ಅದಕ್ಕೆ ವಿಷ ಬೆರೆಸಿ ಮಗನಿಗೆ ನೀಡಿದ್ದ. ವಿಶಾಲ್ ಪ್ರಜ್ಞೆ ಕಳೆದುಕೊಂಡಿದ್ದ. ಬಟ್ಟು ಒಬ್ಬನೇ ಮನೆಗೆ ಮರಳಿದ್ದ. ಸಂಜೆ ಬಟ್ಟು ಮತ್ತು ಆತನ ಪತ್ನಿ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಮಗ ಕಾಣೆಯಾಗಿದ್ದಾನೆ ಎಂದು ದೂರು ಸಲ್ಲಿಸಿದ್ದರು.


