Wednesday, September 10, 2025
HomeUncategorizedಪ್ರವಾಸಿಗರ ಸಂಖ್ಯೆ ಹೆಚ್ಚಳಕ್ಕೆ ಕ್ರಮ: ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

ಪ್ರವಾಸಿಗರ ಸಂಖ್ಯೆ ಹೆಚ್ಚಳಕ್ಕೆ ಕ್ರಮ: ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಬೇಕು. ಈ ದೃಷ್ಟಿಯಿಂದ ಪರಿಣಾಮಕಾರಿ ಪ್ರಚಾರ ಕಾರ್ಯ ಹಾಗೂ ಪ್ರವಾಸಿ ತಾಣಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇಂದು ಪ್ರವಾಸೋದ್ಯಮ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ರಾಜ್ಯದ ಆರ್ಥಿಕ ಪ್ರಗತಿಗೆ ಹಾಗೂ ಸಾಂಸ್ಕೃತಿಕವಾಗಿಯೂ ಪ್ರವಾಸೋದ್ಯಮ ಮಹತ್ವದ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ತಿಳಿಸಿದರು.

ಆಯವ್ಯಯದಲ್ಲಿ ಘೋಷಿಸಿದಂತೆ ಮೈಸೂರು- ಬೇಲೂರು-ಹಳೇಬೀಡು ಹಾಗೂ ಹಂಪಿ- ಬದಾಮಿ- ಐಹೊಳೆ-ಪಟ್ಟದಕಲ್ಲು ಪ್ರವಾಸೋದ್ಯಮ ಸರ್ಕ್ಯುಟ್ಗಳನ್ನು ಶೀಘ್ರವೇ ಅಭಿವೃದ್ಧಿ ಪಡಿಸಿ, ದಸರಾ ವೇಳೆಗೆ ಮೈಸೂರು ಸರ್ಕ್ಯುಟ್ ಹಾಗೂ ದೀಪಾವಳಿ ವೇಳೆಗೆ ಹಂಪಿ ಸರ್ಕ್ಯುಟ್ ಉದ್ಘಾಟನೆಗೆ ಸಿದ್ಧವಾಗಬೇಕೆಂದು ಸೂಚಿಸಿದರು.

ಬದಾಮಿಯ ಗುಹೆಗಳನ್ನು ಇನ್ನಷ್ಟು ಆಕರ್ಷಕವಾಗಿಸುವ ಕುರಿತು ಹಾಗೂ ಅಲ್ಲಿ ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯೊಂದಿಗೆ ಸಭೆ ನಡೆಸಿ ಚರ್ಚಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಪರ್ವತಮಾಲಾ ಮತ್ತು ರಾಜ್ಯ ಸರ್ಕಾರದ ಯೋಜನೆಗಳಡಿ ನಂದಿಬೆಟ್ಟ, ಯಾಣ, ಅಂಜನಾದ್ರಿ ಬೆಟ್ಟ, ಮುಳ್ಳಯ್ಯನಗಿರಿ ದತ್ತಪೀಠ ಬೆಟ್ಟದಲ್ಲಿ ರೋಪ್ವೇ ನಿರ್ಮಿಸುವ ಕುರಿತು ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿ, ತ್ವರಿತವಾಗಿ ಭೂಸ್ವಾಧೀನ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದರು.

ಕಡಲ ತೀರದಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮ ಉತ್ತೇಜಿಸಲು ಸಿ.ಆರ್.ಝಡ್ ಮಾನದಂಡಗಳನ್ನು ಸಡಿಲಗೊಳಿಸಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಅನುಮೋದನೆ ಪಡೆಯಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಲಿದೆ.

ಬೀದರ್ ಹಾಗೂ ಕಲಬುರಗಿ ಕೋಟೆಗಳ ಪುನರುಜ್ಜೀವನಕ್ಕೆ ಕ್ರಮ ವಹಿಸಲಾಗುತ್ತಿದ್ದು, ಇದರೊಂದಿಗೆ ಸುರಪುರ ಕೋಟೆಯನ್ನೂ ಸೇರ್ಪಡೆಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಯಾಗಿರುವ 400 ಪ್ರವಾಸಿ ಮಾರ್ದರ್ಶಿಗಳಿಗೆ ಮಾಸಿಕ 2000 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಅವರಿಗೆ ಹಂಪಿ ವಿಶ್ವವಿದ್ಯಾಲಯದಲ್ಲಿ ಸಂವಹನ ಕೌಶಲ್ಯ ತರಬೇತಿ ನೀಡಲು ಸಿದ್ಧತೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ರಾಜ್ಯದಲ್ಲಿ ಕಾಳಿ ನದಿ, ಆಲಮಟ್ಟಿ ಹಾಗೂ ಕಾವೇರಿ ನದಿ ಪ್ರದೇಶಗಳಲ್ಲಿ ಜಲಮಾರ್ಗಗಳನ್ನು ರೂಪಿಸಿ, ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಹಾಗೂ ರಾಜ್ಯದ 10-12 ಕೆರೆಗಳ ಬಳಿ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ, ಚಾರಣಕ್ಕೆ ಉತ್ತೇಜನ ಮೊದಲಾದ ಕ್ರಮ ಕೈಗೊಳ್ಳುವ ಮೂಲಕ ವಿದೇಶಿ ಪ್ರವಾಸಿಗರಷ್ಟೇ ಅಲ್ಲ, ಸ್ಥಳೀಯ ಪ್ರವಾಸಿಗರನ್ನೂ ಆಕರ್ಷಿಸಬೇಕೆಂದು ತಿಳಿಸಿದರು.

 

RELATED ARTICLES
- Advertisment -
Google search engine

Most Popular

Recent Comments