Wednesday, September 17, 2025
HomeUncategorizedಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿಯೂ ಗಾಂಜಾ ಘಾಟು - ಗಾಂಜಾ ಬೆಳೆದವ ಬಂಧನ!

ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿಯೂ ಗಾಂಜಾ ಘಾಟು – ಗಾಂಜಾ ಬೆಳೆದವ ಬಂಧನ!

ಶಿವಮೊಗ್ಗ : ಇನ್ನು ರಾಜ್ಯದ ಚಂದನವನದಲ್ಲಿ ಗಾಂಜಾ ಗಮ್ಮತ್ತಿನ ಹಲವಾರು ಪ್ರಕರಣಗಳು, ಬೆಳಕಿಗೆ ಬರುತ್ತಿದ್ದು, ಇತ್ತ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿಯೂ ಕೂಡ, ಗಾಂಜಾ ಬೆಳೆಯುತ್ತಿರುವ ರೈತರಿಗೆ ಜಿಲ್ಲಾ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಮಾದಕ ವಸ್ತು ಗಾಂಜಾ ಗಿಡಗಳನ್ನು ಬೆಳೆದ ಇಬ್ಬರು ಆರೋಪಿ ಪಾಂಡುರಂಗ (35) ಮತ್ತು ಹನುಮಂತ (22) ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. 

ಒಟ್ಟು 13 ಕೆ.ಜಿ. ತೂಕದ ಹಸಿ ಗಾಂಜಾ ಗಿಡಗಳು ಅಂದಾಜು ಮೌಲ್ಯ 26 ಸಾವಿರ ರೂ. ಆಗಿದ್ದು, ಈ ಗಾಂಜಾ ಗಿಡಗಳನ್ನು ಅಮಾನತ್ತು ಪಡಿಸಿಕೊಂಡು, ಕುಂಸಿ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆ ರಿತ್ಯಾ ಪ್ರಕರಣವನ್ನು ದಾಖಲಿಸಲಾಗಿದೆ. ಅಂದಹಾಗೆ, ಶಿವಮೊಗ್ಗ ಉಪ ವಿಭಾಗದ, ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಮಟ್ಟಿ ಗ್ರಾಮದ ವಾಸಿ ಪಾಂಡುರಂಗ ಈತನ ಶುಂಠಿ ಹೊಲದಲ್ಲಿ ಮಾದಕ ವಸ್ತು ಗಾಂಜಾ ಗಿಡಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಇನ್ನು ಹೊಲಗಳಲ್ಲಿ ಇತರೆ ಬೆಳೆಗಳ ಮಧ್ಯೆ ಗಾಂಜಾ ಬೆಳೆಯುವುದು ಸೇರಿದಂತೆ, ಕೃಷಿಕರು ಅಲ್ಲಲ್ಲಿ ಗಾಂಜಾ ಗಿಡಗಳನ್ನು ಬೆಳೆಯುತ್ತಿದ್ದು, ಇಂತಹವರ ವಿರುದ್ಧ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನ ಜಿಲ್ಲಾ ಎಸ್.ಪಿ. ನೀಡಿದ್ದಾರೆ.

ಅದರಂತೆ, ಇದೀಗ ಶಿವಮೊಗ್ಗ ಪೊಲೀಸ್ ಇಲಾಖೆಯಿಂದ ಜಿಲ್ಲೆಯಲ್ಲಿ ದಾಖಲಾದ 3 ವರ್ಷಗಳ ಗಾಂಜಾ ಪ್ರಕರಣಗಳನ್ನು ಬಿಡುಗಡೆ ಮಾಡಿದ್ದು, 2018, 2019 ಮತ್ತು 2020 ರ ಆ. 31ರ ವರೆಗೆ ಮಾದಕ ವಸ್ತು ಗಾಂಜಾ ಮಾರಾಟ, ಸಾಗಾಣಿಕೆ ಹಾಗೂ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದ ಆರೋಪಿಗಳ ವಿರುದ್ಧ NDPS ಕಾಯ್ದೆ ರೀತ್ಯಾ ಪ್ರಕರಣಗಳನ್ನು ದಾಖಲಿಸಿ ಕ್ರಮ ತೆಗೆದುಕೊಂಡಿದೆ. 2018 ನೇ ಸಾಲಿನಲ್ಲಿ ಒಟ್ಟು 70 ಪ್ರಕರಣಗಳನ್ನು ದಾಖಲಿಸಿ, ಒಟ್ಟು 138 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ಒಟ್ಟು 314 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ 314 ಕೆ.ಜಿ ಗಾಂಜಾದಲ್ಲಿ 295 ಕೆ.ಜಿ ಹಸಿ ಗಾಂಜಾ ಗಿಡಗಳು ಮತ್ತು 19 ಕೆ.ಜಿ ಒಣ ಗಾಂಜಾ ಮಾದಕ ವಸ್ತು ಒಳಗೊಂಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅದರಂತೆ, 2019 ನೇ ಸಾಲಿನಲ್ಲಿ ಒಟ್ಟು 52 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 115 ಜನ ಆರೋಪಿಗಳನ್ನು ಬಂಧಿಸಿ, ಒಟ್ಟು 164 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿಯೂ, 164 ಕೆ.ಜಿ ಗಾಂಜಾದಲ್ಲಿ 139 ಕೆ.ಜಿ. ಹಸಿ ಗಾಂಜಾ ಗಿಡಗಳು ಮತ್ತು 25 ಕೆ.ಜಿ ಒಣ ಗಾಂಜಾ ಮಾದಕ ವಸ್ತು ಒಳಗೊಂಡಿದೆ.

ಈ ವರ್ಷ ಅಂದರೆ, 2020 ನೇ ಸಾಲಿನ ಆಗಸ್ಟ್ ಅಂತ್ಯದವರೆಗೆ, ಒಟ್ಟು 45 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಒಟ್ಟು 99 ಜನ ಆರೋಪಿತರನ್ನು ಬಂಧಿಸಲಾಗಿದೆ. ಇದರಲ್ಲಿ ಒಟ್ಟು 60 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಪ್ರಕರಣಗಳಲ್ಲಿ, 60 ಕೆ.ಜಿ ಗಾಂಜಾದಲ್ಲಿ 41 ಕೆ.ಜಿ ಹಸಿ ಗಾಂಜಾ ಗಿಡಗಳು ಮತ್ತು 19 ಕೆ.ಜಿ ಒಣ ಗಾಂಜಾ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ.

ಕೆ.ಎಂ. ಶಾಂತರಾಜು, ಜಿಲ್ಲಾ ರಕ್ಷಣಾಧಿಕಾರಿ.

RELATED ARTICLES
- Advertisment -
Google search engine

Most Popular

Recent Comments