Tuesday, September 16, 2025
HomeUncategorizedಇಂದು ರಾಜ್ಯ ಬಜೆಟ್ ಮಂಡನೆ..!

ಇಂದು ರಾಜ್ಯ ಬಜೆಟ್ ಮಂಡನೆ..!

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಈಗ ಎಲ್ಲರ ಚಿತ್ತ ಬಿಎಸ್‌ವೈ ಮೇಲಿದೆ.

8ನೇ ಬಾರಿ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಜ್ಜಾಗಿದ್ದಾರೆ. ಆದರೆ ಕೊರೋನಾ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿಲ್ಲ. ಸಾಲದ ಪ್ರಮಾಣವೂ ಏರುಗತಿಯಲ್ಲಿದೆ. ಇದೆಲ್ಲದರ ನಡುವೆ ಬೆಲೆ ಏರಿಕೆಯ ಹೊಡೆತ ಜನಸಾಮಾನ್ಯರನ್ನ ನಲುಗಿಸಿಬಿಟ್ಟಿದೆ. ಇದೆಲ್ಲದರ ನಡುವೆಯೇ ಹೊರೆಯಾಗದ ಬಜೆಟ್ ಮಂಡಿಸುವ ಸವಾಲು ಬಿಎಸ್‌ವೈ ಮುಂದಿದೆ. ವಿಶ್ವವನ್ನೇ ನಲುಗಿಸಿದ ಮಹಾಮಾರಿ ಕೋವಿಡ್‌ನಿಂದ ಆರ್ಥಿಕ ಕೊರತೆಯಾಗಿದೆ. ಆದ್ರೂ ಇತ್ತೀಚೆಗೆ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ. ಲಾಕ್‌ಡೌನ್‌ನಿಂದಾಗಿ ಜನ ಸಾಮಾನ್ಯರ ಆರ್ಥಿಕ ಪರಿಸ್ಥಿತಿ ಸರ್ಕಾರಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಎಲ್ಲ ವರ್ಗಗಳಿಗೂ ಅನುಕೂಲಕರವಾದ ಬಜೆಟ್ ಮಂಡನೆ ಮಾಡುವ ನಿರೀಕ್ಷೆಗಳಿವೆ.

ಪ್ರಸಕ್ತ ಸಾಲಿನಲ್ಲಿ ಕೊರೋನಾ ಆರ್ಥಿಕ ಸಂಕಷ್ಟದಿಂದ ಆರ್ಥಿಕ ಶಿಸ್ತು ಮೀರಿ ಸಾಲ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಉತ್ತಮ ಬಜೆಟ್ ಮಂಡನೆ ಮಾಡುತ್ತೇನೆ ಅನ್ನೋದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿಶ್ವಾಸ. ಈವರೆಗೆ ಒಟ್ಟು ಜಿಡಿಪಿಯ ಶೇಕಡಾ 3ರಷ್ಟು ಅಥವಾ ಅದಕ್ಕಿಂತ ಕಡಿಮೆ ಸಾಲ ಮಾಡಲು ಕೇಂದ್ರ ಸರ್ಕಾರದ ಅನುಮತಿಯಿತ್ತು. ಆದರೆ ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಒಟ್ಟು ಜಿಡಿಪಿಯ ಶೇಕಡಾ 5 ರಷ್ಟು ಸಾಲ ಮಾಡಲು ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. ಹೀಗಾಗಿ ಕಳೆದ ಫೆಬ್ರವರಿ ತಿಂಗಳ ಅಂತ್ಯಕ್ಕೆ ಬರೋಬ್ಬರಿ 60 ಸಾವಿರ ಕೋಟಿ ರೂ. ಸಾಲವನ್ನು ರಾಜ್ಯ ಸರ್ಕಾರ ಮಾಡಿತ್ತು. ಇದೀಗ ಬಜೆಟ್ ಹಿನ್ನೆಲೆಯಲ್ಲಿ ಮತ್ತಷ್ಟು ಸಾಲದ ಹೊರೆ ರಾಜ್ಯದ ಮೇಲೆ ಬೀಳೋದು ನಿಶ್ಚಿತವಾಗಿದೆ.  ಈ ವರ್ಷದ ಅಂತ್ಯಕ್ಕೆ ಒಟ್ಟಾರೆ ರಾಜ್ಯದ ಸಾಲ 4.19 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಈ ಸಲದ ಬಜೆಟ್‌ನಲ್ಲಿ ಮಹಿಳಾ ಪರ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸುಳಿವು ನೀಡಿದ್ದಾರೆ. ಹೀಗಾಗಿ ಅವರೇ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮೀ ಯೋಜನೆ ಸೇರಿದಂತೆ ಮತ್ತಷ್ಟು ಯೋಜನೆಗಳು ಮಹಿಳೆಯರಿಗಾಗಿ ನಿರೀಕ್ಷೆ ಮಾಡಬಹುದಾಗಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸೇರಿದಂತೆ ಹಲವು ಯೋಜನೆಗಳು ಯಡಿಯೂರಪ್ಪ ಅವರ ಬಜೆಟ್‌ನಲ್ಲಿ ಇರಲಿವೆ ಎಂಬ ಮುನ್ಸೂಚನೆ ಸಿಕ್ಕಿದೆ.

ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಯಾವುದೇ ಹೊಸ ತೆರಿಗೆಗಳನ್ನು ಜನ-ಸಾಮಾನ್ಯರ ಮೇಲೆ ಹಾಕುವ ಸಾಧ್ಯತೆಗಳಿಲ್ಲ. ಹೀಗಾಗಿ ಬಜೆಟ್ ಬಳಿಕ ಯಾವುದೇ ದಿನಬಳಕೆ ವಸ್ತು ಸೇರಿದಂತೆ ಯಾವುದೇ ವಸ್ತುಗಳ ಬೆಲೆ ಏರಿಕೆ ಆಗುವ ಸಂಭವವೂ ಇಲ್ಲ. ಆದರೆ ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸೆಸ್ ಇಳಿಸಲು ಸಾಧ್ಯವಿಲ್ಲ ಎಂದು ಸಿಎಂ ಯಡಿಯೂರಪ್ಪ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಬಜೆಟ್ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ಆಗುವುದಿಲ್ಲ.

ಮೊದಲ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ್ದರು. ಆ ಮೂಲಕ ದೇಶದಲ್ಲಿಯೇ ಮೊದಲ ಬಾರಿ ಪ್ರತ್ಯೇಕ ಕೃಷಿ ಬಜೆಟ್ ಮಾಡಿದ ಹೆಗ್ಗಳಿಕೆ ಯಡಿಯೂರಪ್ಪ ಅವರದ್ದಾಗಿತ್ತು. ಆದರೆ ಪ್ರತ್ಯೇಕ ಪುಸ್ತಕ ಮಾಡಿದ್ದಾರಷ್ಟೇ, ರೈತರಿಗೆ ಹೆಚ್ಚಿನ ಯೋಜನೆಗಳನ್ನೇನು ಯಡಿಯೂರಪ್ಪ ಕೊಟ್ಟಿಲ್ಲ ಎಂಬ ಆರೋಪವನ್ನು ವಿಪಕ್ಷ ನಾಯಕರು ಆಗ ಮಾಡಿದ್ದರು. ಆದ್ರೆ ಈ ಬಾರಿ ಪ್ರತ್ಯೇಕ ಕೃಷಿ ಬಜೆಟ್ ಇರುವುದಿಲ್ಲ. ಆದರೆ ರೈತ ಪರವಾದ ಬಜೆಟ್ ಮಂಡನೆ ಮಾಡುತ್ತೇನೆ ಎಂದು ಈ ಮೊದಲೇ ಬಿಎಸ್‌ವೈ ತಿಳಿಸಿದ್ದಾರೆ. ಹೀಗಾಗಿ ರೈತರಿಗೆ ನೀರಾವರಿ ಸೇರಿದಂತೆ ಇತರ ಸಾಲಗಳ ಬಡ್ಡಿದರದಲ್ಲಿ ಕಡಿತ ಮಾಡುವ ಸಾಧ್ಯತೆಗಳಿವೆ.

ಕೊರೋನಾ ಸಂಕಷ್ಟ, ಅಂಕೆಗೆ ಸಿಗದ ಅರ್ಥಿಕತೆಯ ನಡುವೆಯೇ ಜನಸ್ನೇಹಿ ಬಜೆಟ್ ಮಂಡಿಸುವ ಸವಾಲು ಬಿಎಸ್‌ವೈ ಮೇಲಿದೆ. ಆದರೆ ಆರ್ಥಿಕ ಶಿಸ್ತು ಮೀರಿದ್ರೂ ಜನರಿಗೆ ಹೊರೆಯಾಗದ ಬಜೆಟ್ ಮಂಡನೆ ಮಾಡುವ ವಿಶ್ವಾಸವಂತೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments