Wednesday, August 27, 2025
HomeUncategorizedಆದಾಯ ಇಲ್ಲದೇ ಗ್ಯಾರೆಂಟಿ ಜಾರಿ, ರಾಜ್ಯದ ದಿವಾಳಿಗೆ ದಾರಿ:ಬಸವರಾಜ ಬೊಮ್ಮಾಯಿ

ಆದಾಯ ಇಲ್ಲದೇ ಗ್ಯಾರೆಂಟಿ ಜಾರಿ, ರಾಜ್ಯದ ದಿವಾಳಿಗೆ ದಾರಿ:ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15 ಬಾರಿ ಬಜೆಟ್ ಮಂಡನೆ ಮಾಡಿ, ರಾಜ್ಯದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡದೇ ಗ್ಯಾರೆಂಟಿ ಹೆಸರಿನಲ್ಲಿ ಕೇವಲ ಕಲ್ಯಾಣ ಕಾರ್ಯಗಳಿಗೆ ಹಣ ಖರ್ಚು ಮಾಡುತ್ತಿರುವುದು ಕಾಯಕವಿಲ್ಲದೇ ದಾಸೋಹ ಮಾಡುವುದರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿಗಳು 15ನೇ ಬಾರಿ ಬಜೆಟ್ ಮಂಡನೆ ಮಾಡಿ ಅದನ್ನು ಹೇಗೆ ನಿರ್ವಹಣೆ ಮಾಡುತ್ತಾರೆ ಎನ್ನುವುದು ನಮಗೆ ಕುತೂಹಲ ಇದೆ. ಕಾಯಕ ಮತ್ತು ದಾಸೋಹದ ಬಗ್ಗೆ ಮಾತನಾಡಿದ್ದಾರೆ. ಇದು ನಮ್ಮ ನಾಡಿನ ಸಂಸ್ಕೃತಿ. ಕಾಯಕ ಇದ್ದರೆ ಮಾತ್ರ ದಾಸೋಹ. ಕೇವಲ ದಾಸೋಹ ಮಾಡಿಕೊಂಡು ಹೋದರೆ ಉಪಯೋಗವಿಲ್ಲ. ಕಾಯಕಕ್ಕೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸಬೇಕು. ಕಾಯಕದಿಂದ ಬಂದ ಆದಾಯದಿಂದ ದಾಸೋಹ ಮಾಡಿದ್ದರೆ ತಪ್ಪಿಲ್ಲ. ಇವರ ಬಜೆಟ್ಟನ್ನು ನೋಡಿದಾಗ ಕಾಯಕ ಎಷ್ಟು ಆಗಬೇಕೊ ಅಷ್ಟು ಆಗುತ್ತಿಲ್ಲ. ಉತ್ಪಾದನೆ ಮತ್ತು ಹಂಚಿಕೆಯನ್ನು ಸರಿಯಾಗಿ ತೆಗೆದುಕೊಂಡು ಹೋಗದಿದ್ದರೆ, ಕಾಯಕ ಮತ್ತು ದಾಸೋಹಕ್ಕೆ ಮಹತ್ವ ಇಲ್ಲ ಎಂದು ಹೇಳಿದರು.

ಹಿಂದಿನ ಸರ್ಕಾರ ಆಹಾರ ಭದ್ರತೆಗೆ ಒತ್ತು ನೀಡಿತ್ತು ಎಂದು ಹೇಳಿದ್ದಾರೆ. ಇಂದಿನ ಎನ್‌ಡಿಎ ಸರ್ಕಾರ ಕೂಡ ಆಹಾರ ಭದ್ರತೆಗೆ ಆದ್ಯತೆ ನೀಡಿದೆ. ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಜನರಿಗೆ ಅಕ್ಕಿ ಸಿಗುತ್ತಿದ್ದರೆ ಅದನ್ನು ಸಂಪೂರ್ಣ ಕೇಂದ್ರ ಸರ್ಕಾರ ನೀಡುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಪವರ್ ಟಿವಿ ಬಿಗ್ ಇಂಪ್ಯಾಕ್ಟ್ : ರೈತನ ಬಳಿ ಲಂಚಕ್ಕೆ ‘ಕೈ’ ಚಾಚಿದ ASI ಸಸ್ಪೆಂಡ್

ಅಭಿವೃದ್ಧಿಗೆ ಹಣವಿಲ್ಲ:
ಸಿದ್ದರಾಮಯ್ಯ 1 ಮತ್ತು ಸಿದ್ದರಾಮಯ್ಯ 2 ನಡುವೆ ಬಹಳ ವ್ಯತ್ಯಾಸವಿದೆ. 1994 ನಲ್ಲಿ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದರು. ಆಗ ಕೊರತೆ ಬಜೆಟ್ ಇತ್ತು. ಆಗ ಅವರು ಪ್ಲಾನ್ ಸೈಝ್ ಕಡಿಮೆ ಮಾಡಿ ಬಜೆಟ್ ಮಂಡನೆ ಮಾಡಿ, ಆರ್ಥಿಕ ಶಿಸ್ತು ತಂದರು. ಆದರೆ, ಸಿದ್ದರಾಮಯ್ಯ 2 ಬಡವರ ಕಾರ್ಯಕ್ರಮ ಮಾಡಲು ಆದಾಯವನ್ನು ಕೂಡಿಸಿಕೊಂಡು ಬಂಡವಾಳ ವೆಚ್ಚಕ್ಕೆ ತೊಂದರೆಯಾಗದಂತೆ ಗ್ಯಾರೆಂಟಿಗಳನ್ನು ಜಾರಿ ಮಾಡಿದ್ದರೆ ತೊಂದರೆ ಇರುತ್ತಿರಲಿಲ್ಲ. ಇವರ ಬಜೆಟ್ ಪ್ರಕಾರ 103 ಕಮಿಟೆಡ್ ಎಕ್ಸಪೆಂಡೇಚರ್ ಆಗಿದೆ.

ಅಭಿವೃದ್ಧಿಗೆ ಬಂಡವಾಳ ಎಲ್ಲಿದೆ. ಆದಾಯದ 61% ಕಮಿಟೆಡ್ ವೆಚ್ಚವಾಗಲಿದೆ. ಸಾಲ ತೆಗೆದುಕೊಂಡು ಸಾಲ ತೀರಿಸಲು ಹೆಚ್ಚು ಹಣ ಹೋಗುವುದರಿಂದ ಕೇವಲ 55 ಸಾವಿರ ಕೋಟಿ ಅಭಿವೃದ್ಧಿಗೆ ಮೀಸಲಿಟ್ಟಿದ್ದಿರಿ. ಕಳೆದ ಬಾರಿ ಮುದ್ರಾಂಕ, ಮೋಟಾರ ವಾಹನ, ಅಬಕಾರಿ ತೆರಿಗೆ ಹೆಚ್ಚಳ ಮಾಡಿದ್ದೀರಿ. 8 ಸಾವಿರ ಕೋಟಿ ಹೆಚ್ಚುವರಿ ಸಾಲ ಪಡೆದು, 13500 ಕೋಟಿ ಆದಾಯ ಹೆಚ್ಚಳ ಮಾಡಿಕೊಂಡರೂ ಅಭಿವೃದ್ಧಿಗೆ ಹಣ ಇಲ್ಲ. ಈ ವರ್ಷ 1.5 ಲಕ್ಷ ಕೋಟಿ ಸಾಲ ಮಾಡಿದ್ದೀರಿ. ಆದರೆ, ಅದರಲ್ಲಿ ಬಂಡವಾಳ ವೆಚ್ಚಕ್ಕೆ ಕೇವಲ 1 ಸಾವಿರ ಕೋಟಿ ಹೋಗುತ್ತದೆ. ಇದರಿಂದ ಅಭಿವೃದ್ಧಿಗೆ ಅನುಕೂಲವಾಗುವುದಿಲ್ಲ ಎಂದು ವಿವರಿಸಿದರು.

ಈಗಾಗಲೇ 7ನೇ ವೇತನ ಆಯೋಗ ರಚನೆಯಾಗಿದೆ. ಅದು ಜಾರಿಯಾದರೆ ಇನ್ನೂ 20 ಸಾವಿರ ಕೋಟಿ ರೂ. ಬೇಕಾಗುತ್ತದೆ. ಬಜೆಟ್‌ನಲ್ಲಿ ಅದಕ್ಕೆ ಹಣ ಇಟ್ಟಿಲ್ಲ. ಇದೇ ರೀತಿ ಗ್ಯಾರೆಂಟಿಗಳಿಗೆ ಹಣ ನೀಡುತ್ತ ಹೋದರೆ ಅಭಿವೃದ್ಧಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.

ಕಳೆದ ವರ್ಷ ಇವರು 1.75 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹ ಮಾಡುವುದಾಗಿ ಹೇಳಿದ್ದರು. ಆದರೆ, ಇವರು 1.61 ಲಕ್ಷ ಕೋಟಿ ರೂ. ಮಾತ್ರ ತೆರಿಗೆ ಸಂಗ್ರಹ ಮಾಡಿದ್ದಾರೆ. 14 ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹ ಕೊರತೆಯಾಗಿದೆ. ನಮ್ಮ ಅವಧಿಯಲ್ಲಿ 1.64 ಲಕ್ಷ ಕೋಟಿ ಗುರಿ ಇಟ್ಟುಕೊಂಡಿದ್ದೇವು. ಅದನ್ನೇ ಸಂಗ್ರಹ ಮಾಡಲು ಇವರಿಗೆ ಆಗಿಲ್ಲ. ಮುಂದಿನ ವರ್ಷ 1.89 ಲಕ್ಷ ಕೋಟಿ ಎಂದು ಅಂದಾಜು ಮಾಡಿದ್ದಾರೆ. ಆದಾಯ ಸಂಗ್ರಹವೇ ಇಲ್ಲ. ಈ ರೀತಿ ಆರ್ಥಿಕ ಪರಿಸ್ಥಿತಿ ನಿರ್ವಹಣೆ ಮಾಡಿದರೆ, ಹೇಗೆ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಸಮಾಜಿಕ ಸೇವಾ ವಲಯದಲ್ಲಿ 96 ಸಾವಿರ ಕೋಟಿ ಖರ್ಚು ಮಾಡುವುದಾಗಿ ಹೇಳಿದ್ದೀರಿ ಅದರಲ್ಲಿ 94 ಸಾವಿರ ಕೋಟಿ ಖರ್ಚು ಮಾಡಿದ್ದೀರಿ, ಆರ್ಥಿಕ ವೆಚ್ಚದ ವಲಯದಲ್ಲಿ 67 ಸಾವಿರ ಕೋಟಿ ವೆಚ್ಚದ ಬದಲು 63 ಸಾವಿರ ಕೋಟಿ ಮಾತ್ರ ವೆಚ್ಚ ಮಾಡಿದ್ದೀರಿ. 1.5 ಲಕ್ಷ ಕೋಟಿ ರೂ. ಸಾಲ ಮಾಡಿರುವುದು ದಾಖಲೆ. 96 ಸಾವಿರ ಕೋಟಿ ಮಾರುಕಟ್ಟೆಯಿಂದ ಹೆಚ್ಚು ಬಡ್ಡಿ ನೀಡಿ ತರಲಾಗುತ್ತಿದೆ. ಸಾಲ ತಂದು ಬಂಡವಾಳ ವೆಚ್ಚ ಮಾಡಿದರೆ ಅಭಿವೃದ್ಧಿಯಾಗುತ್ತದೆ. ಅದರ ಬದಲು ಕಂದಾಯ ವೆಚ್ಚ ಮಾಡಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ರಾಜ್ಯದ ಹಣಕಾಸು ಅಧೋಗತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments