ಬೆಂಗಳೂರು : ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಮೋದಿ ಗ್ಯಾರಂಟಿಯಾಗಿದೆ. ಮೋದಿ ಗ್ಯಾರಂಟಿ ಎಂದೂ ಸುಳ್ಳಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.
ಭಾರತ್ ಮಂಡಪಂನಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 2 ಲಕ್ಷ 60 ಸಾವಿರ ಕೋಟಿ ಮೊತ್ತವನ್ನು ರೈತರ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದಿದ್ದಾರೆ.
ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ದಾರಿಗೆ ಕೆಲವು ವ್ಯಕ್ತಿಗಳು ಅಡ್ಡಗಾಲು ಹಾಕಲು ಯತ್ನಿಸುತ್ತಿದ್ದಾರೆ. ದೇಶದ ಜನತೆ ಭ್ರಷ್ಟಾಚಾರ ಹಾಗೂ ತುಷ್ಟೀಕರಗಳಂತಹ ಅನಿಷ್ಟಗಳನ್ನು ದೇಶ ತೊರೆಯುವಂತೆ ಆಗ್ರಹಿಸುತ್ತಿದ್ದಾರೆ ಎಂದು ವಿಪಕ್ಷಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಜವಳಿ ಕಂಪನಿಗಳಿಗೆ ದೊಡ್ಡ ಅವಕಾಶ
ಸ್ವದೇಶಿ ವಿಷಯದಲ್ಲಿ ದೇಶದಲ್ಲಿ ಹೊಸ ಕ್ರಾಂತಿ ಉಂಟಾಗಿದೆ. ಮುಂಬರುವ ಹಬ್ಬಗಳ ಸಾಲಿನಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡಿ ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ. ದೇಶವು ‘ನವ-ಮಧ್ಯಮ ವರ್ಗ’ದ ಏರಿಕೆಗೆ ಸಾಕ್ಷಿಯಾಗಿದೆ. ಇದು ಜವಳಿ ಕಂಪನಿಗಳಿಗೆ ದೊಡ್ಡ ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ವಿಪಕ್ಷಗಳ ಮೈತ್ರಿಕೂಟ ‘I.N.D.I.A’, ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ ಅವರು ದೇಶ ಈಗ, ಭ್ರಷ್ಟಾಚಾರ, ಕುಟುಂಬ ರಾಜಕಾರಣ, ತುಷ್ಟೀಕರಣದಂತಹ ಕೆಟ್ಟ ಉದಾಹರಣೆಗಳನ್ನು ಬಿಡುವಂತೆ ಹೇಳುತ್ತಿದೆ ಎಂದು ತಿಳಿಸಿದ್ದಾರೆ.


