Tuesday, August 26, 2025
Google search engine
HomeUncategorizedಪ್ರವೀಣ್ ಹತ್ಯೆ ಪ್ರಕರಣ: ಪುತ್ತೂರು ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ

ಪ್ರವೀಣ್ ಹತ್ಯೆ ಪ್ರಕರಣ: ಪುತ್ತೂರು ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ

ದಕ್ಷಿಣ ಕನ್ನಡ: BJP ಯುವ ಮುಖಂಡ ಪ್ರವೀಣ್ ಹತ್ಯೆಯಿಂದ ಕರಾವಳಿ ಕೊತ ಕೊತ ಕುದಿಯುತ್ತಿದೆ. ಪ್ರವೀಣ್​​ ಹತ್ಯೆಯಿಂದ ಬೆಳ್ಳಾರೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪುತ್ತೂರು ಉಪವಿಭಾಗದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

ಪ್ರವೀಣ್​​​ ಹತ್ಯೆ ಖಂಡಿಸಿ ಪುತ್ತೂರು ತಾಲೂಕಿನ ಬೋಳುವಾರು ಬಳಿ ಕಲ್ಲು ತೂರಾಟ ನಡೆಸಲಾಗಿದೆ. ಬಸ್​ನ ಗಾಜು ಪುಡಿಯಾಗಿದೆ. ಪ್ರವೀಣ್‌ ಅಂತ್ಯ ಸಂಸ್ಕಾರದ ವೇಳೆ ರೊಚ್ಚಿಗೆದ್ದ ಜನ, ಬಿಜೆಪಿ ನಾಯಕರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಕಾರ್ಯಕರ್ತರು ಸತ್ತಾಗ ಬರ್ತೀರಾ ಎಂದು ಕಿಡಿಕಾರಿದಲ್ಲದೆ, ಬೆಳ್ಳಾರೆ ಗ್ರಾಮದಲ್ಲಿ ಕಲ್ಲು ತೂರಾಟ ನಡೆಸಿದರು. ಸಿಕ್ಕ ಸಿಕ್ಕ ವಾಹನಗಳ ಮೇಲೆ ಅಟ್ಯಾಕ್ ಮಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷರ ಕಾರು ಉರುಳಿಸಲು ಯತ್ನಿಸಿದರು. ಕಲ್ಲಡ್ಕ ಪ್ರಭಾಕರ್ ಭಟ್ ಕಾರಿಗೆ ಮುತ್ತಿಗೆ ಹಾಕಿ ಘೇರಾವ್ ಹಾಕಿದರು. ಈ ವೇಳೆ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರಿಂದ ಲಾಠಿ ಚಾರ್ಜ್‌ ಮಾಡಲಾಯಿತು.

ಇನ್ನು ಪ್ರವೀಣ್‌ ಅಂತಿಮ ಯಾತ್ರೆ ವೇಳೆ ಜನರ ರೋಷಾಗ್ನಿಗೆ ಬಿಜೆಪಿ ನಾಯಕರು ತಬ್ಬಿಬ್ಬಾದರು. ಕಲ್ಲು ತೂರಾಟ, ಲಾಠಿ ಚಾರ್ಜ್ ವೇಳೆ ಬಿಜೆಪಿ ಕಾರ್ಯಕರ್ತನ ತಲೆಗೆ ಪೆಟ್ಟಾಗಿದೆ. ರಕ್ತಸ್ರಾವಕ್ಕೊಳಗಾದ ವ್ಯಕ್ತಿಯನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದರು.

ಪ್ರವೀಣ್ ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ BJP ಕಾರ್ಯಕರ್ತರು ಆಗ್ರಹಿಸಿದ್ದಾರೆ. ಈ ಬೆನ್ನಲ್ಲೆ ಪ್ರವೀಣ್‌ ಕೊಲೆಯಾದ ಬೆಳ್ಳಾರೆಯಲ್ಲೇ 15 ಜನರನ್ನು ವಶಕ್ಕೆ ಪಡೆದು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಹಂತಕರ ಪತ್ತೆಗೆ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ. ಕೇರಳದ ಕಡೆಗೂ ಪೊಲೀಸರ ತಂಡ ತೆರಳಿದೆ.

ಪುತ್ರನ ಚಿತೆಗೆ ತಂದೆಯಿಂದ ಅಗ್ನಿಸ್ಪರ್ಶ :

ಪ್ರವೀಣ್​ ಹುಟ್ಟೂರು ನೆಟ್ಟಾರು ಗ್ರಾಮದಲ್ಲಿ ಬಿಲ್ಲವ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಪ್ರವೀಣ್​ ಚಿತೆಗೆ ಅವರ ತಂದೆ ಅಗ್ನಿ ಸ್ಪರ್ಶ ಮಾಡಿದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಮಂಗಳವಾರ ರಾತ್ರಿ 8:30ಕ್ಕೆ ಎಂದಿನಂತೆ ಪ್ರವೀಣ್‌ ತನ್ನ ಕೋಳಿ ಅಂಗಡಿ ಮುಚ್ಚುತ್ತಿದ್ದಾಗ ಕೇರಳ ನೋಂದಣಿಯ ಬೈಕ್​ನಲ್ಲಿ ಸ್ಥಳಕ್ಕೆ ಬಂದಿದ್ದ ಆಗಂತುಕರು ಏಕಾಏಕಿ ಹರಿತವಾದ ಆಯುಧದಿಂದ ಪ್ರವೀಣ್‌ ಮೇಲೆ ಅಟ್ಯಾಕ್ ಮಾಡಿ ಪರಾರಿಯಾಗಿದ್ದರು. ಒಟ್ಟಾರೆ ಪ್ರವೀಣ್ ಹತ್ಯೆಯಿಂದ ಕರಾವಳಿ ಕೊತ ಕೊತ ಕುದಿಯುತ್ತಿದೆ.

ಗಿರಿಧರ್ ಶೆಟ್ಟಿ ಪವರ್ ಟಿವಿ ಮಂಗಳೂರು

RELATED ARTICLES
- Advertisment -
Google search engine

Most Popular

Recent Comments