Saturday, September 13, 2025
HomeUncategorizedನೊಂದ ಮನಸ್ಸುಗಳಿಗೆ ಧೈರ್ಯ ತುಂಬೋ ಆರಕ್ಷಕಿ..!

ನೊಂದ ಮನಸ್ಸುಗಳಿಗೆ ಧೈರ್ಯ ತುಂಬೋ ಆರಕ್ಷಕಿ..!

ಎಲ್ಲಿಂದಲೋ, ಯಾವುದೋ ಕಾರಣಕ್ಕೆ ಮನೆಯಿಂದ ಓಡಿ ಬಂದ ಮಕ್ಕಳು ರೈಲಿನ ಕೊನೆಯ ಸ್ಟಾಪ್​ನಲ್ಲಿ ಇಳಿದು ತಬ್ಬಿಬ್ಬಾಗುತ್ತಾರೆ. ಎಲ್ಲಿಗೆ ಹೋಗಬೇಕು ಅನ್ನುವುದನ್ನು ಅರಿಯದೆ ಕಂಗಾಲಾಗುತ್ತಾರೆ. ಅಷ್ಟೇ ಅಲ್ಲ ನೆರವಿಗಾಗಿ ಇನ್ನೊಬ್ಬರ ಮೊರೆ ಹೋಗುತ್ತಾರೆ. ಅಂತಹ ನೂರಾರು ಮಕ್ಕಳನ್ನು ರಕ್ಷಿಸಿ, ನಂತರ ಅವರಿಗೆ ಧೈರ್ಯ ತುಂಬಿ ಮನೆಗಳಿಗೆ ವಾಪಸ್ ಕಳಿಸುತ್ತಿದ್ದಾರೆ ವ್ಯಕ್ತಿ.
ಯಸ್, ಅವರ ಹೆಸರು ರೇಖಾ ಮಿಶ್ರಾ.. ಎಂದು . ರೈಲ್ವೆ ಪೊಲೀಸ್ ಅಧಿಕಾರಿ. ಸದ್ಯ ಮುಂಬೈ ಮಹಾನಗರದ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾದವರು.
ರೇಖಾ ಮಿಶ್ರಾ ಹುಟ್ಟಿ ಬೆಳೆದಿದ್ದು, ಸೈನಿಕರ ಕುಟುಂಬದಿಂದ. ಹೀಗಾಗಿ ಮಕ್ಕಳ ರಕ್ಷಣೆ ಬಗ್ಗೆ ಹೆಚ್ಚು ಆಸಕ್ತಿ ಇತ್ತು. ಹಾಗಾಗಿ ರೈಲ್ವೆ ಪೊಲೀಸಿಗೆ ಸೇರಿದ ಮೇಲೆ ಆ ಕಾಳಜಿಯನ್ನು ಇಮ್ಮಡಿಸಿಕೊಂಡ್ರು. ರೇಖಾ ಇಲ್ಲಿ ತನಕ ರಕ್ಷಿಸಿರುವ ಮಕ್ಕಳ ಪೈಕಿ ಹೆಚ್ಚಿನವರು ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯದವರು. ಅಷ್ಟೇ ಅಲ್ಲ ಈ ಅಪ್ರಾಪ್ತ ಮಕ್ಕಳು ಹೆಚ್ಚಿನವರು 13 ರಿಂದ 16 ವರ್ಷ ವಯಸ್ಸಿನವರು.
ನೋಡಿ, ಎಲ್ಲಿಂದಲೋ, ಯಾವುದೋ ಕಾರಣಕ್ಕೆ ಓಡಿ ಬಂದ ಮಕ್ಕಳು ರೈಲಿನ ಕೊನೆಯ ಸ್ಟಾಪ್ನಲ್ಲಿ ಇಳಿದು ತಬ್ಬಿಬ್ಬಾಗುತ್ತಾರೆ. ಎಲ್ಲಿಗೆ ಹೋಗಬೇಕು ಅನ್ನುವುದನ್ನು ಅರಿಯದೆ ಕಂಗಾಲಾಗುತ್ತಾರೆ. ಅಷ್ಟೇ ಅಲ್ಲ ನೆರವಿಗಾಗಿ ಇನ್ನೊಬ್ಬರ ಮೊರೆ ಹೋಗುತ್ತಾರೆ. ಅಂಥಾ ವೇಳೆ ರಕ್ಷಿಸುವುದು ಮಾತ್ರವಲ್ಲದೆ ಅವರು ಸೂಕ್ತ ಆಶ್ರಮ ಅಥವಾ ಸ್ಥಳಗಳನ್ನು ಸೇರುವ ತನಕ ಮುಂಜಾಗೃತೆ ವಹಿಸುತ್ತಾರೆ.
ಮನೆ ಬಿಟ್ಟು ಓಡಿ ಬಂದ ಮಕ್ಕಳನ್ನನು ಮೊದಲು ಆತ್ಮವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕೆಲವರು ಕಾರಣವಿಲ್ಲದೆ ಮನೆಯಿಂದ ಓಡಿ ಬರುತ್ತಾರೆ. ಇನ್ನು ಕೆಲವರು ಲೈಂಗಿಕ ಕಿರುಕುಳಕ್ಕೆ ಒಳಗಾಗಿರುತ್ತಾರೆ. ಮತ್ತೆ ಕೆಲವರು ವಾಪಾಸ್ ಮನೆಗೆ ಹೋಗುವ ಆಸಕ್ತಿಯನ್ನೇ ಕಳೆದುಕೊಂಡಿರುತ್ತಾರೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ ಎನ್ನುತ್ತಾರೆ ಅವರು.
ಅಂದಹಾಗೇ, ರೇಖಾ ರಕ್ಷಿಸಿರುವ 434 ಮಕ್ಕಳ ಪೈಕಿ ಕೇವಲ 28 ಮಕ್ಕಳ ಪೋಷಕರನ್ನು ಮಾತ್ರ ಪತ್ತೆ ಹಚ್ಚಲು ಸಾಧ್ಯವಾಗಿದೆ. ಉಳಿದ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೇರಿಸಲಾಗಿದೆ. ರೇಖಾ ಮಕ್ಕಳನ್ನು ರಕ್ಷಿಸುವ ತಂಡದ ಜೊತೆ ಕೆಲಸ ಮಾಡುತ್ತಿದ್ದರೂ ಇದು ಒಂದು ರೀತಿಯಲ್ಲಿ ಕೌಶಲ್ಯ ಇರಬೇಕಾದ ಕೆಲಸವಾಗಿದೆ.
ರಕ್ಷಣೆಯ ವೇಳೆ ಸಿಕ್ಕಿದ ಮಕ್ಕಳನ್ನು ಮೊದಲಿಗೆ ಮೆಡಿಕಲ್ ಟೆಸ್ಟ್ ಮಾಡಿಸಲಾಗುತ್ತದೆ. ಇದಾದ ಮೇಲೆ ಸ್ಟೇಷನ್ ಮ್ಯಾನೇಜರ್ ಕಚೇರಿಯಲ್ಲಿ ಡಾಕ್ಯುಮೆಂಟ್​​ಗಳನ್ನು ಫಿಲ್ ಮಾಡಲಾಗುತ್ತದೆ. ಮಕ್ಕಳ ಪೋಷಕರ ಪತ್ತೆಗೆ ಕಠಿಣ ಶ್ರಮವಹಿಸಲಾಗುತ್ತದೆ. ಪೋಷಕರು ಸಿಗದೇ ಇದ್ದಾಗ ಅನಾಥಶ್ರಮಕ್ಕೆ ಕಳುಹಿಸಿಕೊಡಲಾಗುತ್ತದೆ.. ಈ ಕೆಲಸವನ್ನು ರೇಖಾ ಮಿಶ್ರಾ ಅವರೇ ಮಾಡಿಕೊಂಡು ಬರುತ್ತಿದ್ದಾರೆ.
ವರ್ಷಕ್ಕೆ ರೇಖಾ ಮಿಶ್ರಾ ಅವರು ಸುಮಾರು 100ಕ್ಕೂ ಅಧಿಕ ಮಕ್ಕಳ ರಕ್ಷಣೆ ಮಾಡುತ್ತಾರೆ. ಅದರಲ್ಲೂ ರಜಾ ದಿನಗಳು ಹೆಚ್ಚಿದ್ದರೆ ಅದರ ಸಂಖ್ಯೆ ಹೆಚ್ಚಾಗುತ್ತದೆ. ಮಕ್ಕಳನ್ನು ಸುರಕ್ಷಿತ ತಾಣಗಳಿಗೆ ತಲುಪಿಸುವ ತನಕ ರೇಖಾ ಸ್ಟೇಷನ್ನಲ್ಲೇ ಕಾಲ ಕಳೆಯುತ್ತಾರೆ ಅನ್ನುವುದು ಅವರ ಬದ್ಧತೆಗೆ ಹಿಡಿದ ಕೈಗನ್ನಡಿ.
ಅಥ್ಲೀಟ್ ಕೂಡ ಆಗಿದ್ದ ರೇಖಾ ರೈಲ್ವೆ ಪೊಲೀಸ್ ಇಲಾಖೆಯ ರಾಜ್ಯ ಮಟ್ಟದ ಕೂಟಗಳಲ್ಲಿ ಭಾಗವಹಿಸಿದ್ದರು. ಇಲಾಖೆಯ ಹಿರಿಯ ಅಧಿಕಾರಿಗಳಿಂದಲೂ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರ ಸಾಧನೆಗೆ ರಾಷ್ಟ್ರಪತಿಗಳಿಂದಲೂ ಪುರಸ್ಕಾರ ಲಭಿಸಿದೆ.
ಒಟ್ಟಿನಲ್ಲಿ ನೊಂದ ಮುಗ್ಧ ಮನಸುಗಳಿಗೆ ಆತ್ಮವಿಶ್ವಾಸ ತುಂಬುತ್ತಿರುವ ರೈಲ್ವೆ ಪೊಲೀಸ್ ಅಧಿಕಾರಿ ರೇಖಾ ಮಿಶ್ರಾ, ಅವರ ಸಾಧನೆ ಎಲ್ಲರಿಗೂ ಸ್ಪೂರ್ತಿದಾಯಕ ಅನ್ನುವುದರಲ್ಲಿ ಎರಡು ಮಾತಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments