ಶಿವಮೊಗ್ಗ : ರಾಜ್ಯಸಭೆಗೆ ದಕ್ಷಿಣ ಭಾರತದ ನಾಲ್ಕು ಜನ ದಿಗ್ಗಜರನ್ನು ಕೇಂದ್ರ ಸರ್ಕಾರ ನಾಮ ನಿರ್ದೇಶನ ಮಾಡಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.
ರಾಜ್ಯಸಭೆಗೆ ದಕ್ಷಿಣ ಭಾರತದ ನಾಲ್ವರ ನಾಮನಿರ್ದೇಶನ ವಿಚಾರವಾಗಿ ಮಾತನಾಡಿದ ಅವರು, ಈ ನಾಲ್ವರ ಆಯ್ಕೆ ದೇಶವೇ ಸಂತೋಷ ಪಡುವಂತಹ ಅಂಶ. ಆ ನಾಲ್ಕು ಜನರನ್ನು ಸಹ ರಾಷ್ಟ್ರದ ಶಕ್ತಿಯಾಗಿ ಬೆಳೆಸುತ್ತಿರುವುದು ಸಂತೋಷ. ಇಡೀ ಪ್ರಪಂಚದ ಜನರು ಭಾರತದಲ್ಲಿ ಪ್ರಬುದ್ದರು ಇದ್ದಾರೆ. ಮೋದಿ ಅವರಿಗೆ, ನಾಲ್ವರು ರಾಜ್ಯ ಸಭೆಗೆ ಆಯ್ಕೆಯಾದವರನ್ನು ಅಭಿನಂದಿಸುತ್ತೇನೆ ಎಂದರು.
ಬಾಗಲಕೋಟೆಯಲ್ಲಿ ನಡೆದ ಗಲಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಡೀ ವಿಶ್ವದಲ್ಲಿ ಹಿಂದುತ್ವದ ಬಗ್ಗೆ ಚರ್ಚೆ ನಡೆಯುತ್ತಿದೆ. ಹಿಂದುತ್ವ ಅಂದ್ರೆ ಜೋಡಿಸೋದು, ಹೊಡೆಯುವುದಲ್ಲ. ಸರ್ವೇ ಜನಃ ಸುಖಿನೋ ಭವಃ ಎನ್ನುವುದು ಹಿಂದುತ್ವ. ಕೆಲವು ದುಷ್ಟ ಶಕ್ತಿಗಳು, ಭಯೋತ್ಪಾದಕರು ಹಿಂದು ಯುವಕರನ್ನು ಕಗ್ಗೊಲೆ ನಡೆಸುತ್ತಿದ್ದಾರೆ. ಕೊಲೆ ಮಾಡುವವರಿಗೆ ಮುಸಲ್ಮಾನ್ ಸಮುದಾಯದ ಹಿರಿಯರು ಬುದ್ದಿವಾದ ಹೇಳಬೇಕು. ಇಲ್ಲದಿದ್ದರೆ ಇಂದಲ್ಲ, ನಾಳೆ ಅವರು ಅನುಭವಿಸುತ್ತಾರೆ ಎಂದು ಹೇಳಿದರು.
ಇನ್ನು, ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಹರ್ಷ ಕೊಲೆ ಆರೋಪಿಗಳು ಮೊಬೈಲ್ ಬಳಕೆ ವಿಚಾರದ ಕುರಿತು ಮಾತನಾಡಿದ ಅವರು, ಮನುಷ್ಯನಲ್ಲಿ ಸ್ವಾರ್ಥತೆ ಇದ್ದೆ ಇರುತ್ತದೆ. ಕೆಲವು ಸ್ವಾರ್ಥ ವ್ಯಕ್ತಿಗಳು ಮಾಡುವ ಕುತಂತ್ರದ ಬಗ್ಗೆ ತಕ್ಷಣಕ್ಕೆ ತಿಳಿಯೋದು ಕಷ್ಟ ಈಗ ಗೊತ್ತಾಗಿದೆ. ಅಂತಹವರ ಬಗ್ಗೆ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ದುಷ್ಟ ಶಕ್ತಿಗಳು ಎಲ್ಲಾ ಕಡೆ ಇರುತ್ತವೆ. ಇದು ಸರ್ಕಾರ, ಇಂಟೆಲಿಜೆನ್ಸಿ ಫೆಲ್ಯೂರ್ ಅಲ್ಲ. ಕೆಲವು ಸ್ವಾರ್ಥಿಗಳು ಇದ್ದಾರೆ. ಅವರಿಂದಾಗಿ ಇಂತಹ ಘಟನೆ ನಡೆದಿದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಮಳೆ ಬಂದ್ರೆ ಏಕೆ ಬಂತು ಅಂತೀರಾ. ಮಳೆ ಬರಲಿಲ್ಲ ಅಂದ್ರೆ ಏಕೆ ಬರಲಿಲ್ಲ ಅಂತೀರಾ. ಪರಿಹಾರ ಖಂಡಿತ ಕೊಡುತ್ತೇವೆ. ಯಾವುದೇ ಅನುಮಾನ ಇಲ್ಲ. ಎಲ್ಲಿ ಮನೆ ಬಿದ್ದಿದೆ ಅಲ್ಲಿ ಸರ್ಕಾರದ ಮೂಲಕ ಪರಿಹಾರ ಕೊಡ್ತೇವೆ ಎಂದು ಭರವಸೆ ನೀಡಿದರು.


