ಭುವನೇಶ್ವರ: ಭಾರತದ ಪುರಾಣದಲ್ಲಿ ಮಹತ್ವ ಪಡೆದಿರುವ, ರಥಯಾತ್ರೆಯಿಂದಲೇ ಪ್ರಖ್ಯಾತಿ ಪಡೆದಿರುವ ಪುರಿ ಜಗನ್ನಾಥನ ಒಂಬತ್ತು ದಿನಗಳ ರಥಯಾತ್ರೆ ಇಂದು(ಶುಕ್ರವಾರ) ಪೂರ್ಣ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಪ್ರಾರಂಭವಾಗಿದೆ. ಎರಡು ವರ್ಷಗಳ ವಿರಾಮದ ನಂತರ, ಭಗವಾನ್ ಬಲಭದ್ರ, ದೇವಿ ಸುಭದ್ರ ಮತ್ತು ಜಗನ್ನಾಥ ದೇವರ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ.
12 ನೇ ಶತಮಾನದಲ್ಲಿ ನಿರ್ಮಿಸಲಾದ ದೇಗುಲದ ಮುಂಭಾಗದಲ್ಲಿ, ಮೂರು ಅಲಂಕೃತ ರಥಗಳು ತಮ್ಮ ಜಗನ್ನಾಥನನ್ನು ಹೊತ್ತು ಚಲಿಸಲು ಕಾಯುತ್ತಿವೆ. ಒಂಬತ್ತು ದಿನಗಳ ವಾರ್ಷಿಕ ರಥಯಾತ್ರೆ ಎರಡು ವರ್ಷಗಳ ನಂತರ ಸಂಪೂರ್ಣ ಸಾರ್ವಜನಿಕ ಸಹಭಾಗಿತ್ವದಲ್ಲಿ ನಡೆಯಲಿರುವುದರಿಂದ ರಾಜ್ಯಾದ್ಯಂತ ಭಕ್ತರಲ್ಲಿ ಉತ್ಸಾಹ ಹೆಚ್ಚಾಗಿದೆ.
ಸಂಜೆ 4 ಗಂಟೆಗೆ ರಥೋತ್ಸವ ಆರಂಭವಾಗಲಿದೆ. ಭದ್ರತೆಗಾಗಿ ಸಿಬ್ಬಂದಿ ನಿಯೋಜನೆ ಪುರಿ ಮತ್ತು ಸುತ್ತಮುತ್ತ, ವಿವಿಧ ಶ್ರೇಣಿಯ 1,000 ಅಧಿಕಾರಿಗಳು ಸೇರಿದಂತೆ 180 ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಜಾತ್ರೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 50 ಸಿಸಿಟಿವಿ ಕ್ಯಾಮೆರಾಗಳನ್ನು ಗ್ರ್ಯಾಂಡ್ ರಸ್ತೆ ಮತ್ತು ಪುರಿಯ ಇತರ ಭಾಗಗಳಲ್ಲಿ ಅಳವಡಿಸಲಾಗಿದೆ.
ಪ್ರತಿ ವರ್ಷ ಜಗನ್ನಾಥ ರಥಯಾತ್ರೆಯನ್ನು ವಿಜೃಂಭಣೆ ಮತ್ತು ಪ್ರದರ್ಶನದೊಂದಿಗೆ ಆಚರಿಸಲಾಗುತ್ತದೆ. ಇದರಲ್ಲಿ ಭಾಗವಹಿಸಲು ಪ್ರಪಂಚದ ಮೂಲೆ ಮೂಲೆಗಳಿಂದ ಜನರು ಬರುತ್ತಾರೆ. ಈ ವರ್ಷ ಜಗನ್ನಾಥ ಯಾತ್ರೆಯು ಜುಲೈ 1, 2022 ರಿಂದ ಪ್ರಾರಂಭವಾಗುತ್ತದೆ ಮತ್ತು ಜುಲೈ 12, 2022 ರಂದು ಕೊನೆಗೊಳ್ಳುತ್ತದೆ. ಜಗನ್ನಾಥ ಪುರಿಯ ದೇವಸ್ಥಾನದಲ್ಲಿ ಶ್ರೀ ಜಗನ್ನಾಥ, ಬಲಭದ್ರಾ ಮತ್ತು ಸುಭದ್ರಾ ದೇವರನ್ನು ಪೂಜಿಸಲಾಗುತ್ತದೆ. ಪ್ರಸ್ತುತ ದೇವಾಲಯವನ್ನು 12 ನೇ ಶತಮಾನದಲ್ಲಿ ರಾಜ ಚೋಡಗನ್ ದೇವ್ ನಿರ್ಮಿಸಿದರು. ದೇವಾಲಯದ ವಾಸ್ತುಶಿಲ್ಪವು ಕಳಿಂಗ ಶೈಲಿಯಲ್ಲಿದೆ.
ರಥಯಾತ್ರೆಯ ಸಮಯದಲ್ಲಿ ಜಗನ್ನಾಥ, ಬಲಭದ್ರಾ ಮತ್ತು ಸುಭದ್ರಾ ಪ್ರತ್ಯೇಕ ರಥಗಳಲ್ಲಿ ಕುಳಿತು ತಮ್ಮ ಚಿಕ್ಕಮ್ಮನ ಮನೆ, ಪುರಿ ದೇವಸ್ಥಾನದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಗುಂಡಿಚಾ ದೇವಸ್ಥಾನಕ್ಕೆ ಹೋಗುತ್ತಾರೆ. ಅಲ್ಲಿ 8 ದಿನ ತಂಗಿದ್ದ ಅವರು ಮತ್ತೆ ಪುರಿ ದೇವಸ್ಥಾನಕ್ಕೆ ಬರುತ್ತಾರೆ. ಜಗನ್ನಾಥ ಪುರಿ ರಥಯಾತ್ರೆಯು ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ದ್ವಿತೀಯ ತಿಥಿಯಂದು ಪ್ರಾರಂಭವಾಗುತ್ತದೆ ಮತ್ತು 8 ದಿನಗಳ ನಂತರ ದಶಮಿ ತಿಥಿಯಂದು ಶ್ರೀ ಜಗನ್ನಾಥ, ಬಲಭದ್ರಾ ಮತ್ತು ಸುಭದ್ರಾಯ ಪುನರಾಗಮನದೊಂದಿಗೆ ಕೊನೆಗೊಳ್ಳುತ್ತದೆ.
ಜಗನ್ನಾಥ ರಥ ಯಾತ್ರೆ 2022 ವೇಳಾಪಟ್ಟಿ :
ಶುಕ್ರವಾರ, ಜುಲೈ 1, 2022 ರಥಯಾತ್ರೆ ಆರಂಭ. ಮಂಗಳವಾರ, ಜುಲೈ 5, 2022 – ಹೇರಾ ಪಂಚಮಿ, ಶುಕ್ರವಾರ, ಜುಲೈ 8, 2022 ಸಂಧ್ಯಾ ದರ್ಶನ, ಶನಿವಾರ, ಜುಲೈ 9, 2022 ಬಹುದಾ ಯಾತ್ರೆ ಭಾನುವಾರ, ಜುಲೈ 10, 2022 ಸುನಬೇಸ.