Monday, August 25, 2025
Google search engine
HomeUncategorizedಸಿದ್ದರಾಮಯ್ಯ ಸರ್ಕಾರ, ಜನರಿಗೆ ಕತ್ತಲೆ ಭಾಗ್ಯ ನೀಡುವುದು ಗ್ಯಾರಂಟಿ : ಸುನಿಲ್ ಕುಮಾರ್

ಸಿದ್ದರಾಮಯ್ಯ ಸರ್ಕಾರ, ಜನರಿಗೆ ಕತ್ತಲೆ ಭಾಗ್ಯ ನೀಡುವುದು ಗ್ಯಾರಂಟಿ : ಸುನಿಲ್ ಕುಮಾರ್

ಬೆಂಗಳೂರು : ಸಿದ್ದರಾಮಯ್ಯ ಸರ್ಕಾರ, ರಾಜ್ಯದ ಜನರಿಗೆ ಕತ್ತಲೆ ಭಾಗ್ಯ ನೀಡುವುದು ಗ್ಯಾರಂಟಿ ಎಂದು ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಉಚಿತ ಗ್ಯಾರಂಟಿ ವಿರುದ್ಧ ಟ್ವೀಟ್ ಮಾಡಿ ಕಾಲೆಳೆದಿದ್ದಾರೆ. ಉಚಿತ ಯೋಜನೆಗಳ ಜಾರಿಯ ಭರಾಟೆಯಲ್ಲಿ ಮುಳುಗಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದ ಜನರಿಗೆ ಕತ್ತಲೆ ಭಾಗ್ಯ ನೀಡುವುದು ಗ್ಯಾರಂಟಿ! ಎಂದು ಹೇಳಿದ್ದಾರೆ.

ಉಚಿತ ಉಚಿತ ಎಂಬ ನಿಮ್ಮ ಭಾಷಣದ ಭರಾಟೆ ಮೂಲಕ ಜನರನ್ನು ಮರುಳು ಮಾಡಿದ್ದೀರಿ. ಜನರಿಗೆ ಈಗ ಕತ್ತಲೆ ಖಚಿತ, ಸಾಲ ನಿಶ್ಚಿತ, ಬೆಲೆ ಏರಿಕೆ ಖಂಡಿತ ಎಂಬುದು ತಿಂಗಳು ಕಳೆಯುವಷ್ಟರಲ್ಲೇ ಅರಿವಾಗಿದೆ. ರೈತರ ಐಪಿ ಸೆಟ್ ಗಳಿಗೆ ನಿರಂತರ ಏಳು ಗಂಟೆಗಳ ಕಾಲ ಪೂರೈಕೆ ಮಾಡುತ್ತಿದ್ದ ವಿದ್ಯುತ್ ಕಡಿತಗೊಳಿಸಲಾಗಿದೆ ಎಂದು ಕುಟುಕಿದ್ದಾರೆ.

ಇದನ್ನೂ ಓದಿ : ಅಡ್ಜಸ್ಟ್ ಮೆಂಟ್ ಇಲ್ಲದಿದ್ರೆ ಪರಮೇಶ್ವರ್, ಖರ್ಗೆ ಸೋತಿದ್ದೇಕೆ? : ಜೆಡಿಎಸ್ ಪ್ರಶ್ನೆ

ಜಾಹೀರಾತು ಕೊಟ್ರೆ ಕತ್ತಲೆ ಕಳೆಯಲು ಸಾಧ್ಯವೇ?

ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅನಿಯಮಿತ ಹಾಗೂ ಅಘೋಷಿತ ಲೋಡ್ ಶೆಡ್ಡಿಂಗ್ ಪ್ರಾರಂಭವಾಗಿದೆ. ನಿರ್ವಹಣೆ ಹೆಸರಿನಲ್ಲಿ ಪವರ್ ಕಟ್ ಕಣ್ಣಾಮುಚ್ಚಾಲೆ ನಡೆಸುತ್ತಿರುವುದು ಸುಳ್ಳೇ? ಸಿದ್ದರಾಮಯ್ಯನವರೇ ವ್ಯವಸ್ಥೆಯನ್ನು ಎತ್ತ ಕೊಂಡೊಯ್ಯುತ್ತಿದ್ದೀರಿ? ನಿಮ್ಮ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಜಾಹೀರಾತು ಕೊಟ್ಟ ಮಾತ್ರಕ್ಕೆ ಕತ್ತಲೆ ಕಳೆಯಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದ್ದಾರೆ.

ನೀವು ಘೋಷಣೆ ಇಲ್ಲದೇ‌ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದೀರಿ. ಇದರಿಂದ ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಕುಂಠಿತಗೊಳ್ಳುವುದರಲ್ಲಿ ಅನುಮಾನ ಇಲ್ಲ ಎಂದು ಸುನೀಲ್ ಕುಮಾರ್ ಚಾಟಿ ಬೀಸಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ ನುಡಿದಂತೆ ನಡೆಯುತ್ತೇವೆ ಎಂದು ಪುಗಸಟ್ಟೆ ಪ್ರಚಾರ ತೆಗೆದುಕೊಂಡು ಈಗ ಕೇಂದ್ರ ಸರ್ಕಾರ ಅಕ್ಕಿ ಕೊಡುವಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಜಾರಿಕೊಳ್ಳುವ ಪ್ರಯತ್ನ ನಡೆಸುತ್ತೀರಾ? ನೀವು ಮತ ರಾಜಕಾರಣಕ್ಕಾಗಿ ಪ್ರಣಾಳಿಕೆ ಸಿದ್ದಪಡಿಸುವಾಗ‌ ಕೇಂದ್ರ ಸರ್ಕಾರದ ಜತೆ ಚರ್ಚೆ ನಡೆಸಿದ್ದಿರಾ? ಎಂದು ಪ್ರಶ್ನೆ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments