Wednesday, September 10, 2025
HomeUncategorizedಮಳೆ ಎಫೆಕ್ಟ್ : ಶತಕ ಬಾರಿಸಿದ ಟೊಮ್ಯಾಟೊ

ಮಳೆ ಎಫೆಕ್ಟ್ : ಶತಕ ಬಾರಿಸಿದ ಟೊಮ್ಯಾಟೊ

ಹುಬ್ಬಳ್ಳಿ : ಮಾರುಕಟ್ಟೆಯಲ್ಲಿ ದಿಢೀರ್‌ ಏರಿಕೆ ಕಂಡಿರುವ ಟೊಮ್ಯಾಟೊ ಸಗಟು ದರವೇ ಶತಕದ ಪ್ರಮಾಣ ಏರಿದ್ದು, ಗುಣಮಟ್ಟದ ಟೊಮ್ಯಾಟೊ ಒಂದು ಕೆಜಿ 100 ರೂ.ಗೆ ಮಾರಾಟವಾಗಿದೆ. ನಗರದ ಮಾರುಕಟ್ಟೆಯಲ್ಲಿ ಈಗ ಉತ್ತಮ ಗುಣಮಟ್ಟದ ಟೊಮ್ಯಾಟೊ 100 ರೂ.ಗಳಿಗೆ ಲಭ್ಯವಾಗುತ್ತಿದೆ. ಸಣ್ಣ ಟೊಮೇಟೊ 70 ರಿಂದ 80 ರೂ.ಗಳಿಗೆ ತಲಾ ಒಂದು ಕೆಜಿಗೆ ಬಿಕರಿಯಾಗಿದೆ. ಹೋಲ್‌ ಸೇಲ್‌ ದರದಲ್ಲಿ 14 ರಿಂದ 15 ಕೆಜಿ ತೂಕದ ಕ್ರೇಟ್‌ ಒಂದಕ್ಕೆ 1800 ರಿಂದ 2200 ರೂ.ಗಳಿಗೆ ಮಾರಾಟವಾಗಿ ದಾಖಲೆ ಸ್ಥಾಪಿಸಿದೆ.

ದಿನೇ ದಿನೇ ಟೊಮ್ಯಾಟೊ ದರದಲ್ಲಿ ಏರಿಕೆ ಕಾಣುವ ಮೂಲಕ ಬೆಳೆಗಾರರಲ್ಲಿ ಹರ್ಷ ಮೂಡಿಸಿದರೆ ಗ್ರಾಹಕರ ಒಡಲನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಬೆಲೆ ಇಳಿಕೆಯಿಂದ ಆಗಾಗ್ಗೆ ರೈತರನ್ನು ಕಾಡುವ ಟೊಮ್ಯಾಟೊ ಇದೀಗ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಗ್ರಾಹಕರನ್ನು ಕಂಗಾಲಾಗಿಸಿದೆ.ವಾಯು ಭಾರ ಕುಸಿತದಿಂದ ಜಿಲ್ಲೆಯಲ್ಲಿ ಎಡೆಬಿಡದೆ ಸುರಿದ ಮಳೆಯಿಂದ ಟೊಮ್ಯಾಟೊ ಬೆಳೆ ನೆಲಕಚ್ಚಿದೆ. ಕೆಲವೆಡೆ ಟೊಮ್ಯಾಟೊ ಬೆಳೆ ಜಿಟಿ ಜಿಟಿ ಮಳೆಗೆ ನಾಶವಾಗಿವೆ. ಹೀಗಾಗಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮ್ಯಾಟೊ ಸರಬರಾಜು ಆಗದಿರುವುದು ಡಿಮ್ಯಾಂಡ್‌ ಸೃಷ್ಟಿಗೆ ಕಾರಣವಾಗಿದೆ. ಅಲ್ಲದೆ ದೀಪಾವಳಿ ಹಬ್ಬದ ನಂತರ ಮದುವೆ ಹಾಗೂ ಶುಭ ಸಮಾರಂಭಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುವುದು ಬೇಡಿಕೆ ಹೆಚ್ಚಾಗಲು ಮತ್ತೊಂದು ಕಾರಣ.

ರಾಜ್ಯದಲ್ಲಿ ಟೊಮ್ಯಾಟೊ ಹೆಚ್ಚಾಗಿ ಬೆಳೆಯುವ ಜಿಲ್ಲೆಗಳಿಂದ ಹೆಚ್ಚಿನ ಪ್ರಮಾಣದ ಟೊಮ್ಯಾಟೊ ಮಾರುಕಟ್ಟೆಗೆ ಪೂರೈಕೆ ಆಗದಿರುವುದರಿಂದ ಬೆಲೆ ಏರುತ್ತಲೇ ಇದೆ. ದಿನ ನಿತ್ಯದ ಆಹಾರ ಬಳಕೆಗೆ ಅಗತ್ಯವಾಗಿರುವ ಟೊಮ್ಯಾಟೊ ಈಗ ಬೆಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರು ಬೆಲೆಯಲ್ಲಿ ಚೌಕಾಸಿ ಮಾಡುವುದು ಸಾಮಾನ್ಯವಾಗಿದೆ.

ಕಳೆದ ವರ್ಷ ಕೋವಿಡ್‌-19 ಹೊಡೆತದಿಂದ ಮಕಾಡೆ ಮಲಗಿದ್ದ ಮಾರುಕಟ್ಟೆ ಬೀದಿಗಳು ವ್ಯಾಪಾರ ಕೆಲವು ತಿಂಗಳಿನಿಂದ ಕುದುರಿದೆ. ಕೋವಿಡ್‌ ಎರಡನೇ ಅಲೆ ಕಡಿಮೆಯಾದ ನಂತರ ಅಗತ್ಯ ವಸ್ತುಗಳ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿದೆ.

ಟೊಮ್ಯಾಟೊ ಮತ್ತು ಈರುಳ್ಳಿ ದರ ಬೇಸಿಗೆಯಲ್ಲಿ ಕುಸಿಯುವುದು ಮಳೆಗಾಲದಲ್ಲಿ ಏರಿಕೆ ಕಾಣುವುದು ಸಹಜ. ಈರುಳ್ಳಿ ಪ್ರತಿ ಕೆಜಿಗೆ 50 ರೂ ದಾಟಿದೆ. ಈ ಬಾರಿ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಬೇಡಿಕೆ ಅಷ್ಟಾಗಿ ಕಂಡಿಲ್ಲ. ಆದರೆ ಟೊಮ್ಯಾಟೊ ಪ್ರತಿ ಕೆ.ಜಿಗೆ 100 ರೂ ದಾಟಿದ್ದು ಮುಟ್ಟುವ ಮುನ್ನವೇ ಭಯಹುಟ್ಟಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಇಳಿಯುವ ಸಾಧ್ಯತೆಯಿದೆ. ಮಾರುಕಟ್ಟೆಯಲ್ಲಿ ಸಾಂಬಾರ ಪದಾರ್ಥಗಳ ಜೊತೆಗೆ ತರಕಾರಿ, ಕಾಯಿಪಲ್ಲೆಗಳ ಬೆಲೆ ಕೂಡಾ ಏರಿಕೆಯಾಗಿದೆ. ಇತ್ತೀಚೆಗೆ ದವಸ-ಧಾನ್ಯ, ಕಾಳುಗಳು ಹಾಗೂ ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರ ಜೊತೆಗೆ ತರಕಾರಿಗಳ ಬೆಲೆ ಕೂಡ ಟೊಮ್ಯಾಟೊ ಗಗನಮುಖಿಯಾಗಿದೆ. ಬಹುತೇಕ ತರಕಾರಿಗಳ ಬೆಲೆ ಕೆಜಿ ಗೆ 100 ರೂ. ಆಸುಪಾಸಿನಲ್ಲಿದೆ.

ಹುಬ್ಬಳ್ಳಿ ಜನತಾ ಬಜಾರ, ಗಾಂಧಿ ಮಾರುಕಟ್ಟೆ, ಹಳೇಹುಬ್ಬಳ್ಳಿ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಈಗ ಕೆಜಿ ಕ್ಯಾರೆಟ್‌-60 ರೂ., ಬೆಂಡೇಕಾಯಿ-80ರೂ, ಆಲೂಗೆಡ್ಡೆ-25, ಹೀರೇಕಾಯಿ-80, ಬದನೆಕಾಯಿ-50, ಹಸಿಮೆಣಸಿನಕಾಯಿ-60, ಎಲೆಕೋಸು-40, ಸವತಿಕಾಯಿ-60 ರೂ ಹೀಗೆ ಕಾಯಿಪಲ್ಲೆಗಳ ಬೆಲೆಗಳಲ್ಲಿ ಭಾರೀ ಹೆಚ್ಚಳ ಕಂಡಿವೆ. ಇದರ ಜತೆಗೆ ಸೊಪ್ಪುಗಳ ಬೆಲೆಯಲ್ಲೂ ಭಾರೀ ಏರಿಕೆ ಕಾಣುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments