Saturday, August 23, 2025
Google search engine
HomeUncategorized'ಜೈಲರ್​'ಗೆ ಜೈ ಎಂದ ಕನ್ನಡಿಗರಿಗೆ ‘ಡಿ ಬಾಸ್’ ಮಾತಿನ ಏಟು : ನಿಜ ಹೇಳಿದ್ರೆ ಉರಿ...

‘ಜೈಲರ್​’ಗೆ ಜೈ ಎಂದ ಕನ್ನಡಿಗರಿಗೆ ‘ಡಿ ಬಾಸ್’ ಮಾತಿನ ಏಟು : ನಿಜ ಹೇಳಿದ್ರೆ ಉರಿ ಯಾಕೆ?

ಬೆಂಗಳೂರು : ರಾಜ್ಯದಾದ್ಯಂತ ಕಾವೇರಿ ವಿವಾದ ಭುಗಿಲೆದ್ದಿದೆ. ಕನ್ನಡ ಚಿತ್ರರಂಗ ಕೂಡ ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಆಗ್ತಿರೋ ಅನ್ಯಾಯದ ವಿರುದ್ದ ಒಕ್ಕೊರಲ ಧ್ವನಿ ಎತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಡ್ಯದಲ್ಲಿ ಈ ವಿಚಾರದ ಬಗ್ಗೆ ಎಲ್ಲರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಜೈಲರ್ ಬಗ್ಗೆ ಸೂಪರ್​ ಸ್ಟಾರ್ ರಜನಿ ಬಗ್ಗೆಯೂ ಮಾತನಾಡಿದ್ದಾರೆ. ಅಷ್ಟಕ್ಕೂ ಕಾವೇರಿ ವಿವಾದ ಕಾವೇರಿರುವ ಹೊತ್ತಲ್ಲಿ ದರ್ಶನ್ ಚಾಲೆಂಜ್ ಹಾಕಿದ್ದು ಯಾರಿಗೆ?

ಕಳೆದ ವಾರ ಫಿಲಂ ಚೇಂಬರ್ ಎದುರು ಪ್ರತಿಭಟನೆ ಮಾಡಿದ್ದ ಕೆಲ ಕನ್ನಡ ಸಂಘಟನೆ ಮುಖಂಡರು ಸ್ಯಾಂಡಲ್​ವುಡ್​ ತಾರೆಯರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ನಟರ ಫೋಟೋಗಳಿಗೆ ಮಸಿ ಬಳಿದು ಕನ್ನಡ ಸಿನಿಮಾ ನಟರು ಕಾವೇರಿ ವಿಚಾರದಲ್ಲಿ ಬಾಯಿ ಮುಚ್ಚಿಕೊಂಡಿರೋದೇಕೆ? ಅಂತ ಪ್ರಶ್ನೆ ಮಾಡಿದ್ದರು. ಈ ಮಧ್ಯೆ ನಟ ದರ್ಶನ್, ಸುದೀಪ್, ಉಪೇಂದ್ರ, ಶಿವಣ್ಣ ಕಾವೇರಿ ಬಗ್ಗೆ ಪ್ರತಿಕ್ರಿಯೆ ನೀಡಿ ತಾವು ರೈತರ ಹೋರಾಟ ಬೆಂಬಲಿಸ್ತಿವಿ ಅನ್ನೋ ಸಂದೇಶ ನೀಡಿದ್ರು.

ಹಿಂದಿನಂತೆಯೇ ಕನ್ನಡ ಚಿತ್ರರಂಗ ಕನ್ನಡ ನೆಲ-ಜಲ ಪರ ಹೋರಾಟದಲ್ಲಿ ಪಾಲ್ಗೊಳ್ಳಲಿದೆ. ಆದರೆ, ಈ ರೀತಿ ಪ್ರತಿ ಬಾರಿ ವಿವಾದ ಎದ್ದ ಹೊತ್ತಲ್ಲಿ ಕನ್ನಡ ನಟರನ್ನು ಯಾಕೆ ಎಳೆತರ್ತೀರಿ ಅಂತ ಬಹಿರಂಗ ಪ್ರಶ್ನೆ ಎತ್ತಿದ್ದಾರೆ ದರ್ಶನ್. ಮಂಡ್ಯದ ಬನ್ನೂರಿನಲ್ಲಿ ನಡೆದ ಸಮಾರಂಭದಲ್ಲಿ ಭಾಗಿಯಾಗಿದ್ದ ದರ್ಶನ್, ಮೊದಲು ಮಾತನಾಡಿದ್ದೇ ಈ ಕಾಂಟ್ರವರ್ಸಿ ಬಗ್ಗೆ.

ನೀವ್ಯಾಕೆ ಕನ್ನಡ ಸಿನಿಮಾ ಬೆಂಬಲಿಸಲ್ಲ?

ಜೈಲರ್ ಸಿನಿಮಾದ ಹೆಸರು ಹೇಳದೇ ಒಂದು ತಮಿಳು ಸಿನಿಮಾ ಅಂತ ಮಾತು ಆರಂಭಿಸಿದ ದರ್ಶನ್, ಆ ಸಿನಿಮಾವನ್ನು 6 ಕೋಟಿಗೆ ವಿತರಣೆಗೆ ಪಡೆದುಕೊಂಡ ವ್ಯಕ್ತಿ 36 ಕೋಟಿ ಸಂಪಾದಿಸಿದ್ರು. ನೀವು ಅವರನ್ಯಾಕೆ ಪ್ರಶ್ನಿಸೋದಿಲ್ಲ? ಆ ಸಿನಿಮಾ ಗೆಲ್ಲಿಸಿದ್ದು ನೀವೇ ತಾನೇ? ನೀವ್ಯಾಕೆ ಆ ರೀತಿ ಕನ್ನಡ ಸಿನಿಮಾ ಬೆಂಬಲಿಸೋದಿಲ್ಲ? ಅಂತ ಜನರನ್ನು ಪ್ರಶ್ನಿಸಿದ್ರು.

ರಜನಿ ಈಗ ಕನ್ನಡಿಗರ ಪರ ನಿಲ್ತಾರಾ?

ದರ್ಶನ್ ಹೇಳಿದಂತೆ ಜೈಲರ್ ಸಿನಿಮಾ ಕರ್ನಾಟಕದಲ್ಲೇ 35 ಕೋಟಿಗೂ ಅಧಿಕ ಸಂಪಾದನೆ ಮಾಡಿತು. ರಜನಿಕಾಂತ್ ನಟನೆಯ ಆ ಸಿನಿಮಾವನ್ನು ಕನ್ನಡ ಪ್ರೇಕ್ಷಕರು ಕೂಡ ಮುಗಿಬಿದ್ದು ನೋಡಿ ಹಿಟ್ ಮಾಡಿದ್ರು. ಆದರೆ, ದುರಂತ ಅಂದ್ರೆ ಕನ್ನಡದಲ್ಲಿ ಈ ವರ್ಷ ಒಂದು ಸಿನಿಮಾನೂ ಇಷ್ಟು ದೊಡ್ಡ ಗಳಿಕೆ ಮಾಡಿಲ್ಲ. ನೀವು ತಮಿಳು ಸಿನಿಮಾ ಗೆಲ್ಲಿಸ್ತಿರಿ.. ತಮಿಳು ನಟರನ್ನು ಬೆಂಬಲಿಸ್ತೀರಿ.. ಕಾವೇರಿ ವಿವಾದದ ಹೊತ್ತಲ್ಲಿ ಕನ್ನಡ ನಟರನ್ಯಾಕೆ ಪ್ರಶ್ನೆ ಮಾಡ್ತಿರಿ ಅನ್ನುವಂತಿತ್ತು ದರ್ಶನ್ ಮಾತಿನ ಧಾಟಿ. ಅದರಲ್ಲೂ ನೀವು ಇಷ್ಟ ಪಟ್ಟ ಸೂಪರ್​ ಸ್ಟಾರ್ ರಜನಿ ಈಗ ತಮಿಳರ ಪರ ನಿಲ್ತಾರಾ? ಇಲ್ಲಾ ನಮ್ಮ ಪರಾನಾ? ಅಂತ ಪ್ರಶ್ನಿಸೋ ಹಾಗಿತ್ತು ಅವರ ಮಾತು.

ದರ್ಶನ್ ಹೇಳಿದ್ರಲ್ಲಿ ತಪ್ಪೇನು ಇಲ್ಲ

ಇನ್ನೂ ಕನ್ನಡ ನಟರ ಹೆಸರು ಹೇಳೋ ಹೊತ್ತಲ್ಲಿ ದರ್ಶನ್, ಸುದೀಪ್ ಹೆಸರು ಹೇಳ್ತಾ ಇದ್ದ ಹಾಗೆ ಅಭಿಮಾನಿಗಳ ಕೇಕೆ ಹೆಚ್ಚಾಯ್ತು. ನಾವು ಯಾವತ್ತಿದ್ರೂ ಕನ್ನಡ ಪರ ಇದ್ದೇ ಇರ್ತೀವಿ. ಆದರೂ ಯಾಕೆ ವಿನಾಕಾರಣ ನಮ್ಮನ್ನು ಟೀಕೆ ಮಾಡ್ತೀರಿ ಅಂತ ದರ್ಶನ್, ಇಡೀ ಚಿತ್ರರಂಗದ ನಟರ ಪರ ನಿಂತರು.

ದರ್ಶನ್ ಏನೇ ವಿಚಾರ ಇದ್ರೂ ನೇರಾನೇರ ಮಾತನಾಡುವ ವ್ಯಕ್ತಿ. ಅವರು ಈ ವಿಚಾರದಲ್ಲಿ ಮಾತನಾಡಿರೋ ರೀತಿಗೆ ಕೆಲ ಕನ್ನಡ ಪರ ಸಂಘಟನೆಗಳಿಂದ ವಿರೋಧವೂ ವ್ಯಕ್ತವಾಗಿದೆ. ಆದರೆ, ದರ್ಶನ್ ಹೇಳಿದ್ರಲ್ಲಿ ತಪ್ಪೇನು ಇಲ್ಲ. ನಾಡು-ನುಡಿ-ನೆಲ-ಜಲ ಪರ ನಿಲ್ಲೋದು ಜಸ್ಟ್ ನಟರ ಕೆಲಸವಷ್ಟೇ ಅಲ್ಲ ಎಲ್ಲರಿಗೂ ಆ ಬದ್ಧತೆ ಇರಬೇಕು ಅನ್ನೋ ಮಾತನ್ನು ದರ್ಶನ್ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments