Wednesday, September 3, 2025
HomeUncategorizedಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ; ರೈತರ ತೀವ್ರ ವಿರೋಧ

ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ; ರೈತರ ತೀವ್ರ ವಿರೋಧ

ಮಂಡ್ಯ : ಬೇಬಿ ಬೆಟ್ಟದಲ್ಲಿ ನಡೆಯುತ್ತಿರೊ ಅಕ್ರಮ ಗಣಿಗಾರಿಕೆಯಿಂದಾಗಿ ರೈತರ ಜೀವನಾಡಿಯಾಗಿರೊ ಕೆ ಆರ್ ಎಸ್ ಅಣೆಕಟ್ಟೆಗೆ ನಿಜವಾಗಲೂ ತೊಂದರೆ ಎದುರಾಗಲಿದೆಯಾ ಎಂಬುದನ್ನ ತಿಳಿಯಲು ಜಿಲ್ಲಾಡಳಿತ ನಡೆಸಲು ಉದ್ದೇಶಿಸಿರೊ ಟ್ರಯಲ್ ಬ್ಲಾಸ್ಟ್ ಅನ್ನೋದು ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ.

KRS ಮಂಡ್ಯ ಜಿಲ್ಲೆಯ ರೈತರ ಜೀವನಾಡಿ.ಆದರೆ, ಈ ಡ್ಯಾಂ ಈಗ ಸುರಕ್ಷತೆಯ ಆತಂಕ ಎದುರಿಸುತ್ತಿದೆ. 2018ರಲ್ಲಿ KRS ಸುತ್ತಮುತ್ತ ಕೇಳಿ ಬಂದ ಭಾರಿ ಶಬ್ದ ಆ ಭಾಗದಲ್ಲಿ ಭೂ ಕಂಪನವನ್ನೇ ಸೃಷ್ಟಿಸಿತ್ತು. KRS ನಲ್ಲಿರೊ ಪ್ರಕೃತಿ ವಿಕೋಪ ಭೂ ಕಂಪನ ಮಾಪನ‌ ಕೇಂದ್ರದಲ್ಲೂ ದಾಖಲಾಗಿತ್ತು. ಅದರ ಆಧಾರದ ಮೇಲೆ ರಾಜ್ಯ ನೈಸರ್ಗಿಕ ಉಸ್ತುವಾರಿ ಕೇಂದ್ರ ನೀಡಿದ್ದ ವರದಿ ಆಧಾರದ ಮೇಲೆ ಜಿಲ್ಲಾಡಳಿತ ಡ್ಯಾಂ ನ 20 ಕಿ ಮೀ ಸುತ್ತಳತೆಯಲ್ಲಿ ಗಣಿಗಾರಿಕೆ ನಿಷೇಧಾಜ್ಞೆ ಹೊರಡಿಸಿ ಆದೇಶ ಹೊರಡಿಸಿತ್ತು. ಈ ವೇಳೆ ಟ್ರಯಲ್ ಬ್ಲಾಸ್ಟ್ ಬೇಡಿಕೆ ಹುಟ್ಟಿಕೊಂಡಿತ್ತು. ಅದರಂತೆ ಬೇಬಿ ಬೆಟ್ಟದಲ್ಲಿ ನಡೆಯುತ್ತಿರೊ ಗಣಿಗಾರಿಕೆಯಿಂದಾಗಿಯೇ ಕೆ ಆರ್ ಎಸ್ ಡ್ಯಾಂ ಗೆ ಕಂಟಕ ಎದುರಾಗಲಿದೆ ಎಂಬುದನ್ನು ದೃಢಪಡಿಸಿಕೊಳ್ಳಲು ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್ ನಡೆಸಲು‌ ಮುಂದಾಗಿತ್ತು. ಟ್ರಯಲ್ ಬ್ಲಾಸ್ಟ್ ನಡೆದರೆ ಗಣಿ ಮಾಲೀಕರಿಗೆ ಅನುಕೂಲಕರವಾಗುವಂತಹ ವರದಿ ಬರೊ ಸಾಧ್ಯತೆ ಇದೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದ್ದರು. ಅಂದಿನಿಂದ ಟ್ರಯಲ್ ಬ್ಲಾಸ್ಟ್ ಅನ್ನೋದು ತಾತ್ಕಾಲಿಕವಾಗಿ ಮುಂದೂಡುತ್ತಾ ಬಂದಿತ್ತು. ಆದ್ರೆ, ಯಾರ ಒತ್ತಾಯಕ್ಕೆ ಮಣಿದೊ ಏನೊ ಡ್ಯಾಂ ಭರ್ತಿಯಾಗಿರೊ ಈ ಸಮಯದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಲು ಮುಂದಾಗಿದೆ. ಇದು ರೈತರನ್ನು ಕೆರಳಿಸಿದೆ.

ಮೂರು ವರ್ಷಗಳ ನಂತರ ಜಾರ್ಖಂಡ್‌ನಿಂದ ಭೂ ವಿಜ್ಞಾನಿಗಳನ್ನು ಕರೆತಂದು ಇಂದಿನಿಂದ ಬೇಬಿ ಬೆಟ್ಟ ಸೇರಿದಂತೆ ಐದು ಕಡೆಗಳಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು‌ ಮುಂದಾಗಿರುವುದನ್ನ ಖಂಡಿಸಿ ರೈತರು ಈ ಬಾರಿಯೂ ಪ್ರತಿಭಟನೆ ನಡೆಸಿದರು. ಒಂದು ಕಡೆ ಅಧಿಕಾರಿಗಳು ಟ್ರಯಲ್ ಬ್ಲಾಸ್ಟ್ ನಡೆಸಲು ಬೇಬಿ ಬೆಟ್ಟದಲ್ಲಿದ್ದರೆ ಮತ್ತೊಂದು ಕಡೆ ರೈತರು ಕೆ ಆರ್ ಎಸ್ ನ ಮುಖ್ಯ ದ್ವಾರದ ಬಳಿ ಪ್ರತಿಭಟನೆ ನಡೆಸಿ ಬೇಬಿ ಬೆಟ್ಟದವರೆಗೂ ಬೈಕ್ ರ್ಯಾಲಿ ನಡೆಸಿದರು. ಈ ವೇಳೆ ಕಾವೇರಿಪುರ ಗ್ರಾಮದ ಬಳಿ ರೈತರ ಬೈಕ್ ರ್ಯಾಲಿ ತಡೆದ ಗ್ರಾಮಸ್ಥರು ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆದರೆ ನಮಗೆ ಅನುಕೂಲವಾಗಲಿದೆ ನಮ್ಮ ಬದಕು ನಡೆಯುತ್ತಿರುವುದೇ ಅಲ್ಲಿನ ಗಣಿಗಾರಿಕೆಯಿಂದಾಗಿ ಹೀಗಾಗಿ ನೀವು ಅಲ್ಲಿ ಹೋಗಿ ತಡೆ ಮಾಡಬೇಡಿ ಎಂದು ಒತ್ತಾಯಿಸಿದರು. ಎಲ್ಲಾ ಬೆಳವಣಿಗೆ ನಡುವೆ ಟ್ರಯಲ್ ಬ್ಲಾಸ್ಟ್ ವಿರೋಧ ವ್ಯಕ್ತಪಡಿಸಿರುವ ಸಂಸದೆ ಸುಮಲತಾ ಅಂಬರೀಶ್ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸದೆ ಯತಾಸ್ಥಿತಿ ಕಾಪಾಡಿಕೊಳ್ಳುವಂತೆ ಪತ್ರ ಬರೆದಿದ್ದಾರೆ. ಈ ಸಂಬಂಧ ಪವರ್ ಟಿವಿಯ ಜೊತೆ ಮಾತನಾಡಿರೊ ಸಂಸದೆ ಸುಮಲತಾ ಅಂಬರೀಶ್ ತಾವು ರೈತರ ಪರ ನಿಲ್ಲುವುದಾಗಿ ಸ್ಪಷ್ಟಪಡಿಸಿದ್ದಾರೆ.

ಇಂದಿನಿಂದ ಏಳು ದಿನಗಳವರೆಗೆ ನಡೆಯಬೇಕಿದ್ದ ಟ್ರಯಲ್ ಬ್ಲಾಸ್ಟ್ ರೈತರ ಪ್ರತಿಭಟನೆಯಿಂದಾಗಿ ನಡೆದಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿನ ಸಭೆಯಲ್ಲಿನ ನಿರ್ಧಾರದ ಮೇಲೆ ಟ್ರಯಲ್ ಬ್ಲಾಸ್ಟ್​ನ ಭವಿಷ್ಯ ನಿರ್ಧಾರವಾಗಲಿದೆ.

ರವಿ ಲಾಲಿಪಾಳ್ಯ ಪವರ್ tv ಮಂಡ್ಯ

RELATED ARTICLES
- Advertisment -
Google search engine

Most Popular

Recent Comments