Wednesday, August 27, 2025
HomeUncategorizedರಾಜ್ಯಸಭೆ ಚುನಾವಣೆ : ಜೆಡಿಎಸ್​​ಗೆ ಆತಂಕ

ರಾಜ್ಯಸಭೆ ಚುನಾವಣೆ : ಜೆಡಿಎಸ್​​ಗೆ ಆತಂಕ

ಬೆಂಗಳೂರು: ನಾಳೆ ನಡೆಯುವ ರಾಜ್ಯಸಭೆ ಚುನಾವಣೆ ಎಲ್ಲರನ್ನೂ‌ ತುದಿಗಾಲಲ್ಲಿ‌ ನಿಲ್ಲಿಸಿದೆ. ನಾಲ್ಕನೇ ಅಭ್ಯರ್ಥಿ ಆಯ್ಕೆ ಕುತೂಹಲ ಮೂಡಿಸಿದೆ. ಮೂರು ಪಕ್ಷಗಳು ಅಭ್ಯರ್ಥಿಗಳನ್ನ ಹಾಕಿರೋದ್ರಿಂದ ಕಗ್ಗಂಟು ಎದುರಾಗಿದೆ. ಯಾರ್ ಗೆಲ್ತಾರೋ.. ಯಾವ್ ಕ್ಯಾಂಡಿಡೆಟ್ ಸೋಲ್ತಾರೋ ಅನ್ನೋದನ್ನ ಜಸ್ಟಿಫೈ ಮಾಡೋದಕ್ಕೂ‌ಆಗ್ತಿಲ್ಲ. ಅಷ್ಟರ ಮಟ್ಟಿಗೆ ಈ‌ ಚುನಾವಣೆ ಕುತೂಹಲ ಹುಟ್ಟುಹಾಕಿದೆ.

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ‌ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಆರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಸಂಖ್ಯಾಬಲದ ಆಧಾರದ ಮೇಲೆ ಸುಲಭ ಗೆಲುವು ಸಾಧಿಸ್ತಾರೆ.. ಕಾಂಗ್ರೆಸ್‌ನ ಜೈರಾಂ ರಮೇಶ್ ಕೂಡ ಸುಲಭವಾಗಿ ಗೆಲ್ತಾರೆ. ಆದ್ರೆ, ಉಳಿದಿರುವ ನಾಲ್ಕನೇ ಅಭ್ಯರ್ಥಿಯ ಆಯ್ಕೆ ಮಾತ್ರ ಕಗ್ಗಂಟಾಗಿದೆ. ಮೂರು ಪಕ್ಷಕ್ಕೂ‌ ಅಗತ್ಯ ಸಂಖ್ಯಾ ಬಲವಿಲ್ಲದ ಕಾರಣ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅಡ್ಡಮತದಾನದ ಭಯ ಎದುರಾಗಿದೆ.

ಕಾಂಗ್ರೆಸ್-ಬಿಜೆಪಿ ನಡುವೆ ಲಾಭ-ನಷ್ಟದ ಲೆಕ್ಕಾಚಾರ :

ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಕೈ, ತೆನೆ ನಾಯಕರ ನಡುವೆ ಪ್ರತಿಷ್ಠೆ ಹೆಚ್ಚಾಗಿದೆ.. ಅಲ್ಪಸಂಖ್ಯಾತ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದೇವೆ, ಅಲ್ಪಸಂಖ್ಯಾತರ ಪರವಾಗಿದ್ದರೆ, ನಮಗೆ ಮತ‌ನೀಡಿ ಅಂತ ಕೈ ನಾಯಕರು‌ ಜೆಡಿಎಸ್ ಶಾಸಕರಿಗೆ ಮನವಿ‌ ಮಾಡ್ತಿದ್ದಾರೆ.. ಒಂದು ಹೆಜ್ಜೆ ಮುಂದೆ ಹೋಗಿರುವ ಸಿದ್ದರಾಮಯ್ಯ ಆತ್ಮಸಾಕ್ಷಿಗನುಗುಣವಾಗಿ ವೋಟ್ ಮಾಡಿ ಅಂತ ಬಹಿರಂಗವಾಗಿಯೇ ಪತ್ರ ಬರೆದಿದ್ದಾರೆ.. ಸಿದ್ದರಾಮಯ್ಯನವರ ವಾದಕ್ಕೆ ಕಿಡಿಕಾರಿರುವ ಮಾಜಿ ಸಿಎಂ ಕುಮಾರಸ್ವಾಮಿ, ನೀವೇ ನಮ್ಮನ್ನ‌ ಬೆಂಬಲಿಸಿ ಅಂತ ಸವಾಲ್ ಎಸೆದಿದ್ದಾರೆ.. ಅಷ್ಟೇ ಅಲ್ಲದೇ ನಿಮಗೆ ನಾಚಿಕೆ ಆಗಲ್ವಾ ಅಂತಾನೂ ಕಿಡಿ ಕಾರಿದ್ದಾರೆ. ನಿಮ್ಮ‌ನಾಯಕರನ್ನು ಕೇಳಿಯೇ ನಾವು ಅಭ್ಯರ್ಥಿ ಹಾಕಿದ್ದು, ನಮಗಿಂತ ಮೊದಲೇ ನೀವು ನಾಮಿನೇಷನ್ ಮಾಡಿಸಿದ್ದು ಸರಿಯಲ್ಲ.. ಜಾತ್ಯತೀತ ನಿಲುವಿನ ಮೇಲೆ ಅಭಿಮಾನವಿದ್ರೆ, ಕೋಮುವಾದಿ ಪಕ್ಷಕ್ಕೆ ಅವಕಾಶ ಕೊಡಬಾರ್ದು ಅಂತ ಇದ್ರೆ, ನೀವೇ ನಮಗೆ ಬೆಂಬಲ ಕೊಡಿ ಅಂತ ಬೇಡಿಕೆ ಇಟ್ಟಿದ್ದಾರೆ.. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವೆ ಬೆಂಬಲದ ವಾರ್ ಮುಂದುವರಿದಿದೆ.

ನಾಯಕರ ಒಣ ಪ್ರತಿಷ್ಠೆಯಿಂದ ಅಭ್ಯರ್ಥಿಗಳಿಗೆ ಸಂಕಷ್ಟ..! :

ಇನ್ನು ಕೊನೆಯ ಕ್ಷಣದವರೆಗೂ ತಮ್ಮ ಅಭ್ಯರ್ಥಿ‌ ಗೆಲುವಿಗೆ ಜೆಡಿಎಸ್ ಪ್ರಯತ್ನ ಮುಂದುವರೆಸಿದೆ.. ಹೀಗಾಗಿ ಜೆಪಿ ಭವನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಹೆಚ್.ಡಿ ರೇವಣ್ಣ ಸಭೆ ನಡೆಸುವ ಮೂಲಕ ಕಾಂಗ್ರೆಸ್ ನಾಯಕರನ್ನ ಬಗ್ಗಿಸುವ ಬಗ್ಗೆ ಚರ್ಚೆಯಲ್ಲಿ‌ ತೊಡಗಿದ್ರು. ಇದೇ ವೇಳೆ ವಿಧಾನಸೌಧ ಪ್ರತಿಪಕ್ಷ ನಾಯಕರ ಕಚೇರಿಯಲ್ಲಿ ಸಿದ್ದರಾಮಯ್ಯ, ಡಿಕೆಶಿ ಅಡ್ಡಮತದಾನ ಮಾಡ್ತಾರೋ ಇಲ್ವೋ..? ನಾವು‌ ನಂಬಿದವರು‌ ಕೈ ಹಿಡಿಯುತ್ತಾರೋ.. ಇಲ್ಲ ಕೈ ಕೊಡ್ತಾರೋ ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ರು.. ಜೊತೆಗೆ ತಮ್ಮ ಅಭ್ಯರ್ಥಿಯನ್ನ ಗೆಲ್ಲಿಸಿಕೊಳ್ಳಬೇಕು.. ಇಲ್ಲವೇ ಜೆಡಿಎಸ್ ಅಭ್ಯರ್ಥಿ ಗೆಲ್ಲೋಕೆ ಬಿಡಬಾರ್ದು ಅನ್ನೋ ಜಿದ್ದಿಗೆ ಬಂದಿದ್ದಾರೆ.. ಅತ್ತ ಜೆಡಿಎಸ್ ನಾಯಕರು ಅದೇ ಆಲೋಚನೆಯಲ್ಲಿದ್ದಾರೆ.. ಕಾಂಗ್ರೆಸ್ ಅಭ್ಯರ್ಥಿ ಸೋಲಿಸುವ ಮೂಲಕ ಸಿದ್ದರಾಮಯ್ಯ ಪ್ರತಿಷ್ಠೆಗೆ ಪೆಟ್ಟು ಕೊಡ್ಬೇಕು ಅನ್ನೊ ಪ್ಲಾನ್ ಮಾಡಿದ್ದಾರೆ.. ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ಯಶವಂತರಪುರದ ಖಾಸಗಿ ರಸಾರ್ಟ್ ಗೆ ಶಾಸಕರನ್ನ ಶಿಫ್ಟ್ ಮಾಡಿಸಿದ್ದಾರೆ.

ಇತ್ತ ಬಿಜೆಪಿ ನಾಯಕರು ಶಾಸಕರಿಗಾಗಿ ಖಾಸಗಿ ಹೋಟೆಲ್‌ನಲ್ಲಿ ಔತಣ ಕೂಟ ಆಯೋಜಿಸಿದ್ದಾರೆ. ಒಟ್ನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ಒಣಪ್ರತಿಷ್ಠೆಯಿಂದಾಗಿ ರಾಜ್ಯಸಭೆ ಚುನಾವಣೆ ಕುತೂಹಲ ಘಟ್ಟ ಮುಟ್ಟಿದೆ..ಆದ್ರೆ, ಅಭ್ಯರ್ಥಿಗಳ‌ ಪಾಡು ಹೇಳತೀರದಾಗಿದೆ..ಕೊನೆಯ ಕ್ಷಣದವರೆಗೂ ಕುತೂಹಲ ಉಳಿಸಿಕೊಂಡಿದೆ..ಆದ್ರೆ, ಇಂದು ಮಾತ್ರ ಅವಕಾಶವಿದ್ದು, ರಾತ್ರಿಯೊಳಗೆ ನಾಯಕರ ಲೆಕ್ಕಾಚಾರಗಳೇ ಬುಡಮೇಲಾದ್ರೂ‌ ಅಚ್ಚರಿಯಿಲ್ಲ.

ರೂಪೇಶ್ ಜೊತೆ ಆನಂದ್ ನಂದಗುಡಿ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು

RELATED ARTICLES
- Advertisment -
Google search engine

Most Popular

Recent Comments