Monday, September 15, 2025
HomeUncategorizedಅತಿಥಿ ಉಪನ್ಯಾಸಕರ ಪ್ರತಿಭಟನೆ | ತರಕಾರಿ ಜೊತೆಗೆ ಇತರೆ ಕೆಲಸವನ್ನು ಮಾಡಿ ಜೀವನ ನಡೆಸುತ್ತಿರುವ ಉಪನ್ಯಾಸಕರು

ಅತಿಥಿ ಉಪನ್ಯಾಸಕರ ಪ್ರತಿಭಟನೆ | ತರಕಾರಿ ಜೊತೆಗೆ ಇತರೆ ಕೆಲಸವನ್ನು ಮಾಡಿ ಜೀವನ ನಡೆಸುತ್ತಿರುವ ಉಪನ್ಯಾಸಕರು

ಚಿಕ್ಕಮಗಳೂರು : ಹೆಸ್ರು ಸತೀಶ್ – ಇತಿಹಾಸ ಉಪನ್ಯಾಸಕ ಹಾಗು ತೆಂಗಿನ ಕಾಯಿ ವ್ಯಾಪಾರಿ. ಮತ್ತೋರ್ವ ಶರೀಫ್ – ಅರ್ಥಶಾಸ್ತ್ರದ ಲೆಕ್ಚರರ್ ಮತ್ತು ಬಣ್ಣ ಹೊಡೆಯೋ ಪೇಂಟರ್. ಮಗದೊಬ್ಬ ಸಂದೀಪ್ – ಕನ್ನಡ ಉಪನ್ಯಾಸಕ, ತೋಟದ ಕೂಲಿ. ಇನ್ನೊಬ್ಬ ಪ್ರವೀಣ್ – ರಾಜ್ಯಶಾಸ್ತ್ರದ ಮೇಷ್ಟ್ರು, ಬಾರ್‍ನಲ್ಲಿ ಸಪ್ಲೈಯರ್. ಪತ್ರಿಕೋಧ್ಯಮ ಪಾಠ ಮಾಡೋ ಉಮೇಶ್ ತೋಟದ ಕೆಲಸಗಾರ. ಇನ್ನೊಬ್ಬ ಪ್ರದೀಪ್ – ಕನ್ನಡ ಕಲಿಸೋರು, ಕಾರು ಚಾಲಕ. ಹೇಳೋಕೆ ಒಬ್ರೋ… ಇಬ್ರೋ… ನೂರಾರು ಜನರದ್ದು ನೂರಾರು ಕಥೆ. ಅಯ್ಯೋ… ಇದೇನು ಮಕ್ಕಳಿಗಾಗಿ ಉಪನ್ಯಾಸಕರ ಕ್ರಾಫ್ಟ್ ಕ್ಲಾಸ್ಸಾ ಅಂತ ಹುಬ್ಬೇರಿಸ್ಬೇಡಿ. ಇದು, ನಾವು ಸತ್ತ ಮೇಲೆ ನಮ್ಮ ದೇಹವನ್ನೇ ದಾನ ಮಾಡ್ತೀವಿ. ನಮಗೊಂದು ಬದುಕು ಕೊಡಿ ಅಂತ ಬೇಡಿಕೊಳ್ತಿರೋ ವಿಧ್ಯೆ ದಾನ ಮಾಡೋ ವಿದ್ಯಾಧಿಪತಿಗಳ ಕಥೆ-ವ್ಯಥೆ..
ಪ್ರತಿ ಶಾಲಾ-ಕಾಲೇಜಿನ ಮುಂದೆ ಜ್ಞಾನ ದೇಗುಲವಿದ್ದು, ಕೈ ಮುಗಿದು ಒಳಗೆ ಬಾ ಎಂದು ಬರೆದಿರ್ತಾರೆ. ಅದು ಓದೋಕಷ್ಟೆ ಚೆಂದ ಅನ್ಸತ್ತೆ. ಆದ್ರೆ, ಆ ದೇಗುಲದ ಒಳಗಿರೋ ವಿದ್ಯಾದೇವತೆಗಳ ಪಾಡು ಮೇಲೆ ಹೇಳಿದ್ದಕ್ಕಿಂತ ವಿಭಿನ್ನವಾಗಿದೆ. ಯಾಕಂದ್ರೆ, ಇವ್ರನ್ನ ನೋಡಿ. ಇವ್ರೆಲ್ಲಾ ಡಿಗ್ರಿ ಕಾಲೇಜು ಉಪನ್ಯಾಸಕರು. ಕೊರೋನಾದ ಅಟ್ಟಹಾಸ, ಸರ್ಕಾರದ ನಿರ್ಲಕ್ಷ್ಯದಿಂದ ಇಂದು ಬೀದಿಯಲ್ಲಿ ತರಕಾರಿ ಮಾರುವ ಸ್ಥಿತಿಗೆ ಬಂದಿದ್ದಾರೆ. ಇವ್ರಷ್ಟೆ ಅಲ್ಲ. ಬಾರ್ ಸಪ್ಲೈಯರ್, ತೋಟದ ಕೂಲಿ, ಡ್ರೈವರ್, ಪೇಂಟರ್ ಸೇರಿದಂತೆ ಡಬಲ್ ಡಿಗ್ರಿ ಪಡೆದೋರು ದಿನಗೂಲಿಗಳಾಗಿದ್ದಾರೆ. ಹಾಗಾಗಿ, ಇಂದು ಚಿಕ್ಕಮಗಳೂರು ಜಿಲ್ಲೆಯ ಅತಿಥಿ ಉಪನ್ಯಾಸಕರು ಜಿಲ್ಲಾ ಕೇಂದ್ರದ ಗಾಂಧಿ ಪ್ರತಿಮೆ ಮುಂದೆ ಧರಣಿಗೆ ಕೂತಿದ್ರು. ನಾವು ಸತ್ತ ಮೇಲೆ ನಮ್ಮ ದೇಹದಾನ ಮಾಡ್ತೀವಿ. ನಮ್ಮ ವೃತ್ತಿಗೊಂದು ಭದ್ರತೆ ಕೊಡಿ ಎಂದು ಸರ್ಕಾರದ ಮುಂದೆ ಮಂಡಿಯೂರಿದ್ದಾರೆ. ಕೋವಿಡ್ ಅವಧಿಯನ್ನ ಸೇವಾವಧಿ ಎಂದು ಪರಿಗಣಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಉಪನ್ಯಾಸಕರ ಪ್ರತಿಭಟನೆಗೆ ತರಕಾರಿ ಮಾರುವ ಉಪನ್ಯಾಸಕರು ಗಾಡಿ ಸಮೇತ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು…
ಜಗತ್ತಿಗೆ ಕೋವಿಡ್ ಕಾಲಿಟ್ಟಾಗಿನಿಂದ ಅತಿಥಿ ಉಪನ್ಯಾಸಕರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಹೇಳೋಕೆ ಲೆಕ್ಚರರ್. ಮಾಡೋದು ಕೂಲಿ ಕೆಲಸ. ತಮ್ಮ ಡಿಗ್ರಿ ಸರ್ಟಿಫಿಕೇಟ್‍ಗಳನ್ನ ಹೇಳಿಕೊಳ್ಳೋಕೆ ನಮಗೇ ಜಿಗುಪ್ಸೆ ಅಂತಿದ್ದಾರೆ ಉಪನ್ಯಾಸಕರು. ಡಬಲ್ ಡಿಗ್ರಿ ಮಾಡಿದ್ದಾರೆ, ಉಪಾನ್ಯಸಕರು ಅಂತ ಮಕ್ಕಳು ಗುರುಗಳೇ ಅಂತಾರೆ, ಪೋಷಕರು ಸರ್ ಅಂತಾರೆ. ಆದ್ರೆ, ಮರ್ಯಾದೆಯಿಂದ ಹೊಟ್ಟೆಯು ತುಂಬಲ್ಲ. ಮರ್ಯಾದೆಯನ್ನ ಮುಚ್ಚಿಕೊಳ್ಳೋಕು ಆಗಲ್ಲ. ಬದುಕಿಗೆ ಭದ್ರತೆ ಬೇಕೆಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಹತ್ತಾರು ವರ್ಷಗಳಿಂದ ಸರ್ಕಾರಕ್ಕೆ ನಾನಾ ರೀತಿ ಬೇಡಿಕೊಂಡಿದ್ದೇವೆ. ಕೊರೋನಾ ಕಾಲದಲ್ಲಿ ನಮ್ಮ ಬದುಕು ಹೇಳತೀರದ ಸ್ಥಿತಿ ತಲುಪಿದೆ. ಹಾಗಾಗಿ, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರೋ ಅತಿಥಿ ಉಪನ್ಯಾಕರು ಕೂಡಲೇ ನಮಗೆ ಸೇವಾ ಭದ್ರತೆ ಒದಗಿಸುವಂತೆ ಸರ್ಕಾರಕ್ಕೆ ಅವಲತ್ತು ತೋಡಿಕೊಂಡಿದ್ದಾರೆ. ಇದೇ ವೇಳೆ, ಅತಿಥಿ ಉಪನ್ಯಾಸಕರಿಗೆ ಸಾಥ್ ನೀಡಿದ ಎಂ.ಎಲ್.ಸಿ. ಭೋಜೇಗೌಡ ಸದನವನ್ನ 10 ದಿನದ ಬದಲು 25 ದಿನ ನಡೆಸಿ, ಶಿಕ್ಷಕರ ಸಮಸ್ಯೆ ಚರ್ಚಿಸೋಣ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ…
ಮಕ್ಕಳು ಅಪ್ಪ ಚಾಕಲೇಟ್ ಅಂದ್ರೆ, ಇಲ್ಲ ಮಗನೇ ನಾಳಿ ಕೊಡುಸ್ತೀನಿ ಅನ್ನುವಂತಹಾ ಪರಿಸ್ಥಿತಿ ನಮ್ಮದು ಎಂದು ಅತಿಥಿ ಉಪನ್ಯಾಸಕರು ಕಣ್ಣೀರಿಟ್ಟಿದ್ದಾರೆ. ಆದ್ರೆ, ಇದೆಲ್ಲಾ ಬಿಗ್ ಸ್ಕಿನ್ ಪೊಲಿಟೀಶಿಯನ್ಸ್ ಗಳಿಗೆ ಅರ್ಥ ಆಗ್ತಿಲ್ಲ. ಎಲ್ಲರೂ ಕಾಲೆಳೆಯೋ ರಾಜಕೀಯದ ಹಾವು-ಏಣಿ ಆಟದಲ್ಲಿ ಮಗ್ನರಾಗಿದ್ದಾರೆ. ಅಧಿಕಾರಿಗಳು-ರಾಜಕಾರಣಿಗಳ ಮಕ್ಕಳಿಗೆ ವಿಧ್ಯೆ ಹೇಳಿಕೊಟ್ಟ ವಿದ್ಯಾಧಿಪತಿಗಳು ಕಣ್ಣೀರಿಡ್ತಿದ್ದಾರೆ. ಇನ್ನಾದ್ರು, ಸರ್ಕಾರ ಇತ್ತ ಗಮನ ಹರಿಸಿ ಆಶ್ವಾಸನೆಯಲ್ಲೇ ಅಂಗೈಲಿ ಆಕಾಶ ತೋರ್ಸೋ ಬದ್ಲು ಕೂಡಲೇ ಅತಿಥಿ ಉಪನ್ಯಾಸಕರಿಗೆ ದಡ ಮುಟ್ಟಿಸಬೇಕೆಂದು ಅತಿಥಿ ಉಪನ್ಯಾಕರು ಆಗ್ರಹಿಸಿದ್ದಾರೆ…

ಸಚಿನ್ ಶೆಟ್ಟಿ, ಚಿಕ್ಕಮಗಳೂರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments